ಹಸಿರೆಲೆ ಗೊಬ್ಬರದಿಂದ ಮಣ್ಣಿನ ಫಲವತ್ತತೆ ಹೆಚ್ಚಳ: ಕಡಿಮೆ ಖರ್ಚಿನಲ್ಲಿ ಭೂಮಿಯ ಫಲವತ್ತತೆ, ಹೆಚ್ಚಿನ ಇಳುವರಿ
ಜಾಲಿಹಾಳ್ ರಾಜಸಾಬ್
ಸಿರುಗುಪ್ಪ: ಕೃಷಿಯಲ್ಲಿ ಹಸಿರೆಲೆ ಗೊಬ್ಬರವು ಮಣ್ಣಿನ ಫಲವತ್ತತೆ ನೀಡುವಲ್ಲಿ ಮಹತ್ವದ ಸ್ಥಾನ ಪಡೆದಿದೆ. ಗೊಬ್ಬರವು ಭೂಮಿಗೆ ಮತ್ತು ಬೆಳೆಗೆ ಅವಶ್ಯವಿರುವ ಮುಖ್ಯ ಪೋಷಕಾಂಶಗಳನ್ನು ಒದಗಿಸುತ್ತದೆ. ಹಸಿರೆಲೆ ಗೊಬ್ಬರ ಬೇಸಾಯ ಬಲಿಯದ ಸಸ್ಯಗಳು, ಸಸ್ಯದ ಎಲೆಗಳು ಮತ್ತು ಉಳಿದ ಎಳೆಯ ಸಸ್ಯ ಭಾಗಗಳನ್ನು ಉಳುಮೆ ಮಾಡಿ ಮಣ್ಣಿನಲ್ಲಿ ಬೆರೆಸಿ ಫಲವತ್ತತೆಯನ್ನು ಹೆಚ್ಚಿಸಿ ರೈತರಿಗೆ ಕಡಿಮೆ ಖರ್ಚಿನಲ್ಲಿ ಭೂಮಿಯ ಫಲವತ್ತತೆ ಕಾಪುಡುವ ಸಸ್ಯವಾಗಿದೆ.
 ಸ್ಥಳದಲ್ಲಿ ಬೆಳೆಯುವ ಹಸಿರು ಗೊಬ್ಬರಗಳು: ಹಸಿರೆಲೆ ಗೊಬ್ಬರ ಬೆಳೆಯುವ ಸಸ್ಯಗಳನ್ನು ಹೊಲದಲ್ಲಿಯೇ ಬೆಳೆದು ಸ್ಥಳದಲ್ಲಿಯೇ ಮಣ್ಣಿನಲ್ಲಿ ಬೆರೆಸುವ ವಿಧಾನವೇ ಸ್ಥಳದಲ್ಲಿ ಬೆಳೆಯುವ ಹಸಿರು ಗೊಬ್ಬರ, ಈ ಬೀಜಗಳನ್ನು ಭತ್ತ ಕಟಾವು ನಂತರ ಎರಚ ಬಹುದು, ಈ ಹಸಿರು ಗೊಬ್ಬರ ಬೆಳೆಯನ್ನು ಬಿತ್ತನೆ ಮಾಡಿದ 50ರಿಂದ 60ದಿನಗಳ ನಂತರ ಮಣ್ಣಿನೊಂದಿಗೆ ಬೆರೆಸಲಾಗುವುದು. ಇದಕ್ಕೂ ಪೂರ್ವದಲ್ಲಿ ಬೆರೆಸಿದರೆ ಹಸಿರು ಗೊಬ್ಬರದ ಇಳುವರಿ ಕಡಿಮೆಯಾಗುವುದು, ನಂತರ ಬೆರೆಸಿದರೆ ಗೊಬ್ಬರದಲ್ಲಿ ನಾರಿನ ಅಂಶ ಹೆಚ್ಚಾಗಿ ಬೇಗನೆ ಕೊಳೆಯುವದಿಲ್ಲ.
ಡಯಾಂಚಾ(ಜೂನಿ): ಇದು ಮೆಕ್ಕಲು, ಜೇಡಿ, ಕಪ್ಪು ಮಣ್ಣಿನಲ್ಲಿ ಬೆಳೆಯುವ ಹಸಿರೆಲೆ ಗೊಬ್ಬರವೇ ಡಯಾಂಚವಾಗಿದೆ. ಸವಳ ಭೂಮಿ ಮತ್ತು ಭತ್ತದ ಗದ್ದೆಗಳಲ್ಲಿ ಒಳ್ಳೆಯ ಇಳುವರಿ ಕೊಡುತ್ತದೆ. ಇದು ನೀರಾವರಿ ಪ್ರದೇಶಕ್ಕೆ ಒಳ್ಳೆಯದು ಎನಿಸಿಕೊಂಡಿದೆ. ಪ್ರತಿ ಎಕರೆಗೆ 12-15 ಕಿ.ಗ್ರಾಂ. ಬೀಜ ಬೇಕು. ಹಸಿರೆಲೆ ಗೊಬ್ಬರ ಬೆಳೆಗಳಲ್ಲಿ ಇರುವ ಪೋಷಕಾಂಶಗಳ ಪ್ರಮಾಣವು ಹಸಿರೆಲೆ ಗೊಬ್ಬರದ ಸಸ್ಯಗಳಲ್ಲಿ 3.50ಸಾರಜನಕ, ೦.6೦-ರಂಜಕ, 1.2೦-ಪೋಟ್ಯಾಷ್ ದೊರೆಯುತ್ತದೆ.
ಹಸಿರೆಲೆ ಗೊಬ್ಬರದ ಬಿತ್ತನೆ : ಹಸಿರೆಲೆ ಗೊಬ್ಬರದ ಬೆಳೆಯನ್ನು ಮಾರ್ಚ್-ಏಪ್ರಿಲ್ ತಿಂಗಳಿನಲ್ಲಿ ಬಿತ್ತಬಹುದು, ಇಳುವರಿ ಹೆಚ್ಚಿಗೆ ಪಡೆಯಲು ಮತ್ತು ಕಾಂಡ ಮೆತ್ತಗೆ ಇರಲು ಅಧಿಕ ಪ್ರಮಾಣದ ಬೀಜ ಬಿತ್ತಬೇಕು, ಹಸಿರೆಲೆ ಗೊಬ್ಬರ ಬೆಳೆಯನ್ನು ಮಣ್ಣಿನಲ್ಲಿ ಚೆನ್ನಾಗಿ ಸೇರಿಸಲು ಟ್ರ‍್ಯಾಕ್ಟರ್ ಚಾಲಿತ ರೊಟೋವೇಟರ್ ಬಳಸಿ ಮಣ್ಣಿನಲ್ಲಿ ಬೆರೆಸಿ ಕೆಲ ದಿನಗಳವರೆಗೆ ಕೊಳೆದ ನಂತರ ಬೆಳೆ ನಾಟಿ ಮಾಡಬಹುದು.
ಹಸಿರೆಲೆ ಗೊಬ್ಬರಳ ಪ್ರಾಮುಖ್ಯತೆ : ಸಸ್ಯ ಪೋಷಕಾಂಶಗಳ ಉತ್ತಮ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಭೂಮಿಗೆ ಸಾವಯವ ಪದಾರ್ಥ ಮತ್ತು ಸಾರಜನಕವನ್ನು ಸುಲಭವಾಗಿ ಕಡಿಮೆ ಖರ್ಚಿನಲ್ಲಿ ಒದಗಿಸುತ್ತವೆ, ಮಣ್ಣಿನ ರಚನೆಯನ್ನು ವೃದ್ಧಿಪಡಿಸಿ ತೇವಾಂಶವನ್ನು ಹಿಡಿದಿಟ್ಟುಕೊಳ್ಳುವ ಶಕ್ತಿಯನ್ನು ಹೆಚ್ಚಿಸುತ್ತವೆ, ಮಣ್ಣಿನಲ್ಲಿ ಸೂಕ್ಷ್ಮ ಜೀವಾಣುಗಳ ಕ್ರಿಯೆಯನ್ನು ಹೆಚ್ಚಿಸಿ ಪೋಷಕಾಂಶಗಳು ಸಸ್ಯಕ್ಕೆ ದೊರಕುವಂತೆ ಮಾಡುತ್ತವೆ, ಮಣ್ಣಿನ ಕೆಳಪದರಿನಲ್ಲಿರುವ ಪೋಷಕಾಂಶಗಳನ್ನು ಮೇಲಿನ ಪದರಿಗೆ ಸಾಗಣೆ ಮಾಡಿ ಸಸ್ಯಗಳಿಗೆ ಲಭ್ಯವಾಗುವಂತೆ ಮಾಡುತ್ತವೆ, ಮಣ್ಣಿನ ಭೌತಿಕ ಗುಣ ಧರ್ಮಗಳು ವೃದ್ಧಿಯಾಗಿ ಸಮಸ್ಯಾತ್ಮಕ ಮಣ್ಣುಗಳಾದ ಬರಡು ಮತ್ತು ಜೌಗು ಮಣ್ಣುಗಳಲ್ಲಿರುವ ದೋಷಗಳನ್ನು ಸರಿಪಡಿಸುತ್ತವೆ.
ಹಸಿರೆಲೆ ಗೊಬ್ಬರದ ಲಾಭಗಳು : ಈ ವಿಧಾನವು ಭೂಮಿಗೆ ಅಧಿಕ ಪ್ರಮಾಣದಲ್ಲಿ ಪೋಷಕಾಂಶಗಳನ್ನು ನೀಡುವುದರೊಂದಿಗೆ ಮಣ್ಣಿನ ಭೌತಿಕ, ರಸಾಯನಿಕ ಮತ್ತು ಜೈವಿಕ ಅಂಶಗಳು ಸುಧಾರಿಸುತ್ತವೆ. ಹಸಿರೆಲೆ ಗೊಬ್ಬರ ಕೊಳೆಯುವ ಸಂದರ್ಭದಲ್ಲಿ ಆಮ್ಲಗಳು, ರಂಜಕ ಸಸ್ಯಗಳಿಗೆ ಪರಿವರ್ತಿಸಲು ನೆರವಾಗುತ್ತವೆ. ಹಸಿರೆಲೆ ಗೊಬ್ಬರ ಸಾರಜನಕ ಸ್ಥಿರಿಕರಿಸಿ ಬೆಳೆಗಳಿಗೆ ಸಹಕಾರ ನೀಡಬಲ್ಲವು, ಭೂಮಿಯ ಆಳವಾದ ಪೊದರಿನಲ್ಲಿರುವ ಪೋಷಕಾಂಶಗಳನ್ನು ಹೀರಿಕೊಂಡು ಮೇಲ್ಮಣ್ಣಿನಲ್ಲಿ ಸೇರಿಸಿ ಬೆಳೆಗಳ ಪೋಷಕಾಂಶ ನಿರ್ವಹಣೆಯಲ್ಲಿ ನೆರವಾಗುತ್ತವೆ. ಕಡಿಮೆ ಖರ್ಚಿನ ಲಾಭದಾಯಕ ಬೇಸಾಯ ಕ್ರಮ ಎನಿಸಿದೆ.
ತುಂಗಭದ್ರ ಅಚ್ಚುಕಟ್ಟು ಪ್ರದೇಶಗಳಾದ ಮುದ್ದಟ್ಟನೂರು, ನಡವಿ, ನಿಟ್ಟುರೂ, ತೆಕ್ಕಲಕೋಟೆ, ಇಬ್ರಾಹಿಮಪುರ, ಸಿರುಗುಪ್ಪ, ಬಾಗೇವಾಡಿ, ಕುಡುದರಹಾಳ್ ಪ್ರದೇಶದಲ್ಲಿ ಅತಿಹೆಚ್ಚಾಗಿ ನೀರು ಬಳಸಿ ಭತ್ತವನ್ನು ಹೆಚ್ಚಾಗಿ ಬೆಳೆಯುವ ರೈತರು ತಮ್ಮ ಭೂಮಿಯ ಫಲವತ್ತತೆ ಇಲ್ಲದೆ, ಅಧಿಕ ರಾಸಾಯನಿಕ ಗೊಬ್ಬರಗಳ ಮೊರೆ ಹೊಗುತ್ತಿದ್ದಾರೆ, ಹಸಿರೆಲೆ ಗೊಬ್ಬರವು ಭತ್ತದ ಗದ್ದೆಗಳಿಗೆ ಅತ್ಯುತ್ತಮವಾದುದಲ್ಲದೆ ಶೀಘ್ರವಾಗಿ ಕೊಳೆತು ಗೊಬ್ಬರವಾಗುತ್ತದೆ.
ಕೊಟ್ಟಿಗೆ ಅಥವಾ ಕಾಂಪೋಸ್ಟ್ ಗೊಬ್ಬರಗಳಿಗಿಂತ ಹೆಚ್ಚು ಪೋಷಕಾಂಶಗಳಿವೆ. ಜೊತೆಗೆ ಬೆಳೆಗಳ ಗುಣಮಟ್ಟ ಮತ್ತು ಮಣ್ಣಿನ ಭೌತಿಕ ಮತ್ತು ರಸಾಯನಿಕ ಗುಣಗಳನ್ನು ವೃದ್ಧಿಪಡಿಸುತ್ತವೆ. ಕಡಿಮೆ ಖರ್ಚಿನಲ್ಲಿ ಬೆಳೆಗೆ ಗೊಬ್ಬರವನ್ನು ಒದಗಿಸಬಹುದು, ಮಣ್ಣಿನಲ್ಲಿ ಬೆಳೆಗಳಿಗೆ ಹೆಚ್ಚಿನ ಪೋಷಕಾಂಶಗಳನ್ನು ಒದಗಿಸುತ್ತದೆ, ಬೆಳೆ ಬೆಳೆವಣಿಗೆ ಪ್ರಚೋದಕಗಳನ್ನು ನೀಡಿ ಜೀವಸತ್ವಗಳನ್ನು ಉತ್ಪತ್ತಿ ಮಾಡಿ ಉತ್ಪಾದನೆಯಲ್ಲಿ ಶೇ.1೦-5೦ ರಷ್ಟು ಹೆಚ್ಚಿಸುತ್ತವೆ, ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಲು ಮತ್ತು ಸುಸ್ಥಿರವಾಗಿಡಲು ಸಹಾಯ ಮಾಡುತ್ತವೆ ಎಂದು ಮಣ್ಣು ವಿಜ್ಞಾನಿ ಕೃಷಿ ಸಂಶೋಧನ ಕೇಂದ್ರದ ಡಾ. ಆಶೋಕಕುಮಾರ ಗಡ್ಡಿ ತಿಳಿಸಿದರು.
ಸುಮಾರು 2೦ವರ್ಷಗಳಿಂದ ಎರಡು ವರ್ಷಕ್ಕೊಮ್ಮೆ ಹಸಿರೆಲೆ ಗೊಬ್ಬರವನ್ನು ಎರಚುವುದರಿಂದ ಭತ್ತದ ಇಳುವರಿ ಹೆಚ್ಚಾಗಿದೆ, ಹಸಿರೆಲೆ ಗೊಬ್ಬರ ಬಳಸುವ ಮೊದಲು ಒಂದು ಎಕರೆ ಭತ್ತಕ್ಕೆ 8ರಿಂದ1೦ ರಾಸಾಯನಿಕ ಗೊಬ್ಬರಗಳನ್ನು ಬಳಸುತ್ತಿದ್ದೆವು, 3೦ ರಿಂದ 35ರವರಗೆ ಇಳುವರಿ ಪಡೆಯುತ್ತಿದ್ದೆವು, ಹಸಿರೆಲೆ ಗೊಬ್ಬರ ಬಳಸಲು ಪ್ರಾರಂಭಿಸಿದಾಗಿನಿಂದ 5ರಿಂದ6 ರಾಸಾಯಾನಿಕ ಗೊಬ್ಬರಗಳನ್ನು ಬಳಸಿ 40ರಿಂದ45ರವರೆಗೆ ಇಳುವರಿ ಪಡೆಯುತ್ತಿದ್ದೆವೆ, ಕನಿಷ್ಠ   6ರಿಂದ8ಸಾವಿರ ವರಗೆ ಖರ್ಚು ಕಡಿಮೆ ಮಾಡಿ ಅಧಿಕ ಇಳುವರಿ ಪಡೆಯಬಹುದು. ಇದರಿಂದ ಜಮೀನಿನ ವಾತಾವರಣವು ಸ್ವಚ್ಚಂದವಾಗಿರಿಸುತ್ತದೆ, ಪ್ರತಿಯೊಬ್ಬ ರೈತರು ಹಸಿರೆಲೆ ಗೊಬ್ಬರವನ್ನು ಬಳಸಿ ಮಣ್ಣಿನ ಫಲವತ್ತತೆ ಹೆಚ್ಚಿಸಿಕೊಂಡು ಒಳ್ಳೆಯ ಇಳುವರಿ ಪಡೆಯಬಹುದು ಎಂದು ಪ್ರಗತಿಪರ ರೈತ    ಬಸವರಾಜಗೌಡ ಹೇಳಿದರು.