ಆ.9ಕ್ಕೆ ಬೃಹತ್ ಅಹಿಂದ ಸಮಾವೇಶ
ಸಂಜೆವಾಣಿ ನ್ಯೂಸ್
ಮೈಸೂರು: ಆ.05:- ಮುಡಾ ಹಗರಣವನ್ನು ನೆಪವಾಗಿರಿಸಿಕೊಂಡು ಸಿಎಂ ಸಿದ್ದರಾಮಯ್ಯರಿಗೆ ಮಸಿ ಬಳಿಯುವ ಯತ್ನ ಫಲಿಸಲ್ಲ. ಇದಕ್ಕೆ ಪ್ರತಿಯಾಗಿ ಆ.9 ಕ್ಕೆ ಬೃಹತ್ ಅಹಿಂದ ಸಮಾವೇಶ ಮೈಸೂರಲ್ಲಿ ನಡೆಸಲು ಅಹಿಂದ ಸಂಘಟನೆಗಳ ಒಕ್ಕೂಟ ತಿರ್ಮಾನಿಸಿದೆ.
ಸಿದ್ದಾರ್ಥನಗರದಲ್ಲಿರುವ ಕನಕಭವನದಲ್ಲಿ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ, ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ, ಶೋಷಿತ ಸಮುದಾಯಗಳ ಮುಖಂಡರು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಮಾನಿಗಳು ಶೋಷಿತ ಸಮುದಾಯಗಳ ಮುಖಂಡರಾದ ಬಿ.ಸುಬ್ರಹ್ಮಣ್ಯ ಅವರ ನೇತೃತ್ವದಲ್ಲಿ ಮೇಲಿನ ನಿರ್ಣಯ ಕೈಗೊಳ್ಳಲಾಯಿತು.
ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರ ವಿರುದ್ಧ ಕುತಂತ್ರ ಮತ್ತು ಸುಳ್ಳು ಆರೋಪ ಮಾಡುತ್ತಿರುವ ಬಿಜೆಪಿ ಹಾಗೂ ಜೆಡಿಎಸ್ ವಿರುದ್ಧ ಮೈಸೂರು ನಗರದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುವ ಸಲುವಾಗಿ ಸಭೆ ನಡೆಸಲಾಯಿತು.
ಸಭೆ ಬಳಿಕ ಮಾತನಾಡಿದ ಕುರುಬರ ಸಂಘದ ಮಾಜಿ ರಾಜ್ಯಾಧ್ಯಕ್ಷ ಸುಬ್ರಹ್ಮಣ್ಯ ಮಾತನಾಡಿ, ಸಭೆಯಲ್ಲಿ ಆ.9ರಂದು ಮೈಸೂರಿನಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ನಡೆಯುವ ಬೃಹತ್ ಸಮಾವೇಶಕ್ಕೆ ಬೆಂಬಲ ಸೂಚಿಸುವ ನಿರ್ಧಾರ ಕೈಗೊಳ್ಳಲಾಯಿತು.
ಆ.6ರಂದು ಬೆ.10.30ಕ್ಕೆ ಕುರಬಾರಳ್ಳಿ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಬೃಹತ್ ಪಾದಯಾತ್ರೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿಪತ್ರ ಸಲ್ಲಿಸುವ ತೀರ್ಮಾನ ಮಾಡಲಾಯಿತು ಎಂದರು.
ಸಭೆಯಲ್ಲಿ ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ , ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ಜಿಲ್ಲಾಧ್ಯಕ್ಷ ಬಿ.ಜೆ. ವಿಜಯಕುಮಾರ್, ಪ್ರಧಾನ ಕಾರ್ಯದರ್ಶಿ ಎಂ.ಶಿವಣ್ಣ, ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಆಯೂಬ್ ಖಾನ್, ಮಾಜಿ ಮೇಯರ್ ಗಳಾದ ಹಾರೀಫ್ ಹುಸೇನ್, ಪುಷ್ಪಲತಾ ಚಿಕ್ಕಣ್ಣ, ಜಿಪಂ ಮಾಜಿ ಸದಸ್ಯರಾದ ಬೀರಿಹುಂಡಿ ಬಸವಣ್ಣ, ಮಾದೇಗೌಡ, ತಾಪಂ ಮಾಜಿ ಸದಸ್ಯ ಸಿದ್ದೇಗೌಡ, ಪಾಲಿಕೆ ಮಾಜಿ ಸದಸ್ಯ ಗೋಪಿ, ಶ್ರೀನಿವಾಸ ಆಸ್ಪತ್ರೆ ಮಾಲೀಕ ಕೆ.ವೆಂಕಟೇಶ್, ನಗರಪಾಲಿಕೆ ಮಾಜಿ ಸದಸ್ಯ ಕೆ.ವೆಂಕಟೇಶ್ ಸಿದ್ದರಾಮಯ್ಯ ಪರ ಪಕ್ಷ ಹಾಗೂ ಜಾತ್ಯಾತೀತ ಹೋರಾಟದ ನಿಲುವು ವ್ಯಕ್ತಪಡಿಸಿದರು.