ಸ್ನೇಹ ಒಂದು ಪವಿತ್ರವಾದ ನಂಟು
ಕಲಬುರಗಿ:ಆ.4: ಸ್ನೇಹ ಒಂದು ಪವಿತ್ರವಾದ ನಂಟು. ಇದು ಸಂಬಂಧವನ್ನು ಬೆಸೆಯುವ ಸಾಧನವಾಗಿ ಕಾರ್ಯನಿರ್ವಹಿಸುತ್ತದೆ. ಇದನ್ನು ಬಹು ಎಚ್ಚರಿಕೆಯಿಂದ ಕಾಪಾಡಿಕೊಂಡು ಹೋಗಬೇಕು. ಸ್ವಾರ್ಥಪರ ಚಿಂತನೆ, ಸಂಶಯಗಳು, ಶಾಶ್ವತ ಸ್ನೇಹಕ್ಕೆ ಧಕ್ಕೆ ತರುವ ಅಂಶಗಳು. ದುರಾಭಿಮಾನವು ಸ್ನೇಹದ ಬಿರುಕಿಗೆ ಕಾರಣವಾಗಬಹುದು. ಸ್ವಾರ್ಥ ಹಾಗೂ ವ್ಯವಹಾರಿಕ ಉದ್ದೇಶದ ಸ್ನೇಹ ಅಪಾಯಕಾರಿಯಾಗಿದೆ. ಪ್ರತಿಯೊಬ್ಬರು ಪರಸ್ಪರ ಸ್ನೇಹಭಾವದಿಂದ ಬದುಕಿದರೆ, ಜೀವನ ಸುಗಮವಾಗುತ್ತದೆ ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ ಹೇಳಿದರು.
ಕಮಲಾಪುರ ತಾಲೂಕಿನ ಮಹಾಗಾಂವ ಕ್ರಾಸ್ ಸಮೀಪವಿರುವ ‘ಚಿಗುರು ಮಕ್ಕಳ ಅನಾಥಾಲಯ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಭಾನುವಾರ ಜರುಗಿದ ‘ರಾಷ್ಟ್ರೀಯ ಸ್ನೇಹಿತರ ದಿನಾಚರಣೆ’ಯಲ್ಲಿ ಅವರು ಮಾತನಾಡಿದರು.
ಅನಾಥಾಲಯದ ಮುಖ್ಯಸ್ಥ ಶರಣು ಎ.ಕಮಠಾಣ ಮಾತನಾಡಿ, ಪರಸ್ಪರ ನಂಬಿಕೆ, ಪ್ರೀತಿ, ಅನ್ಯೋನ್ಯತೆ ಮತ್ತು ಆತ್ಮೀಯತೆ ಇವು ಶಾಶ್ವತ ಸ್ನೇಹತೆಗೆ ಪೂರಕವಾಗುವ ಅಂಶಗಳು. ಪರಸ್ಪರ ಮುಕ್ತ ಮನಸ್ಸಿನ ಚರ್ಚೆ ಮಾಡುವುದರಿಂದ ಉತ್ತಮ ಪರಿಹಾರ ಕಂಡುಕೊಳ್ಳಬಹುದು. ಉತ್ತಮ ಸ್ನೇಹಿತ, ಉತ್ತಮ ಮಾರ್ಗದರ್ಶಿಯಾಗುತ್ತಾನೆ. ಸ್ನೇಹಿತರು ಸುಖ-ದುಃಖಗಳಲ್ಲಿ ಸಮಭಾಗಿಯಾಗಿ ಪಾಲ್ಗೊಳ್ಳುವಿಕೆ, ಪರಸ್ಪರ ಯಶಸ್ಸಿಗೆ ಶ್ರಮಿಸುವುದು ಉತ್ತಮ ಮತ್ತು ಶಾಶ್ವತ ಸ್ನೇಹತೆಯನ್ನು ಕಾಪಾಡುವ ಒಂದು ಕೌಶಲವಾಗಿದೆ ಎಂದರು.
ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಕಾಮಣ್ಣ ಮದಗುಂಡೆ, ಶಿವಪುತ್ರ ಬೆಣ್ಣುರ ಸೇರಿದಂತೆ ಇನ್ನಿತರರಿದ್ದರು.