ವಚನಗಳು ಪಚನವಾದರೆ ಮಾನವ ಕುಲಕೋಟಿಗಳು ಉದ್ದರಿಸುತ್ತವೆ
ಸಂಜೆವಾಣಿ ವಾರ್ತೆ
ದಾವಣಗೆರೆ : ತತ್ವ ಸತ್ವ ಮಹತ್ವಗಳ ಸಂಗಮವೇ ವಚನ ಶಾಸ್ತ್ರ ಸಾರ. ವಚನಗಳು ಪಚನವಾದರೆ ಮಾನವ ಕುಲಕೋಟಿಗಳು ಉದ್ದರಿಸುತ್ತವೆ. ವಚನಗಳ ನಿದರ್ಶನಗಳು ನಮಗೆ ದರ್ಶನವಾದರೆ ಮಾನವ ಮಹದೇವನಾಗುತ್ತಾನೆ. ಎಂದು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿದರು. ಆಗಸ್ಟ್ ಐದರಂದು ಜರುಗಲಿರುವ ಸಿದ್ದರಾಮೇಶ್ವರ ದೇವರ 62ನೇ ರಥೋತ್ಸವ ನಿಮಿತ್ತ ವಚನಾಭಿಷೇಕ ಸಮಾರಂಭದ ಪಾವನ ಸಾನಿಧ್ಯವಹಿಸಿಕೊಂಡು ಮಾತನಾಡಿದ್ದ ಪೂಜ್ಯರು ವಚನಗಳ ಮನನ ಮತ್ತು ಸ್ಮರಣ ಪಥದಲ್ಲಿ ಮಾನವ ಸದ್ಗುಣವಂತನಾಗಲು ಸಾಧ್ಯವಿದೆ. ಭಗವಂತನ ಸ್ಮರಣೆಯಿಂದ ಪುಳಕ ರೋಮಾಂಚನವಾಗುತ್ತದೆ. ಭಗವಂತನ ಮಾಟದ ನೋಟದಲ್ಲಿ ಮನಸ್ಸು ಮರೆಯಬೇಕು. ಭಗವಂತನ ನಾಮಸ್ಮರಣೆ ಝಳಕು ಬೆಳಕಾಗಿ ತುಳುಕಬೇಕು. ಸದ್ಗುಣ ನಮ್ಮ ಮನಸ್ಸಿನಲ್ಲಿ ಬೆಳಗಬೇಕು. ವಚನಗಳಿಂದ ಮನುಷ್ಯನ ಅಂತರಂಗದ ಕಣ್ಣನ್ನು ತೆರೆಯಲ್ಪಡುತ್ತದೆ. ಮುಖದಲ್ಲಿ ಶಾಂತಿ ಕಣ್ಣಿನಲ್ಲಿ ಕಾಂತಿ ಬದುಕಿನಲ್ಲಿ ಸಾತ್ವಿಕದ ಕ್ರಾಂತಿ ನಡೆಯಬೇಕು. ವಚನಗಳ ಕಂಪು ನಮ್ಮ ಬದುಕಿನ ತಂಪು, ವಚನಗಳ ಇಂಪು ನಮ್ಮ ಬದುಕು ಸೋಂಪು, ನಮ್ಮ ಬದುಕಿನಲ್ಲಿ ವಚನಗಳ ಗಾಳಿ ಗಂಧ ಪರಿಮಳವು ಹರಡಿಕೊಳ್ಳಬೇಕು. ವಚನಗಳಲ್ಲಿರುವ ಮಹಾದಾಶಯಗಳು ಬದುಕಿನಲ್ಲಿ ಅಳವಡಿಸಿಕೊಂಡರೆ ಮಹಾಮಾನವನಾಗುತ್ತಾನೆ. ವಾಸ್ತವದಲ್ಲಿ ಮನುಷ್ಯನಿಗೆ ಸಮಯ, ವ್ಯವಧಾನ, ಸಹನೆ ಇಲ್ಲದಂತಾಗಿದೆ ಮೌಲ್ಯಗಳನ್ನು ಕಳೆದುಕೊಂಡು ನೀತಿ ಭ್ರಷ್ಟವಾಗಿರುವ ಆಧುನಿಕ ಸಮಾಜದ ಶುದ್ಧೀಕರಣಕ್ಕೆ ಇರುವ ಒಂದೇ ದಾರಿ ವಚನ ಶಾಸ್ತ್ರ ಸಾರ ಕೊಟ್ಟಿರುವ ಬಸವ ಮಾರ್ಗವೆಂದು ತಿಳಿಸಿದರು.