ಪರಿಪೂರ್ಣತೆಯೆಡೆಗೆ ಕರೆದೊಯ್ಯುವುದೇ ನಿಜವಾದ ಧರ್ಮ; ಶ್ರೀ ರಂಭಾಪುರಿ ಜಗದ್ಗುರು
ಸಂಜೆವಾಣಿ ವಾರ್ತೆ
ದಾವಣಗೆರೆ.ಆ.4; ಸಮಸ್ತ ಜನರ ಭೋಗ ಮೋಕ್ಷಗಳಿಗೆ ಧರ್ಮವೇ ಮೂಲ. ಸತ್ಯ ಮತ್ತು ಪ್ರಾಮಾಣಿಕತೆಗಿಂತ ಮಿಗಿಲಾದ ಧರ್ಮ ಇನ್ನೊಂದಿಲ್ಲ. ಮನುಷ್ಯನನ್ನು ಪರಿಪೂರ್ಣದೆಡೆಗೆ ಕರೆದೊಯ್ಯುವುದೇ ನಿಜವಾದ ಧರ್ಮವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. ಅವರು  ನಗರದ ಶ್ರೀ ರಂಭಾಪುರಿ ಜಗದ್ಗುರು ವೀರಗಂಗಾಧರ ಮಂಗಲ ಭವನದಲ್ಲಿ ಜರುಗಿದ ಆಷಾಢ ಮಾಸದ ಇಷ್ಟಲಿಂಗ ಮಹಾಪೂಜಾ ಹಾಗೂ ಜನಜಾಗೃತಿ ಧರ್ಮ ಸಮಾವೇಶದ ೨ನೇ ದಿನದ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.ಭೌತಿಕ ಬದುಕು ಸುಖ ದು:ಖಗಳಿಂದ ಕೂಡಿದೆ. ಯಾವುದೂ ಶಾಶ್ವತವಲ್ಲ. ಸುಖ ಬಂದಾಗ ಹಿಗ್ಗದೇ ಕಷ್ಟ ಬಂದಾಗ ಕುಗ್ಗದೇ ಸಮತೋಲನದಿಂದ ಬಾಳುವುದು ಮನುಷ್ಯನ ಧ್ಯೇಯವಾಗಬೇಕು. ಮನುಷ್ಯನಲ್ಲಿರುವ ಅಸುರೀ ಗುಣಗಳು ನಾಶಗೊಂಡು ದೈವೀ ಗುಣಗಳು ಪ್ರಾಪ್ತವಾಗಲು ಸಜ್ಜನರ ಒಡನಾಟದಲ್ಲಿ ಬಾಳುವುದು ಶ್ರೇಯಸ್ಕರ. ಅಂತರAಗ ಬಹಿರಂಗ ಶುದ್ಧಗೊಳ್ಳಬೇಕೆಂಬ ವೀರಶೈವ ಧರ್ಮದ ಧ್ವನಿ ಅರ್ಥಪೂರ್ಣವಾದುದು. ಇವೆರಡೂ ಪರಿಶುದ್ಧ ಗೊಳಗೊಳ್ಳಲು ಶ್ರೀ ಗುರುವಿನ ಸಂಸ್ಕಾರ ಪಡೆದು ಸನ್ಮಾರ್ಗದಲ್ಲಿ ಸಾಗಿದರೆ ಜೀವನ ಸಾರ್ಥಕಗೊಳ್ಳುವುದು. ಶ್ರೀ ಜಗದ್ಗುರು ರೇಣುಕಾಚಾರ್ಯರು ಜೀವನ ಸಿದ್ಧಾಂತದ ಮೌಲ್ಯಗಳನ್ನು ಪ್ರತಿಪಾದಿಸಿ ಜೀವ ಸಂಕುಲಕ್ಕೆ ಮಾರ್ಗದರ್ಶನ ನೀಡಿದ್ದಾರೆ ಎಂದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ ದಾವಣಗೆರೆ-ಹರಿಹರ ಅರ್ಬನ್ ಬ್ಯಾಂಕ ಅಧ್ಯಕ್ಷ ಎನ್.ಎ.ಮುರುಗೇಶ ಮಾತನಾಡಿ ಹುಟ್ಟಿದ ಮನುಷ್ಯನಿಗೆ ಮರಣ ತಪ್ಪಿದ್ದಲ್ಲ. ಹುಟ್ಟು ಸಾವುಗಳ ಮಧ್ಯೆ ಬರುವ ಬಾಳಿನ ಪುಟಗಳನ್ನುಸಮೃದ್ಧಗೊಳಿಸಿಕೊಳ್ಳಬೇಕಾದುದು ಅವರವರ ಜವಾಬ್ದಾರಿಯಾಗಿದೆ. ಮಾನವೀಯ ಸಂಬAಧಗಳನ್ನು ಮಧುರಗೊಳಿಸಲು ಆಧ್ಯಾತ್ಮ ಜ್ಞಾನದ ಅವಶ್ಯಕತೆಯಿದೆ. ಶ್ರೀ ರಂಭಾಪುರಿ ಪೀಠದ ಆದರ್ಶ ಚಿಂತನಗಳು ನಮ್ಮೆಲ್ಲರ ಬಾಳ ಬದುಕಿಗೆ ಸ್ಫೂರ್ತಿಯಾಗಿವೆ ಎಂದರು.