ಮೌಲಿಕ ವಿಚಾರ, ಪ್ರಾಮಾಣಿಕ ಪ್ರಯತ್ನದಿಂದ ಉನ್ನತ ಗುರಿಮುಟ್ಟಲು ಸಾಧ್ಯ:ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್
ಕಲಬುರಗಿ:ಆ.4: ಜಸ್ಟಿಸ್ ಶಿವರಾಜ ವಿ. ಪಾಟೀಲ ಪ್ರತಿಷ್ಠಾನ (ರಿ) ಮತ್ತು ಸರ್ವಜ್ಞ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯ ಕಲಬುರಗಿ ಇವರ ಸಂಯುಕ್ತಾಶ್ರಯದಲ್ಲಿ “ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಮತ್ತು ವ್ಯಸನ ಮುಕ್ತ ದಿನಾಚರಣೆ” ಕಾರ್ಯಕ್ರಮವನ್ನು ಉದ್ಘಾಟಿಸಿದ ಫೌಜಿಯಾ ತರನ್ನುಮ್ ಬಿ. ಜಿಲ್ಲಾಧಿಕಾರಿಗಳು, ಕಲಬುರಗಿ ರವರು ಮಾತನಾಡುತ್ತ, “ಪ್ರತಿಯೊಬ್ಬ ವಿದ್ಯಾರ್ಥಿಯು ಜೀವನದಲ್ಲಿ ಉನ್ನತ ಗುರಿ ಸಾಧಿಸಲು ಮೌಲಿಕ ವಿಚಾರ ಹಾಗೂ ಪ್ರಾಮಾಣಿಕ ಪ್ರಯತ್ನ ಅವಶ್ಯವೆಂದರು. ಅದಕ್ಕಾಗಿ ಶಿಕ್ಷಕರ ಉತ್ತಮ ಮಾರ್ಗದರ್ಶನ, ಅವರೊಂದಿಗಿನ ಉತ್ತಮ ಬಾಂಧವ್ಯ ಪ್ರೇರಣೆ ನೀಡುತ್ತವೆ. ಎಲ್ಲವನ್ನು ಗಮನಿಸುವ ಮಕ್ಕಳ ಮನಸ್ಸು ಪರಿಶುದ್ಧ ನೀರಿನಷ್ಟೇ ಸ್ವಚ್ಛವಾಗಿರುತ್ತದೆ. ವಿದ್ಯಾರ್ಥಿಗಳು ತಮ್ಮ ಚಿಂತನೆಗಳನ್ನು ಮತ್ತು ಮನಸ್ಸನ್ನು ಸ್ವಚ್ಛವಾಗಿರಿಸಿಕೊಳ್ಳಲು ಸೂಕ್ತ ವಾತಾವರಣ ನಿರ್ಮಿಸಿಕೊಳ್ಳಬೇಕು. ಕಲುಷಿತ ವಿಚಾರಗಳಿರಬಾರದು. ದುಶ್ಚಟಕ್ಕೆ ಒಳಗಾಗಬಾರದು. ಸಮಯದ ಪ್ರಜ್ಞೆ ಹೊಂದಿದ್ದು, ಅದರ ಸದುಪಯೋಗ ಪಡೆದುಕೊಳ್ಳಬೇಕು. ತಾವು ಉನ್ನತ ಅಧಿಕಾರಿಯಾಗಿ ಕೆಲಸಮಾಡುತ್ತಿರುವಾಗಲೇ ದಿನಾಲು ನಾಲ್ಕು ಗಂಟೆಗಳ ಕಾಲ ಓದಿ ಐ.ಎ.ಎಸ್. ಪಾಸಾಗಿದ್ದೇನೆ. ನಮ್ಮ ಮನೆಯಲ್ಲಿ ಯಾರು ಸರ್ಕಾರಿ ನೌಕರರು ಇಲ್ಲ. ಸಾಧಾರಣ ಕುಟುಂಬದಿಂದ ಬಂದಿದ್ದು, ಸಾಧನೆಗೆ ಯಾವುದು ಅಡ್ಡಿಯಾಗುವುದಿಲ್ಲ ಎಂದು ತಮ್ಮ ಯಶೋಗಾಥೆಯನ್ನು ಹೇಳಿ ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು. ಜೀವನದಲ್ಲಿ ಯಶಸ್ಸು ಪಡೆಯಲು ಸಮಯವನ್ನು ಪಾಲಿಸಬೇಕು. ನಮ್ಮ ಸಮಯ ಮತ್ತು ನಮ್ಮ ಮನಸ್ಸು ನಮ್ಮ ಹತೋಟಿಯಲ್ಲಿರಬೇಕು. ಯೋಗ, ಧ್ಯಾನ, ಓದು, ಕಲಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಹೀಗೆ ಎಲ್ಲದಕ್ಕೂ ಸಮಯ ನಿಗದಿಪಡಿಸಿಕೊಳ್ಳಬೇಕು. ಸರ್ವಜ್ಞ ಕಾಲೇಜಿನ ವಿದ್ಯಾರ್ಥಿಗಳ ಸಾಂಸ್ಕøತಿಕ ಕಾರ್ಯಕ್ರಮ ನೋಡಿ ತಮ್ಮ ವಿದ್ಯಾರ್ಥಿ ಜೀವನದಲ್ಲಿಯೂ ತಾವು ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದುದ್ದನ್ನು ನೆನಪಿಸಿಕೊಂಡರು.