ಶಿಲ್ಪಕಲೆಯ ಜೊತೆಗೆ ಚರಕದ ಕಲೆಯನ್ನು ಬೆಳಕಿಗೆ ತರಬೇಕು.
ಸಂಜೆವಾಣಿ ವಾರ್ತೆ
ಚಿತ್ರದುರ್ಗ.4: ಕಲ್ಲಿನಿಂದ ಕೆತ್ತನೆ ಮಾಡುವಂತಹ ಶಿಲ್ಪಿಗಳು ಸಹ ಮರದ ಕೆತ್ತನೆಯಲ್ಲಿ ಪ್ರಾವೀಣ್ಯತೆಯನ್ನು ಹೊಂದಿರುತ್ತಾರೆ, ಕಲ್ಲಿನಲ್ಲಿ ಹೂವನ್ನು ಅರಳಿಸಿದಂತೆ ಕಲ್ಲಿನಲ್ಲೂ ಸಹ ಚರಕ ಕೆತ್ತಿ ಕೊಡಬಲ್ಲೆವು ಎಂದು ಶಿಲ್ಪಿಗಳು ಮಾತನಾಡುವುದನ್ನು ಕಂಡರೆ, ಪ್ರತಿಯೊಬ್ಬರಿಗೂ ಸಹ ನಮ್ಮ ಭಾರತೀಯ ಸಂಸ್ಕೃತಿ ಕಲೆಯ ಬಗ್ಗೆ ಅಭಿಮಾನ ಮೂಡುವುದು, ಇಂತಹ ಶಿಲ್ಪಿಗಳನ್ನ ಬಳಸಿಕೊಂಡು ಕಲಾತ್ಮಕವಾದ ಚರಕಗಳನ್ನ ಕಲ್ಲಿನಿಂದನೆ ಕೆತ್ತನೆಗೊಳಿಸಿ, ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪನೆ ಮಾಡಿ, ಜನರಲ್ಲಿ ಸ್ವತಂತ್ರ ಸಂಗ್ರಾಮದಲ್ಲಿ ಬಳಕೆಯಾದ ಚರಕದ ಮಹತ್ವವನ್ನ ಅರಿವಿಗೆ ತಂದು ಕೊಡಬೇಕು ಎಂದು  ಕರ್ನಾಟಕ ಜ್ಞಾನ-ವಿಜ್ಞಾನ ಸಮಿತಿ ಮತ್ತು ಕರ್ನಾಟಕ ಸರ್ವೋದಯ ಮಂಡಳಿಯ ಜಿಲ್ಲಾಧ್ಯಕ್ಷರಾದ ಡಾ. ಎಚ್. ಕೆ. ಎಸ್. ಸ್ವಾಮಿಯವರು ವಿನಂತಿಸಿಕೊಂಡಿದ್ದಾರೆ.ಬಹಳಷ್ಟು ಸಾರ್ವಜನಿಕ ಸ್ಥಳಗಳಲ್ಲಿ, ಪಾರ್ಕ್ಗಳಲ್ಲಿ, ಸರ್ಕಲ್‌ಗಳಲ್ಲಿ, ಪ್ರತಿಮೆಗಳನ್ನ ಕಲ್ಲಿನಿಂದ ಅಥವಾ ಲೋಹದಿಂದ ಕೆತ್ತನೆ ಮಾಡಿ ಪ್ರತಿಷ್ಠಾಪನೆ ಮಾಡಿರುವ ದೃಶ್ಯವನ್ನ ಎಲ್ಲ ಕಡೆ ನಾವು ನೋಡಬಹುದು. ಅದೇ ಶಿಲ್ಪಿಗಳ ಸಹಾಯದಿಂದ, ಚರಕವನ್ನು ಸಹ ಕಲ್ಲಿನಿಂದಲೇ ಕೆತ್ತಿ, ತಿರುಗುವಂತೆಯೂ ಸಹ ಮಾಡಿ, ಸಾರ್ವಜನಿಕ ಸ್ಥಳಗಳಲ್ಲಿ ಇಟ್ಟು, ಜನರಲ್ಲಿ ಚರಕದ ಬಗ್ಗೆ ಅಭಿಮಾನ ಮೂಡಿಸುವಂತಹ ಕೆಲಸ ಮಾಡಿಕೊಳ್ಳಲು ಶಿಲ್ಪಿಗಳು ಸಿದ್ದರಾಗಿದ್ದಾರೆ. ಅವರಿಗೆ ನಾವು ಪ್ರೋತ್ಸಾಹವನ್ನು ನೀಡಿ, ಹಣದ ಸಹಾಯವನ್ನು ಕಲ್ಪಿಸಿಕೊಟ್ಟರೆ, ಇಂತಹ ಒಂದು ಪ್ರಯೋಗವನ್ನು ಮಾಡಲು ಅವರು ತಯಾರಾಗಿದ್ದಾರೆ ಎಂದು ತಿಳಿಸಿದ್ದಾರೆ.ಪ್ರತಿ ಶಿಲ್ಪಿಗೂ ಸಹ ಯಾವುದಾದರೂ ಒಂದು ಹೊಸ ಚಟುವಟಿಕೆಯನ್ನು ಮಾಡಬೇಕೆಂಬ ಉತ್ಸಾಹದಲ್ಲಿ ಇರುತ್ತಾರೆ, ಅಂತಹ ಶಿಲ್ಪಿಗಳಿಗೆ ಚರಕ ಮಾಡುವುದು ಒಂದು ಸುವರ್ಣವಾದ ಅವಕಾಶವಾಗಿರುತ್ತದೆ. ಸಾಮಾನ್ಯವಾಗಿ ಗಾಂಧಿ ವೃತ್ತದ ಬಳಿ, ಇಂತಹ ಕಲ್ಲಿನಿಂದ ಕೆತ್ತಿದಂತಹ ಚರಕಗಳನ್ನು ಪ್ರತಿಷ್ಠಾಪನೆ ಮಾಡಿ, ಅವುಗಳ ಜನಜಾಗೃತಿಗಾಗಿ ಬಳಸಿಕೊಳ್ಳಬೇಕು ಎಂದಿದ್ದಾರೆ.ಭೂಮಿಯ ಕೆಳಗಿನಿಂದ ಕಲ್ಲು ತೆಗೆದು, ಅವುಗಳನ್ನ ಸಾಗಾಣಿಕೆ ಮಾಡಿ, ಕೆತ್ತನೆ ಮಾಡಿ, ಅದಕ್ಕೊಂದು ರೂಪ ನೀಡುವಂತಹ ಶಿಲ್ಪಿಗಳು, ಈಗ ಯಂತ್ರಗಳಿಂದ ಶಿಲ್ಪಗಳನ್ನ ತಯಾರು ಮಾಡುತ್ತಿರುವುದರಿಂದ ಸಂಕಷ್ಟಕ್ಕೀಡಾಗಿದ್ದಾರೆ. ಶಿಲ್ಪಿಗಳಿಗೂ ಸಹ ಕೈಕಾಲುಗಳನ್ನ ಬಳಸುವುದಕ್ಕೆ ಅವಕಾಶ ನೀಡದಂತೆ, ಯಂತ್ರಗಳಿಂದ ವಿಗ್ರಹಗಳನ್ನು ಕೆತ್ತನೆ ಮಾಡಿ, ವೇಗವಾಗಿ ವಿಗ್ರಹಗಳನ್ನ ಕತ್ತರಿಸಿ, ದೇವಸ್ಥಾನಗಳಲ್ಲಿ, ಕಟ್ಟಡಗಳಲ್ಲಿ, ಪ್ರತಿಷ್ಠಾಪನೆ ಮಾಡುತ್ತಿರುವುದರಿಂದ, ಕೈಕಾಲುಗಳಿಂದ ದುಡಿಯುತ್ತಿರುವ ಶಿಲ್ಪಿಗಳಿಗೆ ನಿರುದ್ಯೋಗ ಸಮಸ್ಯೆ, ಬಡತನ, ಶೋಷಣೆ, ಕುಟುಂಬ ನಿರ್ವಹಣೆಗೆ ಕಷ್ಟಕರವಾದ ದಿನಗಳು ನಿರ್ಮಾಣವಾಗಿದೆ. ಎರಡರಿಂದ ಮೂರು ತಿಂಗಳು ಸಮಯ ತೆಗೆದುಕೊಂಡು ಶಿಲ್ಪಗಳನ್ನು ಕೆತ್ತುತ್ತಿದ್ದಂತಹ ಶಿಲ್ಪಿಗಳಿಗೆ, ಈಗ ಕೇವಲ ವಾರದಲ್ಲಿ ಶಿಲ್ಪಗಳನ್ನು ಕೆತ್ತನೆ ಮಾಡಿ ಕೊಡುವಂತಹ ಯಂತ್ರಗಳ ಅನುಷ್ಠಾನವಾಗುತ್ತಿದೆ. ಚರಕದ ಸಂದೇಶ ಕೈಕಾಲುಗಳನ್ನು ದುಡಿಮೆಗೆ ಬಳಸಿಕೊಳ್ಳಬೇಕು ಎಂಬುದೇ ಆಗಿದೆ. ಎಷ್ಟೇ ದೊಡ್ಡ ಯಂತ್ರಗಳು ಬಂದರೂ ಸಹ, ಮಾನವನ ಕೈಕಾಲುಗಳನ್ನು ನಿಸ್ತೇಜನಗೊಳಿಸಬಾರದು ಎಂದು ಗಾಂಧೀಜಿಯವರು ಸ್ವತಂತ್ರ ಪೂರ್ವದಲ್ಲಿ ತಮ್ಮ ಅಭಿಪ್ರಾಯಗಳನ್ನ ವ್ಯಕ್ತಪಡಿಸಿದ್ದರು. ಅದೇ ಯಂತ್ರಗಳ ಸಹಾಯದಿಂದ ಇಂದು ವಿಗ್ರಹಗಳ ಕೆತ್ತನೆ, ದೇವಸ್ಥಾನಗಳ ಕೆತ್ತನೆ ಹೆಚ್ಚಾಗುತ್ತಿರುವುದರಿಂದ ಕೈಕಾಲುಗಳಿಂದ ದುಡಿಯುತ್ತಿರುವ ಶಿಲ್ಪಿಗಳಿಗೆ ಅವಕಾಶಗಳು ಕಡಿಮೆಯಾಗುತ್ತಿದೆ ಎಂದಿದ್ದಾರೆ.
