ಕೆರೆಗೆ ಬಿದ್ದು ಮೂರು ವರ್ಷದ ಬಾಲಕ ಮೃತ್ಯು
ಕಾಸರಗೋಡು-ಕೆರೆಗೆ ಬಿದ್ದು ಮೂರು ವರ್ಷದ ಬಾಲಕ ಮೃತಪಟ್ಟ ಘಟನೆ ಬೆದ್ರಡ್ಕ ಕಂಬಾರ್ ನಲ್ಲಿ ಭಾನುವಾರ ಸಂಜೆ ನಡೆದಿದೆ. ಕಂಬಾರಿನ ನೌಶಾದ್ ರವರ ಪುತ್ರ ಮುಹಮ್ಮದ್ ಸೋಹಾನ್ ಹಬೀಬ್ ಮೃತಪಟ್ಟ ಬಾಲಕ.
ಮನೆಯಂಗಳದಲ್ಲಿ ಆಟವಾಡುತ್ತಿದ್ದ ಮುಹಮ್ಮದ್ ಸೋಹಾನ್ ಹಬೀಬ್ ದಿಢೀರ್ ನಾಪತ್ತೆಯಾಗಿದ್ದಾನೆ. ಈ ವೇಳೆ ಸಂಬಂಧಿಕರು ಮನೆಯೊಳಗೆ ಹಾಗೂ ಪರಿಸರದ ಮನೆಗಳಲ್ಲಿ ಆತನಿಗಾಗಿ ಹುಡುಕಾಟ ನಡೆಸಿದ್ದಾರೆ. ಆದಾಗ್ಯು ಬಾಲಕ ಪತ್ತೆಯಾಗದ ಹಿನ್ನಲೆಯಲ್ಲಿ ಸಂಬಂಧಿಕರು, ಶೋಧ ನಡೆಸಿದಾಗ ಮನೆ ಸಮೀಪದ ೨೦೦ ಮೀಟರ್ ದೂರದ ಕೆರೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.
ಬಾಲಕ ಹಬೀಬ್ ಕೃಷಿಕರಾದ ನೌಶಾದ್ ರವರ ಏಕೈಕ ಪುತ್ರನಾಗಿದ್ದನು. ಕಾಸರಗೋಡು ನಗರ ಠಾಣಾ ಪೊಲೀಸರು ಮಹಜರು ನಡೆಸಿದರು.