ಬೊಯಕೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ;’ಜತ್ರೋಫ” ಬೀಜ ತಿಂದ 8 ಮಕ್ಕಳು ಅಸ್ವಸ್ಥ : ಬಳ್ಳಾರಿ ವಿಮ್ಸ್ ಗೆ ದಾಖಲು
ಸಂಜೆವಾಣಿ ವಾರ್ತೆ
ಸಿರುಗುಪ್ಪ:ಅ,4- ತಾಲ್ಲೂಕಿನ ತೆಕ್ಕಲಕೋಟೆ ಪಟ್ಟಣದ ವಾಲ್ಮೀಕಿ ನಗರದ ಬೊಯಕೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಜತ್ರೋಫ (ಜಪುರ) ಬೀಜ ತಿಂದು ಅಸ್ವಸ್ಥಗೊಂಡ ಘಟನೆ  ನಡೆದಿದೆ.
 6 ರಿಂದ 11 ವಯೋಮಾನದ ಮಕ್ಕಳು ಜತ್ರೋಫ (ಡೀಸೆಲ್ ತಯಾರಿಸಲು ಬಳಸುತ್ತಾರೆ) ಗಿಡದ  ಬೀಜ ತಿಂದಿದ್ದಾರೆ. ಶಾಲಾ ಸಮಯದಲ್ಲಿ ಒಬ್ಬ ವಿದ್ಯಾರ್ಥಿ ಮಾತ್ರ ವಾಂತಿ ಮಾಡಿಕೊಂಡಿದ್ದಾನೆ. ಶಾಲಾ ಅವಧಿಯ ನಂತರ ಮನೆಗೆ ತೆರಳಿದ ಮಕ್ಕಳು. ಸಂಜೆ 8 ಗಂಟೆ ಸುಮಾರಿಗೆ 8ವಿದ್ಯಾರ್ಥಿಗಳು ಮನೆಗಳಲ್ಲಿ ವಾಂತಿ ಮಾಡಿಕೊಂಡಿವೆ.
ಪಾಲಕರು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಆಂಬುಲೆನ್ಸ್ ಮೂಲಕ ಬಳ್ಳಾರಿಯ ವಿಮ್ಸ್ ಗೆ ದಾಖಲಿಸಲಾಗಿದೆ.
ವಿದ್ಯಾರ್ಥಿಗಳಾದ ಅಭಿಷೇಕ, ಮಾರುತಿ, ಪೆನ್ನೊಬಳೇಶ, ಕಾಡಿಸಿದ್ದಪ್ಪ, ಶಬರೀಷ, ಕಾರ್ತಿಕ, ವಿರುಪಾಕ್ಷಿ ಮತ್ತು ಹರೀಶ ಅಸ್ವಸ್ಥಗೊಂಡವರು.
ಮಕ್ಕಳನ್ನು 24 ಗಂಟೆಗಳ ನಿಗಾದಲ್ಲಿ ಇರಿಸಲಾಗಿದ್ದು, ಒಬ್ಬ ವಿದ್ಯಾರ್ಥಿ ವಾಂತಿ ಮತ್ತು ಭೇಧಿಯಿಂದ ಬಳಲುತ್ತಿದ್ದು, ಉಳಿದವರು ಗುಣಮುಖರಾಗುತ್ತಿದ್ದಾರೆ ಎಂದು ತೆಕ್ಕಲಕೋಟೆ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸುನಿಲ್ ಕುಮಾರ್ ಹೇಳಿದರು.
ವಿಮ್ಸ್ ಗೆ ಭೇಟಿ ನೀಡಿ ಮಕ್ಕಳ ಚಿಕಿತ್ಸೆ ಕುರಿತು ವಿಚಾರಿಸಿದ್ದು, ಎಲ್ಲಾ ವಿದ್ಯಾರ್ಥಿಗಳು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಸಿರುಗುಪ್ಪ ಕ್ಷೇತ್ರ ಶಿಕ್ಷಣಾಧಿಕಾರಿ ಗುರಪ್ಪ ಎಚ್ ತಿಳಿಸಿದ್ದಾರೆ.