ಸ್ಟೀಲ್ ಸಿಟಿ ರನ್ 4 ಸಾವಿರ ಜನರ ಓಟ
* 10 ಕಿ.ಮೀ ನಲ್ಲಿ ರಾಹುಲ್ ಸಂಘೀ
* 5 ಕಿ.ಮೀ ನಲ್ಲಿ ಶಿವಾನಂದ ಲಕ್ಷ್ಮಣ ಶಿಗಾರೆ ವೇಗದ ಓಟಗಾರರು
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಆ04: ನಗರದಲ್ಲಿ ಇಂದು ಬೆಳಿಗ್ಗೆ ಬಳ್ಳಾರಿ ಸೈಕ್ಲಿಂಗ್ ಕ್ಲಬ್ ನಿಂದ ಹಮ್ಮಿಕೊಂಡಿದ್ದ  ಸ್ಟೀಲ್ ಸಿಟಿ ರನ್”  ಓಟದಲ್ಲಿ ಕರ್ನಾಟಕದ ಹಾಗು ಭಾರತದ  ವಿವಿದ 11 ರಾಜ್ಯಗಳ 4 ಸಾವಿರಕ್ಕೂ  ಜನರು ಭಾಗವಹಿಸಿದ್ದರು. ಇದರಲ್ಲಿ ಸ್ಪರ್ಧಾತ್ಮಕವಾದ 10 ಕಿ.ಮೀ. ನಲ್ಲಿ  ಮಹಾರಾಷ್ಟ್ರದ ರಾಹುಲ್ ಸಂಘೀ, ಹಾಗು 5 ಕಿ.ಮೀ.ನಲ್ಲಿ ಬೆಳಗಾವಿಯ ಶಿವಾನಂದ ಲಕ್ಷ್ಮಣ ಶಿಗಾರೆ ಅವರು ಅತಿ ವೇಗದ ಓಟಗಾರರಾಗಿ  ಪ್ರಥಮ ಸ್ಥಾನ ಪಡೆದಿದ್ದಾರೆ.
ಪ್ರಥಮ ಸ್ಥಾನ ಪಡೆದವರಿಗೆ 5, ದ್ವಿತೀಯ ಸ್ಥಾನ ಪಡೆದವರಿಗೆ 3 ಮತ್ತು ತೃತೀಯ ಸ್ಥಾನ ಪಡೆದವರಿಗೆ 2 ಸಾವಿರ ರೂ ಬಹುಮಾನವನ್ನು ಶಾಸಕ ಭರತ್ ರೆಡ್ಡಿ, ಎಸ್ಪಿ ಡಾ.ಶೋಭಾರಾಣಿ ನೀಡಿದರು.
ಮಹಿಳಾ ವಿಭಾಗದ ವಿಜೇತರಿಗೆ ಡಾ.ಸೋಮನಾಥ, ಮಂಜು ಮೋದಿ ಅವರು ಬಹುಮಾನ ವಿತರಿಸಿದರು.
10 ಕಿ.ಮೀ. ಓಟದಲ್ಲಿ  5 ಕ್ಕೂ ಹೆಚ್ಚು ಜನ, 5 ಕಿಲೋ ಮೀಟರ್ ಓಟದಲ್ಲಿ  3 ಸಾವಿರಕ್ಕೂ ಹೆಚ್ಚು ಜನ ಹಾಗು 3 ಕಿ.ಮೀ ಓಟದಲ್ಲಿ  350 ಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದರು. ಶೇ 30 ಕ್ಕೂ ಹೆಚ್ಚು ಮಹಿಳೆಯರು ಬಾಲಕಿಯರು ಭಾಗವಹಿಸಿದ್ದರು. ಇದರಲ್ಲಿ ಮಹಾರಾಷ್ಟ್ರ, ಆಂದ್ರಪ್ರದೇಶ, ತೆಲಂಗಾಣ, ತಮಿಳುನಾಡು ಮೊದಲಾದ  11 ರಾಜ್ಯಗಳ ಹಾಗೂ ಕಿನ್ಯಾ ದೇಶದ ಓರ್ವ ಓಟಗಾರ ಸಹ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಜನರು ಆರೋಗ್ಯದಿಂದ ಇರಲು ದಿನ ನಿತ್ಯ ಒಂದಿಷ್ಟು ಓಟದ ಅಭ್ಯಾಸದ ಬಗ್ಗೆ ಜಾಗೃತಿ ಮೂಡಿಸಲು ಈ ಓಟವನ್ನು ಆಯೋಜಿಸಿತ್ತು.  ಇದು 3 ನೇ ವರ್ಷದ ಓಟವಾಗಿದೆ.
ಬೆಳಿಗ್ಗೆ  ಓಟಕ್ಕೆ ತೋರಣಗಲ್ಲಿ ಜಿಂದಾಲ್ ಸಂಸ್ಥೆಯ ಮುಖ್ಯಸ್ಥ ಮುರುಗನ್,  ಎಸ್ಪಿ ಡಾ.ಶೋಭಾರಾಣಿ, ನಿವೃತ್ತ ನ್ಯಾಯಮೂರ್ತಿ ಮಂಜುಳಾ ಚೆಲ್ಲುರು ಮೊದಲಾದವರು ಚಾಲನೆ ನೀಡಿದರು.  ಸೈಕ್ಲಿಂಗ್ ಕ್ಲಬ್ ನ ಅಧ್ಯಕ್ಷ ಡಾ.ರವಿಶಂಕರ್, ಡಾ.ಸುಂದರ್, ಡಾ.ಸೋಮನಾಥ, ಮೊದಲಾದವರು ಪಾಲ್ಗೊಂಡಿದ್ದರು. ಓಟಗಾರರಿಗೆ ನೀರು, ಆರೋಗ್ಯ ಪರೀಕ್ಷೆ ಉಪಹಾರ ಮೊದಲಾದ ವ್ಯವಸ್ಥೆ ಮಾಡಲಾಗಿತ್ತು. 
ಮೈಂಡ್ ಟ್ರೀಯ ಸಹ ಸಂಸ್ಥಾಪಕ ನಾಮಕಲ್ ಪಾರ್ಥಸಾರಥಿ, ವಿಶ್ವದ  ಆರು ಮ್ಯಾರಥಾನಗಳಲ್ಲಿ ಭಾಗವಹಿಸಿ ಐದರಲ್ಲಿ ಜಯಿಸಿರುವ ಮೂರ್ತಿ ಆರ್.ಕೆ, ವೇಗದ ಓಟಗಾತಿ ಅನುಷಾ ಪಾಠಕ್ ಮೊದಲಾದವರು ಪಾಲ್ಗೊಂಡಿದ್ದರು.
ಫಲಿತಾಂಶ
5 ಕಿ.ಮೀ ಓಟದ,12 ರಿಂದ 17 ವರ್ಷದ ಪುರುಷರ ವಿಭಾಗದಲ್ಲಿ ಬೆಳಗಾವಿಯ ಶಿವಾನಂದ ಲಕ್ಷ್ಮಣ ಶಿಗಾರೆ ಕೇವಲ  15.31 ನಿಮಿಷದಲ್ಲಿ ಓಡಿದ್ದಾರೆ.
18 ರಿಂದ 34 ವಯಸ್ಸಿನ  ವಿಭಾಗದಲ್ಲಿ ಬೆಂಗಳೂರಿನ ಸಂಜಯ್ ಕುಮಾರ್ ಪಾಲ್  17.9 ನಿಮಿಷದಲ್ಲಿ ಓಡಿ ಪ್ರಥಮ ಸ್ಥಾನ ಗಳಿಸಿದ್ದಾರೆ.
10 ಕೀಮಿ ಓಟದ 15 ರಿಂದ 24 ವಯೋಮಿತಿಯ ಪುರುಷರ ವಿಭಾಗದಲ್ಲಿ ಮಹಾರಾಷ್ಟ್ರದ ರಾಹುಲ್ ಸಂಘೀ  32.28 ನಿಮಿಷದಲ್ಲಿ  ಓಡಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಈವರು ಈ ಬಾರಿಯ ಸ್ಟೀಲ್ ಸಿಟಿ ರನ್ ನ ಅತಿವೇಗದ ಓಟಗಾರರಾಗಿದ್ದಾರೆ.