ಅಪಾಯದಲ್ಲಿ ಹೂಡಿ ಫ್ಲೈಓವರ್ ದುರಸ್ಥಿಗೆ ಆಗ್ರಹ
ಬೆಂಗಳೂರು.ಸೆ.೩೦- ನಗರದ ಹೂಡಿಯಲ್ಲಿ ರೈಲ್ವೇ ಹಳಿಗೆ ಅಡ್ಡಲಾಗಿ ನಿರ್ಮಿಸಿರುವ ದಶಕದಷ್ಟು ಹಳೆಯದಾದ ಮೇಲ್ಸೇತುವೆಯನ್ನು ತುರ್ತಾಗಿ ದುರಸ್ತಿ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ಫ್ಲೈಓವರ್‌ನ ನಾಲ್ಕು ಬೇರಿಂಗ್‌ಗಳು ವಿಫಲವಾಗಿದ್ದು, ವಾಹನ ಬಳಕೆದಾರರಿಗೆ ಅಪಾಯ ತಂದೊಡ್ಡಿದ್ದು ಆಕ್ರೋಶಕ್ಕೆ ಕಾರಣವಾಗಿದೆ.
ಮೇಲ್ಸೇತುವೆಯನ್ನು ತಕ್ಷಣ ದುರಸ್ತಿ ಮಾಡುವಂತೆ ನೈಋತ್ಯ ರೈಲ್ವೆಗೆ (ಎಸ್‌ಡಬ್ಲ್ಯೂಆರ್) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮನವಿ ಮಾಡಿದೆ. ಅದರಂತೆ, ಇಂದು (ಸೋಮವಾರ) ಫ್ಲೈಓವರ್‌ನ ತಪಾಸಣೆ ನಡೆಯಲಿದೆ. ಬಳಿಕ ಘನ ವಾಹನಗಳನ್ನು ನಿಷೇಧಿಸುವ ಬಗ್ಗೆ ಸಂಚಾರ ಪೊಲೀಸರು ನಿರ್ಧರಿಸುವ ಸಾಧ್ಯತೆಯಿದೆ.
ಐಟಿಪಿಎಲ್ ರಸ್ತೆಯನ್ನು ಅಯ್ಯಪ್ಪನಗರ ಮತ್ತು ವಸತಿ ಕಾಲೋನಿಗಳಿಗೆ ಸಂಪರ್ಕಿಸುವ ಮೇಲ್ಸೇತುವೆಯ ಬೇರಿಂಗ್‌ಗಳ ವೈಫಲ್ಯಗಳ ಬಗ್ಗೆ ಸ್ಥಳೀಯ ನಿವಾಸಿಗಳು ಗಮನ ಸೆಳೆದಿದ್ದರು. ಅದರಂತೆ ಬಿಬಿಎಂಪಿ ಎಂಜಿನಿಯರ್‌ಗಳು ಮತ್ತು ರೈಲ್ವೆ ಅಧಿಕಾರಿಗಳು ಮೇಲ್ಸೇತುವೆಯನ್ನು ಪರಿಶೀಲಿಸಿ ತಾತ್ಕಾಲಿಕ ಪರಿಹಾರವನ್ನು ಒದಗಿಸಿದ್ದಾರೆ ಆದರೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ನಿವಾಸಿಗಳು ಆಗ್ರಹಿಸಿದ್ದಾರೆ.
ಸಮಸ್ಯೆ ಗಂಭೀರವಾಗಿದೆ ಎಂದು ಮಹದೇವಪುರ ಟಾಸ್ಕೊಫೋರ್ಸ್ ಸದಸ್ಯ ಕ್ಲೆಮೆಂಟ್ ಜಯಕುಮಾರ್ ತಿಳಿಸಿರುವುದಾಗಿಯೂ ವರದಿ ಉಲ್ಲೇಖಿಸಿದೆ. ನಾಲ್ಕು ಬೇರಿಂಗ್‌ಗಳು ಸಂಪೂರ್ಣವಾಗಿ ಹಾನಿಗೊಳಗಾಗಿದ್ದು, ಘನ ವಾಹನಗಳ ಸಂಚಾರ ಸ್ಥಗಿತಕ್ಕೆ ಶಿಫಾರಸು ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
ರೈಲ್ವೆ ಮೇಲ್ಸೇತುವೆಯನ್ನು ೨೦೧೪ರಲ್ಲಿ ನೈಋತ್ಯ ರೈಲ್ವೆ ನಿರ್ಮಿಸಿತ್ತು. ದುರಸ್ತಿ ಕಾರ್ಯಕ್ಕೆ ಭಾಗಶಃ ಧನಸಹಾಯ ನೀಡುವುದಾಗಿ ನೈಋತ್ಯ ರೈಲ್ವೆ ಭರವಸೆ ನೀಡಿದೆ ಎಂದು ಬಿಬಿಎಂಪಿ ಕಾರ್ಯನಿರ್ವಾಹಕ ಎಂಜಿನಿಯರ್ ಉದಯ್ ಚೌಗುಲೆ ತಿಳಿಸಿದ್ದಾರೆ.