ಪ್ರವಾಹ ಸಮಸ್ಯೆ ಗ್ರಾಮಗಳು, ಕಾಳಜಿ ಕೇಂದ್ರಕ್ಕೆ ಲೋಕಸಭಾ ಸದಸ್ಯ ಸುನೀಲ್ ಬೋಸ್ ಭೇಟಿ: ಪರಿಶೀಲನೆ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಆ.05-ಕೊಳ್ಳೇಗಾಲ ತಾಲೂಕಿನ ನದಿ ಪಾತ್ರದ ಪ್ರವಾಹ ಸಮಸ್ಯೆ ಗ್ರಾಮಗಳು ಹಾಗೂ ಪ್ರವಾಹ ಸಂತ್ರಸ್ತರಿಗೆ ತೆರೆಯಲಾಗಿರುವ ಕಾಳಜಿ ಕೇಂದ್ರಕ್ಕೆ ಲೋಕಸಭಾ ಸದಸ್ಯ ಸುನೀಲ್ ಬೋಸ್ ಅವರ ಇಂದು ಭೇಟಿ ನೀಡಿ ವ್ಯಾಪಕವಾಗಿ ಪರಿಶೀಲಿಸಿದರು.
ಕೊಳ್ಳೇಗಾಲ ಪಟ್ಟಣದ ಮಹದೇಶ್ವರ ಕಾಲೇಜು ಬಳಿಯಿರುವ ಹಾಸ್ಟೆಲ್‍ನಲ್ಲಿ ತೆರೆಯಲಾಗಿರುವ ಕಾಳಜಿ ಕೇಂದ್ರಕ್ಕೆ ಭೇಟಿ ಕೊಟ್ಟು ವೀಕ್ಷಿಸಿದರು.ಅಡುಗೆ ಕೋಣೆಗೆ ಭೇಟಿ ನೀಡಿ ದಾಸ್ತಾನು ಮಾಡಲಾಗಿದ್ದ ಆಹಾರ ಧಾನ್ಯ ಇನ್ನಿತರ ಸಾಮಾಗ್ರಿಗಳನ್ನು ಪರಿಶೀಲಿಸಿದರು. ಸಂತ್ರಸ್ತರಿಗೆ ಸಿದ್ದಪಡಿಸಲಾಗಿದ್ದ ಮಧ್ಯಾಹ್ನದ ಊಟ ಪರಿಶೀಲಿಸಿದರು.
ಕಾಳಜಿ ಕೇಂದ್ರದಲ್ಲಿ ಏಷ್ಟು ಮಂದಿ ಆಶ್ರಯ ಪಡೆದಿದ್ದಾರೆ ಎಂಬ ಬಗ್ಗೆ ಮಾಹಿತಿ ಪಡೆದ ಲೋಕಸಭಾ ಸದಸ್ಯರು ಎಲ್ಲ ಅನುಕೂಲಗಳನ್ನು ಪ್ರವಾಹ ಸಂತ್ರಸ್ತರಿಗೆ ಒದಗಿಸಬೇಕು.ಯಾವುದೇ ತೊಂದರೆ ಇಲ್ಲದಂತೆ ಸಂತ್ರಸ್ತರನ್ನು ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕಾಳಜಿ ಕೇಂದ್ರದಲ್ಲಿದ್ದ ಗ್ರಾಮಸ್ಥರ ಅಹವಾಲು ಆಲಿಸಿದ ವೇಳೆ ಗ್ರಾಮಸ್ಥರು ಶಿಥಿಲವಾಗಿರುವ ಹಾಗೂ ಭಾಗಶಃ ಹಾನಿಗೊಳಗಾಗಿರುವ ತಮ್ಮ ಮನೆಗಳನ್ನು ತುರ್ತಾಗಿ ನಿರ್ಮಿಸಿಕೊಡಬೇಕು. ಮಳೆ ಪ್ರವಾಹ ಬಂದಾಗ ನಮ್ಮ ಆತಂಕ ಹೆಚ್ಚಾಗುತ್ತದೆ. ನಮಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಸರ್ಕಾರದ ಮಾರ್ಗಸೂಚಿಗಳನ್ವಯ ಮನೆಗಳ ನಿರ್ಮಾಣ ಮಾಡಿಕೊಡಲಾಗುವುದು. ಅಧಿಕಾರಿಗಳೊಂದಿಗೆ ವಿವರವಾಗಿ ಚರ್ಚಿಸಿ ಅಗತ್ಯ ಕ್ರಮವಹಿಸಲಾಗುವುದು. ವಿಶೇಷ ಪ್ರಕರಣವೆಂದು ಪರಿಗಣಿಸಿ ಸಂತ್ರಸ್ತರಿಗೆ ಸೌಲಭ್ಯ ಕಲ್ಪಿಸಿಕೊಡಲಾಗುವುದು ಎಂದರು.
ಪ್ರವಾಹ ಸಮಸ್ಯೆಯ ದಾಸನಪುರ ಗ್ರಾಮಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ ಅವರು ಗ್ರಾಮಕ್ಕೆ ನೀರು ನುಗ್ಗಿದ ಪರಿಣಾಮ ಹಾನಿಯಾಗಿರುವ ಮನೆಗಳನ್ನು ಪರಿಶೀಲಿಸಿದರು. ಸ್ಥಳೀಯರ ಮನವಿ ಆಲಿಸಿ ಹಾನಿಗೀಡಾದ ಮನೆಗಳ ನಿರ್ಮಾಣ ಸಂಬಂಧ ಕ್ರಮಕೈಗೊಳ್ಳಲು ಲೋಕಸಭಾ ಸದಸ್ಯರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಳಿಕ ಹಳೆ ಅಣಗಳ್ಳಿ, ಹಳೆ ಹಂಪಾಪುರ, ಹರಳೆ, ಮುಳ್ಳೂರು ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿನ ಗ್ರಾಮಸ್ಥರೊಂದಿಗೆ ಪ್ರವಾಹ ಸಮಸ್ಯೆಗಳನ್ನು ಆಲಿಸಿದರು. ಪ್ರವಾಹ ನೀರು ಆವೃತಗೊಂಡು ಹಾನಿಗೀಡಾಗಿರುವ ಬೆಳೆ ವೀಕ್ಷಣೆ ಮಾಡಿದರು. ನೀರು ನುಗ್ಗದಿರಲು ನಿರ್ವಹಿಸಬಹುದಾದ ಕಾಮಗಾರಿ ಸಂಬಂಧ ಅಧಿಕಾರಿಗಳು ಹಾಗೂ ಸ್ಥಳೀಯರೊಂದಿಗೆ ಸಮಾಲೋಚಿಸಿದರು.
ಈ ನಡುವೆ ದಾಸನಪುರ ಕಾವೇರಿ ನದಿ ತಟದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಬಿನಿ ಮತ್ತು ಕೆಆರ್‍ಎಸ್ ಜಲಾಶಯಗಳಿಂದ 2.20 ಲಕ್ಷ ಕ್ಯೂಸೆಕ್ ನೀರನ್ನು ಕಾವೇರಿ ನದಿಗೆ ಹರಿಸಿದ ಹಿನ್ನೆಲೆ ಚಾ.ನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ನಂಜನಗೂಡು, ತಿ.ನರಸೀಪುರ ಹಾಗೂ ಕೊಳ್ಳೇಗಾಲ ತಾಲೂಕಿನ ನದಿ ಪಾತ್ರದಲ್ಲಿ ಪ್ರವಾಹ ಉಂಟಾಗಿದ್ದು, ಆ ವೇಳೆಗೆ ತಾವು ಸಂಸತ್ತಿನ ಅಧಿವೇಶನದಲ್ಲಿ ಭಾಗವಹಿಸಿದ್ದ ಕಾರಣ ತಕ್ಷಣ ಬರಲಾಗಲಿಲ್ಲ. ಈ ನಡುವೆ ಶನಿವಾರ ಮೈಸೂರಿಗೆ ಬಂದು ಅಧಿಕಾರಿಗಳು ನದಿ ಪ್ರವಾಹದ ಪರಿಸ್ಥಿತಿ ನಿಭಾಯಿಸಲು ಮುನ್ನೆಚ್ಚರಿಕೆ ಕ್ರಮವಾಗಿ ಏನೆಲ್ಲ ನಿರ್ವಹಣೆ ಮಾಡಿದ್ದಾರೆ ಎಂಬುದನ್ನು ತಿಳಿದುಕೊಂಡಿದ್ದೇನೆ ಎಂದರು.ಅಂತೆಯೇ, ಪ್ರವಾಹದಲ್ಲಿ ಬೆಳೆ ಹಾಗೂ ಮನೆ ಹಾನಿಗೊಳಗಾದವರಿಗೆ ಸೂಕ್ತ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.
ಕಾವೇರಿ ಪ್ರವಾಹ ಎದುರಾದ ಸಂದರ್ಭದಲ್ಲಿ ನದಿ ಪಾತ್ರದ ಗ್ರಾಮಗಳಿಗೆ ಪ್ರತಿಭಾರಿಯೂ ಬೆಳೆ ಮತ್ತು ಮನೆಗೆ ಹಾನಿಯಾಗುತ್ತಿದೆ. ಮುಂದಿನ ದಿನದಲ್ಲಿ ನದಿ ಪ್ರವಾಹದಿಂದ ಆಗುವ ಅನಾಹುತವನ್ನು ಹೇಗೆ ತಪ್ಪಿಸಬೇಕು ಎಂಬುದರ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿದ್ದೇನೆ. ಆ ಕುರಿತು ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದೊಂದಿಗೆ ಚರ್ಚಿಸುವೆ. ಮುಖ್ಯಮಂತ್ರಿಗಳ ಜೊತೆಯಲ್ಲೂ ಸಮಸ್ಯೆ ಪರಿಹಾರ ಕುರಿತು ಮನವಿ ಮಾಡುವುದಾಗಿ ತಿಳಿಸಿದರು.
ಕಾಡಾ ಅಧ್ಯಕ್ಷÀ ಪಿ. ಮರಿಸ್ವಾಮಿ, ಉಪವಿಭಾಗಾಧಿಕಾರಿ ಮಹೇಶ್, ತಹಶೀಲ್ದಾರ್ ಮಂಜುಳಾ, ಪ್ರಭಾರ ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕಾಧಿಕಾರಿ ಶಿವಪ್ರಕಾಶ್ ಇತರರು ಇದ್ದರು.