ಮಿಶ್ರ ಬೆಳೆಯಿಂದ ರೈತರಿಗೆ ಅನುಕೂಲ
ಕಲಬುರಗಿ:ಆ.4: ರೈತರು ಯಾವುದಾದರೂ ಒಂದೇ ಬೆಳೆಯ ಮೇಲೆ ಸಂಪೂರ್ಣವಾಗಿ ಅವಲಂಬನೆಯಾಗುವುದು ಬೇಡ. ಇದರಿಂದ ಪೋಷಕಾಂಶಗಳ ಕೊರತೆಯಾಗುತ್ತದೆ. ಮಿಶ್ರ ಬೆಳೆಯಿಂದ ಒಂದು ಬೆಳೆ ನಷ್ಟ ಅನುಭವಿಸಿದರೆ, ಮತ್ತೊಂದು ಇಳುವರಿಯಾದರು ಪಡೆಯಲು ಸಾಧ್ಯವಾಗುತ್ತದೆ. ಇದರಿಂದ ರೈತರಿಗೆ ಅನಕೂಲವಾಗುತ್ತದೆ ಎಂದು ನಿವೃತ್ತ ಕೃಷಿ ಅಧಿಕಾರಿ ಶಿವಯೋಗೆಪ್ಪಾ ಎಸ್.ಬಿರಾದಾರ ಸಲಹೆ ನೀಡಿದರು.
ಕಾಳಗಿ ತಾಲೂಕಿನ ಕನ್ನಡಗಿ ಮಲ್ಲಿಕಾರ್ಜುನ ದೇವಸ್ಥಾನದ ಸಮೀಪವಿರುವ ಹೊಲಕ್ಕೆ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದಿ ಹೆಸರು ಮತ್ತು ತೊಗರಿ ಮಿಶ್ರ ಬೆಳೆಯ ಹೊಲಕ್ಕೆ ಕ್ಷೇತ್ರ ಭೇಟಿ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಕೃಷಿ ಮತ್ತು ರೈತ ದೇಶದ ಬೆನ್ನೆಲುಬು. ಜಗತ್ತಿಗೆ ಅನ್ನವನ್ನು ನೀಡಿ ಬದುಕಿಸುವ ರೈತ ತನ್ನ ಕಾಯಕದಿಂದ ದೂರ ಸರಿದರೆ ದೇಶಕ್ಕೆ ಆಪತ್ತು ತಪ್ಪಿದ್ದಲ್ಲ. ಯುವಕರು ನೌಕರಿ, ಉದ್ಯಮದತ್ತಲೇ ಮುಖ ಮಾಡುವುದರ ಬದಲಿಗೆ ಕೃಷಿಯಲ್ಲಿ ತೊಡಗಿ, ಹೊಸ ತಂತ್ರಜ್ಞಾನಗಳ ಬಳಕೆಯೊಂದಿಗೆ ಹೆಚ್ಚಿನ ಇಳುವರಿ ಪಡೆದು, ಉತ್ತಮ ಬೆಲೆಗೆ ಮಾರಾಟ ಮಾಡಿ ಕೃಷಿಯನ್ನು ಉದ್ಯಮವನ್ನಾಗಿಸುವುದು ಇಂದಿನ ಅಗತ್ಯವಾಗಿದೆ ಎಂದರು.
ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ.ಪಾಟೀಲ, ಪ್ರಮುಖರಾದ ಜಗನಾಥ ಬರ್ಮಾ, ಮಹೇಶ ಕಲ್ಲೂರ ಸೇರಿದಂತೆ ಇನ್ನಿತರರಿದ್ದರು.