ಶೀಘ್ರದಲ್ಲೇ ಆಯುಷ್ಮಾನ್ ಆರೋಗ್ಯ ಕೇಂದ್ರ ಉದ್ಘಾಟನೆ: ಶಾಸಕ ಬಸವರಾಜು ವಿ ಶಿವಗಂಗಾ
ಸಂಜೆವಾಣಿ ವಾರ್ತೆ
ಚನ್ನಗಿರಿ.ಆ.4: ಆಯುರ್ವೇದ ಪದ್ಧತಿಯಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು, ಇದರಿಂದ ದುಷ್ಪರಿಣಾಗಳು ಸಹ ಕಡಿಮೆ ಇರುತ್ತದೆ ಎಂದು ಶಾಸಕರಾದ ಬಸವರಾಜು ವಿ ಶಿವಗಂಗಾ ತಿಳಿಸಿದರು. ತಾಲ್ಲೂಕಿನ ಹಾರೋನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಈ ವಿಷಯ ತಿಳಿಸಿದರು. ಉದ್ಘಾಟನೆಗೆ ಸಿದ್ಧಗೊಳ್ಳುತ್ತಿರುವ ಆಯುಷ್ಮಾನ್ ಆರೋಗ್ಯ ಕೇಂದ್ರದ ಕಟ್ಟಡ ಪರಿಶೀಲಿಸಿದ ಅವರು ಇದರಿಂದ ಈ ಭಾಗದ ಜನರಿಗೆ ಅನುಕೂಲವಾಗಲಿದೆ ಎಂದರು. ಮುಂದಿನ ದಿನಗಳಲ್ಲಿ ಪ್ರತಿ ಗ್ರಾಮ ಪಂಚಾಯಿಗೆ ಒಂದು ಆಯುಷ್ಮಾನ್ ಆರೋಗ್ಯ ಕೇಂದ್ರ ತೆರೆಯಬೇಕೆಂಬ ಯೋಜನೆ ಇದೆ, ಈ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರೊಂದಿಗೆ ಚರ್ಚೆ ನಡೆಸುತ್ತೇನೆ ಎಂದರು. ಇತ್ತೀಚಿನ ದಿನಗಳಲ್ಲಿ ಜನರು ಸಹ ಆಯುರ್ವೇದ ಪದ್ಧತಿಗೆ ಒಲವು ತೋರುತ್ತಿದ್ದಾರೆ. ಇಂದಿಗೂ ಗ್ರಾಮೀಣ ಪ್ರದೇಶದಲ್ಲಿ ಕೆಲವು ಖಾಯಿಲೆಗಳಿಗೆ ನಾಟಿ ಔಷಧವನ್ನೇ ಬಳಸುತ್ತಾರೆ, ಹೀಗಾಗಿ ಆಯುರ್ವೇದ ಪದ್ಧತಿಯನ್ನು ಉಳಿಸಿಕೊಂಡು ಹೋಗುವುದರ ಜೊತೆಗೆ ಜನರಿಗೆ ಇದರ ಉಪಯೋಗವನ್ನು ಕಲ್ಪಿಸಬೇಕಾಗಿದೆ ಎಂದರು. ಈ ವೇಳೆ ಗ್ರಾಮದ ಮುಖಂಡರು ಹಾಗೂ ಕಾಂಗ್ರೆಸ್ ಪಕ್ಷದ ನಾಯಕರು ಉಪಸ್ಥಿತರಿದ್ದರು.