ಕಥೆಯೇ ಚಿತ್ರದ ನಿಜವಾದ ನಾಯಕನಾಗಬೇಕು ; ನಟ ಮೋಹನ್ ಅಭಿಮತ

ಸಂಜೆವಾಣಿ ವಾರ್ತೆ
ದಾವಣಗೆರೆ.ಆ.೫: ವಿಭಿನ್ನ, ವಿಶೇಷ ಕಾರ್ಯಕ್ರಮಗಳಿಂದಲೇ ಕನ್ನಡಿಗರನ್ನು ರಂಜಿಸುತ್ತಲಿರುವ ಕರ್ನಾಟಕದ ನಂಬರ್ ೧ ಮನರಂಜನಾ ವಾಹಿನಿ ಜೀ ಕನ್ನಡದಲ್ಲಿ ಪ್ರಸಾರವಾಗುವ ಶ್ರಾವಣಿ ಸುಬ್ರಹ್ಮಣ್ಯ, ಬ್ರಹ್ಮಗಂಟು ಧಾರಾವಾಹಿಗಳ ಕಲಾವಿದರು ನಗರದ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ವರಮಹಾಲಕ್ಷ್ಮಿ ಉತ್ಸವ ಕಾರ್ಯಕ್ರಮ ನಡೆಸಿಕೊಟ್ಟರು.ಕಾರ್ಯಕ್ರಮದ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಫಿಕ್ಷನ್‌ನ ಸುಶಾಂತ್, ಶ್ರಾವಣಿ ಸುಬ್ರಹ್ಮಣ್ಯ ೧೦೦ನೇ ಹಾಗೂ ಬ್ರಹ್ಮ ಗಂಟು ೪೦ನೇ ಕಂತು ಪ್ರಸಾರವಾಗುತ್ತಿದೆ. ಸಾಮಾನ್ಯವಾಗಿ ರಾತ್ರಿ ೧೦ರ ನಂತರ ಗ್ರಾಮೀಣ ಭಾಗದಲ್ಲಿನ ಪ್ರೇಕ್ಷಕರನ್ನ ಹಿಡಿದಿಟ್ಟುಕೊಳ್ಳುವುದು ಕಷ್ಟ ಎನ್ನುವ ಮಾತಿದೆ. ಆದರೆ, ಬ್ರಹ್ಮಗಂಟು… ಧಾರಾವಾಹಿ ೪೦ ಕಂತುಗಳನ್ನು ಯಶಸ್ವಿಯಾಗಿ ಪೂರೈಸಿರುವುದು ಕಥೆಯ ಗಟ್ಟಿತನ ತೋರಿಸುತ್ತದೆ ಎಂದರು.ಶ್ರಾವಣಿ ಸುಬ್ರಹ್ಮಣ್ಯ… ತಂದೆ ಮತ್ತು ಮಗಳ ಬಾಂಧವ್ಯದ ಕಥೆಯಾದರೆ. ಬ್ರಹ್ಮಗಂಟು ಅಕ್ಕನಿಗಾಗಿ ಏನೆಲ್ಲ ತ್ಯಾಗ ಮಾಡಲಿಕ್ಕೆ ಸಿದ್ಧವಾಗಿರುವ ತಂಗಿಯ ಕಥೆ. ತಂದೆಯ ಪ್ರೀತಿಯ ಸಂಪಾದನೆಗಾಗಿ ಮಗಳು ನಡೆಸುವ ಬಾಂಧವ್ಯ ಹೋರಾಟ ಶ್ರಾವಣಿ ಸುಬ್ರಹ್ಮಣ್ಯ ೧೦೦ ಕಂತು ಪೂರೈಸಿದೆ. ಅಕ್ಕ-ತಂಗಿಯರ ನವಿರಾದ ಕಥೆಯ ಬ್ರಹ್ಮಗಂಟು… ಸಹ ೪೦ ಕಂತು ಕಂಡಿದೆ. ಕನ್ನಡಿಗರು ಎರಡೂ ಧಾರಾವಾಹಿಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು.ಹಿರಿಯ ನಟ ಶಿವಾಜಿರಾವ್ ಮಾತನಾಡಿ, ಜೀವನದಲ್ಲಿ ಒಳ್ಳೆಯದ್ದು ಮತ್ತು ಕೆಟ್ಟದ್ದು ಎರಡೂ ಇರುತ್ತವೆ. ಯಾವು ದನ್ನ ಆಯ್ಕೆ ಮಾಡಿಕೊಳ್ಳಬೇಕು ಎಂಬುದು ನಮ್ಮ ಕೈಯಲ್ಲಿ ಇರುತ್ತದೆ. ಒಳ್ಳೆಯ ಜೊತೆಗೆ ಕೆಟ್ಟದ್ದು ಇರುತ್ತದೆ ಎಂಬ ಕಥೆಗಳ ಆಧಾರದಲ್ಲಿ ಧಾರಾವಾಹಿಗಳ ನಡೆಸಿಕೊಂಡು ಹೋಗಲಾಗುತ್ತದೆ. ನಮ್ಮ ಸುತ್ತಮುತ್ತಲೇ ನಡೆಯುವ ಅನೇಕ ಘಟನೆಗಳನ್ನೇ ಕಥೆಯನ್ನಾಗಿ ಹೆಣೆಯಲಾಗುತ್ತದೆ ಎಂದರು.ನಟಿ ಸಿತಾರಾ ಮಾತನಾಡಿ, ನಾಯಕ ಎಂದರೆ ಖಳನಾಯಕ ಇರಬೇಕು. ಇರುತ್ತಾರೂ ಕೂಡಾ. ಯಾವುದನ್ನ ಆಯ್ಕೆ ಮಾಡಿಕೊಳ್ಳಬೇಕು ಎಂಬುದು ನಮ್ಮ ಕೈಯಲ್ಲಿ ಇರುತ್ತದೆ. ಧಾರಾವಾಹಿಗಳಲ್ಲಿ ಬರೀ ಕೆಟ್ಟದ್ದನ್ನೇ ತೋರಿ ಸುತ್ತಾರೆ ಅನ್ನುವುದಕ್ಕಿಂತಲೂ ಒಳ್ಳೆಯದ್ದನ್ನೂ ತೋರಿಸುತ್ತಾರೆ. ಅದನ್ನೇ ನಾವು ಸ್ವೀಕರಿಸಬೇಕು ಎಂದರು.ಹಿರಿಯ ನಟ ಮೋಹನ್ ಮಾತನಾಡಿ, ಹಿಂದಿನಂತೆ ಜನರಲ್ಲಿ ಸಿನಿಮಾ ಕ್ರೇಜ್ ಇಲ್ಲವಾಗುತ್ತಿದೆ. ಓಟಿಟಿಯಲ್ಲಿ ಚಿತ್ರ ಬಂದೇ ಬರುತ್ತದೆ. ಕೆಲವಾರು ಕೆಟ್ಟ ಚಿತ್ರಗಳ ಕಾರಣಕ್ಕೆ ಜನರು ಚಿತ್ರಮಂದಿರದತ್ತ ಬರದಂತೆ ಆಗಿದೆ. ಕಥೆಯೇ ಚಿತ್ರದ ನಿಜವಾದ ನಾಯಕನಾಗಬೇಕು ಎಂದು ಆಶಿಸಿದರು.