ಸಂಘಟನೆ ಬಲವಾಗಿದ್ದರೆ ಮಾತ್ರ ಸೌಲಭ್ಯ ಪಡೆಯಲು ಸಾಧ್ಯ
ಸಂಜೆವಾಣಿ ವಾರ್ತೆ
ದಾವಣಗೆರೆ.ಆ.೫:ಸಂಘಟನೆಗಳು ಬಲವಾಗಿದ್ದರೆ ಮಾತ್ರ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ಸಂಘಟನೆಯಲ್ಲಿ ಒಗ್ಗಟ್ಟು ಪ್ರದರ್ಶಿಸುವ ಮೂಲಕ  ತಮ್ಮ ಬದುಕು ರೂಪಿಸಿಕೊಳ್ಳಬೇಕೆಂದು ಶಾಸಕ ಕೆ.ಎಸ್.ಬಸವಂತಪ್ಪ ಕಿವಿಮಾತು ಹೇಳಿದರು.ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಹೆಬ್ಬಾಳು ಟೋಲ್ ಪ್ಲಾಜ್‌ನಲ್ಲಿ ಭಾನುವಾರ ಆಯೋಜಿಸಿದ್ದ ಭಗತ್‌ಸಿಂಗ್ ಕಾರ್ಮಿಕರ ಹಿತ ರಕ್ಷಣಾ ಸಮಿತಿ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಆಂತರಿಕ ಭಿನ್ನಾಭಿಪ್ರಾಯಗಳಿಂದ ಸಂಘಟನೆಗಳಲ್ಲಿ ಸಾಕಷ್ಟು ಅವಘಡಗಳಿಗೆ ತುತ್ತಾಗುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಇಂತಹ ಅವಘಡಗಳಿಗೆ ತುತ್ತಾಗದೆ ನಿಮ್ಮ ಸಂಘಟನೆ ಬಲಿಷ್ಠಗೊಳಿಸಬೇಕು. ಆ ಮೂಲಕ ನಿಮಗೆ ಸಮಸ್ಯೆಗಳು ಬಂದಾಗ ಒಗ್ಗಟ್ಟಾಗಿ ನಿಂತು ಪರಿಹರಿಸಿಕೊಳ್ಳಬಹುದು ಎಂದರು.ಗುತ್ತಿಗೆದಾರರು ಕಾರ್ಮಿಕರ ಹಿತ ಕಾಯುತ್ತಿಲ್ಲ. ಅವರನ್ನು ಶೋಷಣೆ ಮಾಡಲಾಗುತ್ತದೆ. ಅವರಿಗೆ ಸಕಾಲಕ್ಕೆ ವೇತನ, ಪಿಎಫ್, ಇಎಸ್‌ಐ ಹಣ ಕಟ್ಟದೆ ಹಗಲು ದರೋಡೆ ಮಾಡಲಾಗುತ್ತಿದೆ. ಈ ಬಗ್ಗೆ ಮುಂಗಾರು ಅಧಿವೇಶನದಲ್ಲಿ ಕಾರ್ಮಿಕರ ಪರ ಧ್ವನಿ ಎತ್ತಿ ಹೊರ ಗುತ್ತಿಗೆ ಪದ್ಧತಿ ರದ್ದುಪಡಿಸಿ ಸರ್ಕಾರದಿಂದಲೇ ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ವೇತನ ನೀಡುವ ವ್ಯವಸ್ಥೆ ಕಲ್ಪಿಸಬೇಕೆಂದು  ಒತ್ತಾಯಿಸಿದೆ. ಅದಕ್ಕೆ ಕಾರ್ಮಿಕರು ಸಚಿವರ ಸಕಾರಾತ್ಮಕವಾಗಿ ಸ್ಪಂದಿಸಿ ಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.ರೈತ ಸಂಘದ ರಾಜ್ಯಾಧ್ಯಕ್ಷ (ಹುಚ್ಚವ್ವನಹಳ್ಳಿ ಮಂಜುನಾಥ್ ಬಣ) ಹುಚ್ಚವ್ವನಹಳ್ಳಿ ಮಂಜುನಾಥ್, ಆರ್.ಎಸ್.ಸಿಂಗ್ ಮಾತನಾಡಿ, ಕಾರ್ಮಿಕರು ಸಂಘಟಿತರಾಗಬೇಕು. ಎಲ್ಲಾ ವರ್ಗದ ಕಾರ್ಮಿಕರ ಆರ್ಥಿಕ ಬಲವರ್ಧನೆಗೆ ಸಂಘಟನೆಗಳು ಕೂಡ ಬಲಗೊಳ್ಳಬೇಕಾಗಿದೆ ಎಂದರು.ಈ ಸಂದರ್ಭದಲ್ಲಿ ರಾಣೇಬೆನ್ನೂರು ರೈತ ಸಂಘದ ಮುಖಂಡ ರವೀಂದ್ರನಾಥ್ ಪಟೇಲ್, ಟೋಲ್ ಮುಖ್ಯಸ್ಥ ಚೌದರಿ, ಟೋಲ್ ಸಿಬ್ಬಂದಿಗಳು, ರೈತ ಮುಖಂಡರು, ಭಗತ್ ಸಿಂಗ್ ಕಾರ್ಮಿಕರ ಹಿತ ರಕ್ಷಣಾ ಸಮಿತಿ ಪದಾಧಿಕಾರಿಗಳು, ಗ್ರಾಮಸ್ಥರು ಇದ್ದರು.