ನಿರಾಶ್ರಿತ ಜನರಿಗೆ ಆಸರೆ
ಸಂಜೆವಾಣಿ ವಾರ್ತೆ
ನಂಜನಗೂಡು: ಆ.05:- ಕಪಿಲಾ ನದಿಯ ಪ್ರವಾಹದ ನೀರಿಗೆ ನಂಜನಗೂಡು ಪಟ್ಟಣದ ತಗ್ಗು ಪ್ರದೇಶದ ಜನರು ತತ್ತರಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಶ್ರೀ ನಂಜುಂಡೇಶ್ವರನ ದೇವಾಲಯದ ಹಿಂಬದಿಯಲ್ಲಿರುವ ಒಕ್ಕಲಗೇರಿ, ತೋಪಿನ ಬೀದಿ ಸೇರಿದಂತೆ ಸಾಕಷ್ಟು ಬಡಾವಣೆಗಳಲ್ಲಿ ವಾಸದ ಮನೆಗಳು ಪ್ರವಾಹದ ನೀರಿಗೆ ಮುಳುಗಡೆಯಾಗಿವೆ. ಈಗಾಗಲೇ ಜಿಲ್ಲಾಡಳಿತದ ಆದೇಶದ ಮೇರೆಗೆ ನಂಜನಗೂಡು ತಾಲ್ಲೂಕು ಆಡಳಿತ ಜಾಗೃತರಾಗಿ ಬರೋಬರಿ 250 ಕುಟುಂಬಗಳಿಗೆ ಕಾಳಜಿ ಕೇಂದ್ರವನ್ನು ತೆರೆದು ಮೂರ್ನಾಲ್ಕು ದಿನಗಳಿಂದ ಕಾಳಜಿ ಕೇಂದ್ರಗಳಿಗೆ ಬೇಕಾಗಿರುವ ಎಲ್ಲಾ ಮೂಲಭೂತ ಸೌಲಭ್ಯಗಳು ನೀಡುವುದರ ಜೊತೆಗೆ ಊಟೋಪಚಾರ ನೀಡಿ ಸಂತೈಸುತ್ತಿದ್ದಾರೆ.
ನಂಜನಗೂಡಿನ ತಹಶೀಲ್ದಾರ್ ಶಿವಕುಮಾರ್ ಕಾಸ್ನೂರ್ ರವರ ಕಾಳಜಿಯ ಮೇರೆಗೆ ಸುಮಾರು 250 ಕ್ಕೂ ಹೆಚ್ಚು ಕುಟುಂಬಗಳಿಗೆ ಸಿಎಸ್‍ಆರ್ ಅನುದಾನದಲ್ಲಿ ಜುಬಿಲಿಯಂಟ್ ಭಾರರ್ತೀಯಾ ಫೌಂಡೇಶನ್ ವತಿಯಿಂದ ನಿರಾಶ್ರಿತರಿಗೆ ಬೇಕಾಗಿರುವ ಬೆಡ್ ಶೀಟ್, ಚಾಪೆ, ಟವಲ್, ಶುದ್ಧ ಕುಡಿಯುವ ನೀರಿನ ಎಲೆಕ್ಟ್ರಿಕಲ್ ಯಂತ್ರಗಳು, ಇನ್ನು ಅನೇಕ ಬಳಕೆಗೆ ಬೇಕಾಗಿರುವ ಸಾಮಗ್ರಿಗಳ ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ. ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ಅವರಿಗೆ ಜುಬಿಲಿಯಂಟ್ ಭಾರರ್ತೀಯಾ ಫೌಂಡೇಶನ್ ವ್ಯವಸ್ಥಾಪಕರಾದ ಸುಬ್ರಹ್ಮಣ್ಯ ಅವರು ಹಸ್ತಾಂತರ ಮಾಡಿದರು.
ಬಳಿಕ ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ಮಾತನಾಡಿ, ಕಪಿಲಾ ನದಿ ಪ್ರವಾಹದ ಬಾರಿ ಪ್ರಮಾಣದ ನೀರಿನಿಂದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ನಿವಾಸಿಗಳಿಗೆ ಈಗಾಗಲೇ ಕಾಳಜಿ ಕೇಂದ್ರ ತೆರೆದು, ಅವರಿಗೆ ಬೇಕಾಗಿರುವ ಎಲ್ಲಾ ಸೌಲಭ್ಯಗಳನ್ನು ನೀಡಲು ತಾಲ್ಲೂಕು ಆಡಳಿತ ಮುಂದಾಗಿದೆ. ಕಾರ್ಖಾನೆಗಳಿಂದ ಬರುವ ಸಿಎಸ್‍ಆರ್ ಅನುದಾನಗಳನ್ನು ಬಳಕೆ ಮಾಡಿಕೊಂಡು ಅವರ ಸೇವೆಗೆ ಮುಂದಾಗಿದ್ದೇವೆ ಎಂದು ತಿಳಿಸಿದರು.
ಜುಬಿಲಿಯಂಟ್ ಭಾರರ್ತೀಯಾ ಫೌಂಡೇಶನ್ ವ್ಯವಸ್ಥಾಪಕರಾದ ಸುಬ್ರಹ್ಮಣ್ಯ ಮಾತನಾಡಿ, ಮೂರ್ನಾಲ್ಕು ವರ್ಷಗಳಿಂದ ಪ್ರವಾಹ ಮತ್ತು ಇನ್ನಿತರ ಸಂಕಷ್ಟಗಳ ಸಂದರ್ಭದಲ್ಲಿ ನೊಂದವರ ನೆರವಿಗೆ ಮುಂದಾಗುತ್ತೇವೆ. ಅದರಂತೆ ಈ ಬಾರಿಯೂ ಕೂಡ ನಿರಾಶ್ರಿತರಿಗೆ ಬೇಕಾಗಿರುವ ಬಟ್ಟೆ, ಚಾಪೆ, ಶುದ್ಧ ಕುಡಿಯುವ ನೀರಿನ ಎಲೆಕ್ಟ್ರಿಕಲ್ ಮಿಶಿನ್, ಸೇರಿದಂತೆ ಸಾಕಷ್ಟು ವಸ್ತುಗಳನ್ನು ನೀಡಿದ್ದೇವೆ. ಇದು ನಮ್ಮ ಕಾರ್ಖಾನೆಯ ಜವಾಬ್ದಾರಿಯೂ ಕೂಡ ಹಾಗಿದೆ. ಯಾವಾಗಲೂ ಸಂಕಷ್ಟದ ಜನರಿಗೆ ಆಶ್ರಯ ನೀಡಿ ನೆರವು ನೀಡುವುದೇ ಜುಬಿಲಿಯಂಟ್ ಕಾರ್ಖಾನೆಯ ಆಶಾದಾಯಕ ಕಾರ್ಯವಾಗಿದೆ ಎಂದು ಹೇಳಿದರು.
ಇನ್ನೂ ನಂಜನಗೂಡು ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಿಗೂ ತೆರಳಿ ಕಾಳಜಿ ಕೇಂದ್ರಗಳನ್ನು ತೆರೆದು ಕಂದಾಯ ಮತ್ತು ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳು ನಿರಾಶ್ರಿತರ ಸೇವೆಯಲ್ಲಿ ತಲಿನರಾಗಿದ್ದಾರೆ ಸಂಕಷ್ಟದ ಸಂದರ್ಭದಲ್ಲಿ ನಿರಾಶ್ರಿತರ ಬೆನ್ನಿಗೆ ನಿಂತು ಅವರಿಗೆ ಬೇಕಾಗಿರುವ ಸೌಲಭ್ಯಗಳನ್ನು ಕಲ್ಪಿಸಿ ಕಣ್ಗಾವಲಾಗಿ ನಿಂತಿರುವ ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ಮತ್ತು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜೆರಾಲ್ಡ್ ರಾಜೇಶ್ ರವರ ಕಾರ್ಯಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಜುಬಿಲಿಯಂಟ್ ಭಾರರ್ತೀಯಾ ಫೌಂಡೇಶನ್ ನ ದೀಪಕ್ ಸೇರಿದಂತೆ ಸಿಬ್ಬಂದಿಗಳು ಭಾಗವಹಿಸಿದ್ದರು.