ಮೃತ ವ್ಯಕ್ತಿಯ ಹೆಸರಿನಲ್ಲಿದ್ದ ಕೋಟ್ಯಾಂತರ ರೂ. ಷೇರು ವಂಚನೆ; ಪ್ರಕರಣ ದಾಖಲು
ಕಾರ್ಕಳ- ಮೃತ ವ್ಯಕ್ತಿಯೊಬ್ಬರ ಹೆಸರಿನಲ್ಲಿದ್ದ ಕೋಟ್ಯಾಂತರ ರೂ. ಷೇರುಗಳನ್ನು ಮಾರಾಟ ಮಾಡಿ ಸ್ವಂತಕ್ಕೆ ಉಪಯೋಗಿಸಿಕೊಂಡು ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಸೆನ್ ಅಪರಾಧ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಅಮೆರಿಕಾದಲ್ಲಿ ನೆಲೆಸಿರುವ ಲಲಿತಾ ರಾವ್ ಅವರ ಪತಿ ಅಶೋಕ್ ಕಾರ್ಕಳದಲ್ಲಿ ವಾಸವಾಗಿದ್ದವರು. ಇವರು ೨೦೨೦ರ ಜು.೧೩ರಂದು ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಕಾರ್ಕಳದಲ್ಲಿ ಸಾವನ್ನಪ್ಪಿದ್ದರು. ಇವರ ಪತ್ನಿ ಮತ್ತು ಮಕ್ಕಳು ಕೋವಿಡ್ ಲಾಕ್‌ಡೌನ್‌ನಿಂದ ಮೃತರ ಅಂತ್ಯಸಂಸ್ಕಾರಕ್ಕೆ ಅಮೆರಿಕಾ ದಿಂದ ಕಾರ್ಕಳಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಅಶೋಕ್‌ರವರ ಅಂತಿಮ ಸಂಸ್ಕಾರವನ್ನು ಮೃತರ ಸಹೋದರನ ಮಗ ನವೀನ್ ನೆರವೇರಿಸಿದ್ದರು.
ಅಶೋಕ್ ಜು.೧೩ರಂದು ಮೃತಪಟ್ಟಿದ್ದರೂ ಮೃತರ ಅಣ್ಣ ಮೋಹನ್‌ರವರ ಮಗ ದಿನೇಶ್ ಎಂಬಾತನು ೨೦೨೦ರ ಜು.೧೫ರಿಂದ ಆ.೧೮ರ ಮಧ್ಯಾವಧಿ ಯಲ್ಲಿ ಮೃತ ಅಶೋಕ್ ಅವರಿಗೆ ಸೇರಿದ ವಿವಿಧ ಕಂಪೆನಿಗಳ ಸೇರಿದ ಒಟ್ಟು ೪,೨೪,೯೦,೫೪೮.೯೦ರೂ. ಮೌಲ್ಯದ ೧೪,೯೭೦ ಪೇರುಗಳನ್ನು ಮೃತರ ಮೊಬೈಲ್ ಸಂಖ್ಯೆ ಮತ್ತು ಈ-ಮೇಲ್ ಐ.ಡಿ ದುರ್ಬಳಕೆ ಮಾಡಿಕೊಂಡು ಮಾರಾಟ ಮಾಡಿರುವುದಾಗಿ ದೂರು ದಾಖಲಾಗಿರುತ್ತದೆ.
ಇವರು ಮೃತರ ಉತ್ತರದಾಯಿತ್ವ ಪ್ರಮಾಣ ಪತ್ರವನ್ನು ಸಂಬಂಧಿಸಿದ ನ್ಯಾಯಾಲಯದಿಂದ ಪಡೆಯದೆ ನಾಮ ನಿರ್ದೇಶನದ ಸುಳ್ಳು ದಾಖಲಾತಿಯನ್ನು ಸೃಷ್ಟಿಸಿ, ದಾಖಲಾತಿಯನ್ನು ನೈಜವಾದುದ್ದೆಂದು ಷೇರು ಬೋಕರ್ ಕಂಪೆನಿ ಮತ್ತು ಬ್ಯಾಂಕಿನ ಉದ್ಯೋಗಿಗಳೊಂದಿಗೆ ಶಾಮೀಲಾಗಿ, ಮೃತರ ಖಾತೆಯಿಂದ ತನ್ನ ಖಾತೆಗೆ ಹಣವನ್ನು ಜಮೆ ಮಾಡಿದ್ದಾರೆ. ಇದರಲ್ಲಿ ೪೧೬೦ ಷೇರುಗಳ ಮಾರಾಟದಿಂದ ಸಂಗ್ರಹವಾದ ಮೋಹನ್ ಹಣವನ್ನು ತನ್ನ ಸ್ವಂತಕ್ಕೆ ಉಪಯೋಗಿಸಿಕೊಂಡು ವಂಚಿಸಿರುವುದಾಗಿ ದೂರಲಾಗಿದೆ.