ಪ್ರವಾಹ ಪರಿಸ್ಥಿತಿ ನಿರ್ವಹಣೆಗೆ ಸನ್ನದ್ಧವಾಗಲು ಸೂಚನೆ
ಗದಗ:ಆ.೫: ಜಿಲ್ಲೆಯ ನರಗುಂದ ಭಾಗದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾದರೇ ಪ್ರವಾಹವನ್ನು ಅತ್ಯಂತ ಸಮರ್ಪಕವಾಗಿ ನಿರ್ವಹಣೆ ಮಾಡಬೇಕು. ಆ ನಿಟ್ಟಿನಲ್ಲಿ ತಾಲ್ಲೂಕು ಆಡಳಿತವು ಸರ್ವ ಸನ್ನದ್ಧವಾಗುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಚ್. ಕೆ. ಪಾಟೀಲ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರ, ಲಕಮಾಪುರ, ವಾಸನ ಪ್ರವಾಹ ಪೀಡಿತ ಗ್ರಾಮಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕನ ನಡೆಸಿ ನಂತರ ನರಗುಂದ ನಗರದ ಪ್ರವಾಸಿ ಮಂದಿರದಲ್ಲಿ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರವಾಹ ನಿರ್ವಹಣೆಯಲ್ಲಿ ತಾಲೂಕು ಆಡಳಿತವು ನಿರಂತರವಾಗಿ ಜಿಲ್ಲಾಡಳಿತ ದೊಂದಿಗೆ ಸಂಪರ್ಕದಲ್ಲಿದ್ದು ಪರಸ್ಥಿತಿ ಸಮರ್ಪಕವಾಗಿ ನಿರ್ವಹಿಸಬೇಕು. ಯಾವುದೇ ಕಾರಣಕ್ಕೂ ಇಲಾಖೆ ಅಧಿಕಾರಿಗಳ ನಿಷ್ಕಾಳಜಿ, ವಿಳಂಭ ದೋರಣೆ ಸಹಿಸಲಾಗದು ಎಂದು ಎಚ್ಚರಿಸಿದರು.
ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಮಾತನಾಡಿ, ನರಗುಂದ ತಾಲೂಕಿನ ೮ ಹಾಗೂ ರೋಣ ತಾಲೂಕಿನ ೮ ಗ್ರಾಮಗಳು ಪ್ರವಾಹಕ್ಕೆ ತುತ್ತಾಗುವ ಸಂಭವನೀಯ ಗ್ರಾಮಗಳು ಎಂದು ಗುರುತಿಸಲಾಗಿದೆ. ಈ ಎಲ್ಲ ಗ್ರಾಮಗಳಲ್ಲಿನ ಅಧಿಕಾರಿಗಳಿಗೆ ಪ್ರವಾಹ ಕುರಿತಂತೆ ಮಾಹಿತಿ ಹಂಚಿಕೊಳ್ಳಲು ತಿಳಿಸಿದ್ದು, ಯಾವುದೇ ಅನಾಹುತಕ್ಕೆ ಅವಕಾಶ ನೀಡದಂತೆ ಸೂಕ್ತ ಮುಂಜಾಗ್ರತೆ ವಹಿಸಲು ತಿಳಿಸಲಾಗಿದೆ ಎಂದರು.
ಲಕಮಾಪುರ ಗ್ರಾಮದ ೪ ಕುಟುಂಬಕ್ಕೆ ತಲಾ ೫ ಸಾವಿರದಂತೆ ಪರಿಹಾರ ನೀಡಲಾಗುತ್ತಿದೆ. ಅದೇ ತರಹ ವಿಠಲಾಪುರದ ೧೪ ಕುಟುಂಬಗಳ ೪೦ ಜನರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿತ್ತು. ಆ ಕುಟುಂಬಗಳಿಗೂ ಸಹ ತಲಾ ಐದು ಸಾವಿರ ಪರಿಹಾರ ನೀಡಲಾಗುತ್ತಿದೆ. ಪ್ರತಿ ಕಾಳಜಿ ಕೇಂದ್ರಕ್ಕೂ ಒಬ್ಬ ಅಧಿಕಾರಿಯನ್ನು ನಿಯೋಜಿಸಲಾಗಿದೆ. ನರಗುಂದ ತಾಲ್ಲೂಕಿನಲ್ಲಿ ಮೂರು ಮನೆಗಳು ಹಾನಿಗೀಡಾಗಿವೆ ಅವರಿಗೆ ನಿಯಮಾನುಸಾರ ಪರಿಹಾರ ನೀಡಲಾಗುವದು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಗಳ ಖಾತೆಯಲ್ಲಿ ೯.೫೦ ಕೋಟಿ ಹಾಗೂ ನರಗುಂದ ತಹಶಿಲ್ದಾರರ ಖಾತೆಯಲ್ಲಿ ೬೧.೫೪ ಲಕ್ಷ ಎಸ್.ಡಿ.ಆರ್.ಎಪ್ ಅನುದಾನವು ಮೀಸಲಿದೆ. ಉಳಿದಂತೆ ಎಲ್ಲ ತಹಶಿಲ್ದಾರರ ಖಾತೆಗಳಲ್ಲಿಯೂ ಅನುದಾನ ಇದ್ದು, ಪ್ರವಾಹ ನಿರ್ವಹಣೆಗೆ ಬಳಕೆ ಮಾಡಲಾಗುವು ಎಂದರು.
ಸಭೆಯಲ್ಲಿ ಜಿ.ಪಂ ಮಾಜಿ ಅಧ್ಯಕ್ಷರಾದ ರಾಜುಗೌಡ, ಸಿದ್ದು ಪಾಟೀಲ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಎಸ್, ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿ ಬಿ.ಎಸ್.ನೇಮಗೌಡ, ಉಪವಿಭಾಗಾಧಿಕಾರಿ ಗಂಗಪ್ಪ ಎಂ, ಸೇರಿದಂತೆ ತಹಶಿಲ್ದಾರರು, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ, ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.