ಭೀಮನ ಅಮವಾಸ್ಯೆ: ಶರಣಬಸವೇಶ್ವರ ದೇವಸ್ಥಾನಕ್ಕೆ ಹರಿದು ಬಂದ ಭಕ್ತ ಸಾಗರ
ಕಲಬುರಗಿ,ಆ.4-ಭೀಮನ ಅಮವಾಸ್ಯೆ ಪ್ರಯುಕ್ತ ನಗರದ ಸುಪ್ರಸಿದ್ಧ ಶರಣಬಸವೇಶ್ವರ ದೇವಸ್ಥಾನಕ್ಕೆ ಇಂದು ಭಕ್ತ ಸಾಗರವೇ ಹರಿದು ಬಂದಿತು. ಬೆಳಿಗ್ಗೆಯಿಂದಲೇ ನಗರವು ಸೇರಿದಂತೆ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಭಕ್ತಾಧಿಗಳು ಸರತಿ ಸಾಲಿನಲ್ಲಿ ನಿಂತು ಶರಣಬಸವೇಶ್ವರರ ದರ್ಶನ ಪಡೆದರು. ಅಮವಾಸ್ಯೆ ಪ್ರಯುಕ್ತ ಶರಣಬಸವೇಶ್ವರರ ದರ್ಶನಕ್ಕೆ ಆಗಮಿಸಿದ್ದ ಭಕ್ತಾದಿಗಳಿಗಾಗಿ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ವಿವಿಧೆಡೆಯಿಂದ ಭಕ್ತಾಧಿಗಳು ಆಗಮಿಸಿದ್ದರಿಂದ ದೇವಸ್ಥಾನದ ಆವರಣದಲ್ಲಿ ಜಾತ್ರೆಯ ವಾತಾವರಣ ನಿರ್ಮಾಣವಾಗಿತ್ತು.
ಏನಿದು ಭೀಮನ ಅಮವಾಸ್ಯೆ ?
ಹಿಂದೂ ಸಂಪ್ರದಾಯದ ಪ್ರಕಾರ ಆಷಾಢ ಮಾಸದ ಕೊನೆಯ ದಿನವನ್ನು ಅಥವಾ ಆಷಾಡ ಅಮಾವಾಸ್ಯೆಯನ್ನು ಭೀಮನ ಅಮಾವಾಸ್ಯೆ ಎಂದು ಆಚರಿಸಲಾಗುತ್ತದೆ. ಈ ಅಮಾವಾಸ್ಯೆಯನ್ನು ಭೀಮನ ಅಮಾವಾಸ್ಯೆ, ಜ್ಯೋತಿರ್ಭಿಮೇಶ್ವರ ಅಮಾವಾಸ್ಯೆ ಅಥವಾ ಆಷಾಢ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ.
ಆಷಾಢ ಮಾಸದ ಅಮಾವಾಸ್ಯೆಯಾದ ಭೀಮನ ಅಮಾವಾಸ್ಯೆಯು ಮಹಿಳೆಯರು ವಿಶೇಷವಾದ ದಿನವಾಗಿದೆ. ಈ ದಿನ ವಿವಾಹಿತ ಮಹಿಳೆಯರು ಪತಿ ಪೂಜೆ ಮಾಡಿದರೆ, ಅವಿವಾಹಿತ ಮಹಿಳೆಯರು ಉತ್ತಮ ಪತಿಯನ್ನು ಪಡೆಯಲು, ಸಹೋದರ ಆಯಸ್ಸಿಗಾಗಿ ವ್ರತ ಮಾಡುತ್ತಾರೆ.