ಪೋಲೀಸ್ ಪಬ್ಲಿಕ್ ಶಾಲೆಯಲ್ಲಿ
ಕಾರ್ಗಿಲ್ ವಿಜಯೋತ್ಸವ
ಸಂಜೆವಾಣಿ ವಾರ್ತೆ
ದಾವಣಗೆರೆ. 4; ಯೋಧರ ತ್ಯಾಗ ಬಲಿದಾನವನ್ನು ಸ್ಮರಿಸುವ ಹಾಗೂ ಅವರ ಶೌರ್ಯ ಸಾಹಸಕ್ಕೆ ಗೌರವ ಸಲ್ಲಿಸುವ ಉದ್ದೇಶದೊಂದಿಗೆ ಕಾರ್ಗಿಲ್ ವಿಜಯೋತ್ಸವ ದಿನವನ್ನು ನಗರದ ಪೊಲೀಸ್ ಪಬ್ಲಿಕ್ ಶಾಲೆಯಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.ವಿಶೇಷ ಆಹ್ವಾನಿತರಾಗಿ ಬಂದಿದ್ದ ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾದ ಬಸವರಾಜ್ ಬಾಗೇವಾಡಿಯವರು ಕಾರ್ಗಿಲ್ ಯುದ್ಧದಲ್ಲಿ ಮಡಿದ ಯೋಧರ ಸ್ಮರಣೆ ಮಾಡಿಕೊಂಡು ಯೋಧರ ಬಲಿದಾನದಿಂದಾಗಿ ನಾವು ಇಂದು ನೆಮ್ಮದಿಯ ಜೀವನ ನಡೆಸುತ್ತಿದ್ದೇವೆ. ಮಕ್ಕಳು ದೇಶಾಭಿಮಾನ ದೇಶಭಕ್ತಿ ಮೂಡಿಸಿಕೊಳ್ಳಬೇಕು ಎಂಬ ಕಿವಿ ಮಾತನ್ನು ಹೇಳಿದರು. ಮಕ್ಕಳ ಪ್ರಶ್ನೆಗೆ ಉತ್ತರಿಸುತ್ತಾ ಅವರು ತಮ್ಮ ಕಾರ್ಯ ವೈಖರಿ ಹಾಗೂ ಯುದ್ಧದ ಸನ್ನಿವೇಶದ ಬಗ್ಗೆ ಮಕ್ಕಳೊಂದಿಗೆ ಹಂಚಿಕೊಂಡರು.ಇನ್ನೋರ್ವ ಅತಿಥಿಗಳಾಗಿ ಆಗಮಿಸಿದ್ದ ಜಗದೀಶ್ ಶೀಗೇ ಹಳ್ಳಿಯವರು ಕಾರ್ಗಿಲ್ ಯುದ್ಧದ ಸನ್ನಿವೇಶವನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಂಜಪ್ಪ ಕೆ ಎಸ್ ರವರು ಯುದ್ಧ ಭೂಮಿಯಲ್ಲಿ ತಾವು ಅನುಭವಿಸಿದ ಕಷ್ಟದ ದಿನಗಳ ಬಗ್ಗೆ ಮಕ್ಕಳಿಗೆ ತಿಳಿಸಿದರು. ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಿ ದಂತಹ ಯೋಧರು  ತಮಗೆ ನೀಡಲಾಗುವ ತರಬೇತಿ,ಅಲ್ಲಿ ತಾವು ಅನುಭವಿಸಿದ ಕಷ್ಟದ ದಿನಗಳು ಬಗ್ಗೆ ತಿಳಿಸಿ ಯೋಧರ ಬಗ್ಗೆ ಮಕ್ಕಳಲ್ಲಿ ಹೆಮ್ಮೆ ಮೂಡುವಂತೆ ಮಾಡಿದರು. ವಿಶೇಷ  ಆಹ್ವಾನಿತರಾಗಿದ್ದ ಮಹೇಶ್ ಪಾಟೀಲ್ ಆರ್ ಎಸ್ ಐ, ಡಿ ಎ ಆರ್ ದಾವಣಗೆರೆ ಮಾತನಾಡಿ ಸೈನಿಕರ ತ್ಯಾಗ, ಶೌರ್ಯ, ಸಮರ್ಪಣಾಭಾವ, ದೇಶಭಕ್ತಿ ಮತ್ತು ಬಲಿದಾನಗಳು ನಮ್ಮೆಲ್ಲರ    ಆದರ್ಶವಾಗಬೇಕೆಂದು ತಿಳಿಸಿದರು. ದೇಶಕ್ಕಾಗಿ ಮಡಿದ ಎಲ್ಲಾ ಯೋಧರಿಗೆ ನುಡಿ ನಮನವನ್ನು ಸಲ್ಲಿಸಿದರು.ಶಾಲೆಯ ವಿದ್ಯಾರ್ಥಿಗಳು ದೇಶಭಕ್ತಿ   ಗೀತಗಾಯನ ಮತ್ತು ನೃತ್ಯಗಳ ಮೂಲಕ ಕಾರ್ಗಿಲ್ ಧೀರಯೋಧರನ್ನು ನೆನೆದರು. ಪ್ರಾಂಶುಪಾಲ ಯತೀಶ್ ಎಚ್‌ವಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಶಿಕ್ಷಕಿಯರಾದ ಮಂಜುಳಾ ಮಾಗೋಡ್ ಹಾಗೂ ಅರ್ಷಿಯ ಅವರು ಕಾರ್ಯಕ್ರಮದ ಆಯೋಜನೆಯನ್ನು ಮಾಡಿದ್ದರು. 7ನೇ ತರಗತಿಯ ಪ್ರಣವ್ ಹಾಗೂ ಭುವನಾ ಕಾರ್ಯಕ್ರಮವನ್ನು ನಿರೂಪಿಸಿದರು ಸಾನ್ವಿ ಸ್ವಾಗತಿಸಿದರು. ಚೇತನ್ ಕೆ ಎಂ ವಂದಿಸಿದರು.
.