ರಾಜ್ಯ- ಜಿಲ್ಲಾ ನಾಯಕರಿಂದ ಲೋಕಸಭಾ ಚುನಾವಣೆಯಲ್ಲಿ ಸೋಲು; ಜಿ.ಎಂ‌ ಸಿದ್ದೇಶ್ವರ್ ಬೇಸರ
ಸಂಜೆವಾಣಿ ವಾರ್ತೆ
ದಾವಣಗೆರೆ.4;  ಜಿಲ್ಲಾ ಬಿಜೆಪಿ ಒಡೆದ ಮನೆಯಾಗಿರೋದು ಸತ್ಯ. ನನ್ನ ಸೋಲಿಗೆ ಯಾರು ಕಾರಣ ಅಂತ ಇಡೀ ರಾಜ್ಯಕ್ಕೆ ಗೊತ್ತಿದ್ದು, ಚುನಾವಣೆ ಸಂದರ್ಭದಲ್ಲಿ ರಾಜ್ಯ ನಾಯಕರು, ಜಿಲ್ಲಾ ನಾಯಕರು ಬಂದು ನಾಟಕ ಮಾಡಿದ್ದರಿಂದ ನನಗೆ ಸೋಲಾಯ್ತು ಎಂದು ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ್ ವಾಗ್ದಾಳಿ ನಡೆಸಿದ್ದಾರೆ. ದಾವಣಗೆರೆಯ ಜಯದೇವವೃತ್ತದ ಬಳಿಯಿರುವ ಶ್ರೀಮತಿ ಗೌರಮ್ಮ ಡಿ.ಎಂ. ಹನಗೋಡಿಮಠ ನರ್ಸರಿ ಹಾಗೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ‌ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ವತಿಯಿಂದ ಹಮ್ಮಿಕೊಂಡಿದ್ದ ಡಾ. ಎ.ಪಿ.ಜೆ.ಅಬ್ದುಲ್ ಕಲಾಂ* ರವರ 9ನೇ ಪುಣ್ಯತಿಥಿಯ ಕಾರ್ಯಕ್ರಮದಲ್ಲಿ ಭಾಗವಹಿಸಿ‌ ನಂತರ‌ ಮಾತನಾಡಿದ ಅವರು ಮಾಜಿ ಸಿಎಂಬಿ.ಎಸ್.ಯಡಿಯೂರಪ್ಪ ಹಾಗೂ ಬಿ.ವೈ.ವಿಜಯೇಂದ್ರ ವಿರುದ್ದವೂ ಕಿಡಿಕಾರಿದ್ದಾರೆ. ರಾಜ್ಯ ನಾಯಕರು ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಬಂದು ನಾಟಕ ಮಾಡಿದರು. ನನಗೆ ಮಾತನಾಡಲು ಕೂಡ ಬಿಡಲಿಲ್ಲಾ, ನಾನು ಮಾತನಾಡಲು ಹೋದರೆ ನನಗೆ ಶ್ ಎಂದು ಬಾಯಿ ಮುಚ್ಚಿಸಿದರಲ್ಲದೇ ಒಂದು ಕಡೆಯ ಮಾತು ಕೇಳಿ ನಮ್ಮ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿದರು ಎಂದು ಆಕ್ರೋಶ ಹೊರ ಹಾಕಿದರು. ನನ್ನ ಹುಟ್ಟುಹಬ್ಬ ಹಾಗೂ ಕೃತಜ್ಞತಾ ಸಮಾರಂಭಕ್ಕೆ ಎಲ್ಲರನ್ನೂ ಆಹ್ವಾನ ಮಾಡಿದ್ದವು ಆದರೆ ಅವರು ಬಂದಿಲ್ಲಾ ಎಂದರು. ಒಟ್ಟಿನಲ್ಲಿ ದಾವಣಗೆರೆ ಜಿಲ್ಲಾ ಬಿಜೆಪಿ ಒಡೆದ ಮನೆಯಾಗಿರೋದು ಸತ್ಯ ಎಂದು ಸ್ವತಂ ಜಿ.ಎಂ.ಸಿದ್ದೇಶ್ವರ್ ಅವರೆ ಒಪ್ಪಿಕೊಂಡಿದ್ದು, ಇದನ್ನು ವರಿಷ್ಟರು ಸರಿ ಪಡಿಸುವ ಕೆಲಸ ಮಾಡುತ್ತಾರಾ ಎಂಬುದು ಬಿಜೆಪಿ ಕಾರ್ಯಕರ್ತರು ಎದುರು ನೋಡುತ್ತಿದ್ದಾರೆ.
