ಅಂಬೇಡ್ಕರ್ ಪುತ್ಥಳಿ ತೆರವು: ದಲಿತ ಸಂಘಟನೆಗಳಿಂದ ಪಾಲಿಕೆ ಎದುರು ಪ್ರತಿಭಟನೆ
ವಿಜಯಪುರ,ಆ.4: ನಗರದ ಪಾಲಿಕೆಯ ನೂತನ ಕಚೇರಿ ಆವರಣದಲ್ಲಿ ಶುಕ್ರವಾರ ದಲಿತ ಸಂಘಟನೆಗಳು ರಾತ್ರೋರಾತ್ರಿ ಏಕಾಏಕಿ ಡಾ.ಬಿ.ಆರ್. ಅಂಬೇಡ್ಕರ್ ಮೂರ್ತಿ ಪ್ರತಿಷ್ಠಾಪಿಸಿದ್ದನ್ನು ಅಧಿಕಾರಿಗಳು ತೆರವುಗೊಳಿಸಿದಕ್ಕೆ, ದಲಿತ ಸಂಘಟನೆ ಮುಖಂಡರು ಪಾಲಿಕೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಇಲ್ಲಿನ ಮಹಾನಗರ ಪಾಲಿಕೆಯ ನೂತನ ಕಟ್ಟಡದ ಉದ್ಘಾಟನೆ ಇತ್ತೀಚೆಗೆ ನಡೆದಿದೆ. ಈ ಕಟ್ಟಡದ ಆವರಣದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಪಾಲಿಕೆಯ ಕೆಲ ಸದಸ್ಯರಿಂದ ಒತ್ತಾಯ ಕೇಳಿ ಬಂದಿತ್ತು. ಆದರೆ ಆ ಸ್ಥಳದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕೆನ್ನುವುದು ಕೆಲ ದಲಿತಪರ ಸಂಘಟನೆಗಳ ಸದಸ್ಯರು ಮತ್ತು ಯುವಕರ ಬೇಡಿಕೆಯಾಗಿತ್ತು. ಈ ಕುರಿತು ಮಹಾನಗರ ಪಾಲಿಕೆಯ ಆಯುಕ್ತರಿಗೆ ಮನವಿ ಸಹ ಸಲ್ಲಿಸಿದ್ದರು ಎನ್ನಲಾಗಿದೆ. ಇದರ ಮಧ್ಯೆ ನಿನ್ನೆ ತಡರಾತ್ರಿ ಕೆಲ ದಲಿತಪರ ಸಂಘಟನೆಗಳ ಯುವಕರು ಪಾಲಿಕೆಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದ್ದರು. ಇದರ ಬೆನ್ನಲ್ಲೇ ಪಾಲಿಕೆಯವರು ಆ ಮೂರ್ತಿಯನ್ನು ಬೆಳಗ್ಗೆ ತೆರವುಗೊಳಿಸಿದ್ದರು, ಇದರಿಂದ ರೊಚ್ಚಿಗೆದ್ದ ದಲಿತ ಸಂಘಟನೆಯ ಮುಖಂಡರು ಪಾಲಿಕೆ ಕಚೇರಿ ಒಳಗೆ ಪ್ರತಿಭಟನೆ ನಡೆಸಿದರು.
ಇನ್ನೂ ಮೂರ್ತಿ ತೆರವು ಮಾಡಿದ ಪ್ರಯುಕ್ತ ಏಕಾಏಕಿಯಾಗಿ ಅಧಿಕಾರಿಗಳ ನಡೆಯನ್ನು ಖಂಡಿಸಿ ಪಾಲಿಕೆಯಲ್ಲಿ ದಲಿತ ಸಂಘಟನೆಯ ಮುಖಂಡರು ಪ್ರತಿಭಟನೆ ನಡೆಸಿದರು. ಅಲ್ಲದೆ ಮೂರ್ತಿ ತೆರವು ಮಾಡಿದ ಸ್ಥಳದಲ್ಲೇ ಅಂಬೇಡ್ಕರ್ ಭಾವಚಿತ್ರ ಇಟ್ಟು ಪ್ರತಿಭಟಿಸಿದರು.
ಇದೇ ಸಂದರ್ಭದಲ್ಲಿ ದಲಿತಪರ ಸಂಘಟನೆಯವರ ಮತ್ತು ಪಾಲಿಕೆಯ ಅಧಿಕಾರಿಗಳ ಮಧ್ಯೆ ವಾಗ್ವಾದ ನಡೆಯಿತು. ಇನ್ನೂ ಮೂರ್ತಿ ತೆರವು ಮಾಡಿದ ಜಾಗದಲ್ಲೇ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರವಿರಿಸಿ ಮುಂಬತ್ತಿ ಬೆಳಗಿ ಪೂಜೆ ಸಲ್ಲಿಸಿ ಧರಣಿ ಕುಳಿತರು. ಪಾಲಿಕೆ ಅಧಿಕಾರಿಗಳ ನಡೆಯನ್ನು ಖಂಡಿಸಿ, ಪಾಲಿಕೆ ಆಯುಕ್ತರು ಮತ್ತು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿ ಧರಣಿ ನಡೆಸಿದರು. ಅಲ್ಲದೇ ಕಾನೂನು ರೀತಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುವುದು ಎಂದು ಅಧಿಕಾರಿಗಳು ಮುಖಂಡರ ಮನವೊಲಿಕೆಗೆ ಮುಂದಾದರೂ, ಪ್ರತಿಭಟನಾಕಾರರು ಜಗ್ಗದೇ ಸ್ಥಳದಲ್ಲಿ ಧರಣಿಯನ್ನು ಮುಂದುವರೆಸಿದರು.
ಈ ನಿಟ್ಟಿನಲ್ಲಿ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ಪಾಲಿಕೆ ಮೇಯರ್, ಉಪಮೇಯರ್ ಹಾಗೂ ಸದಸ್ಯರೊಂದಿಗೆ ಸಭೆಯನ್ನು ನಡೆಸಿದರು.
ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಹೆಚ್ಚುವರಿ ಪೆÇಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ನೇಮಕ ಮಾಡಲಾಗಿತ್ತು.
ಇನ್ನು ಮೂರ್ತಿ ತೆರವು ಮಾಡಿದ ಸ್ಥಳದಲ್ಲೇ ಅಂಬೇಡ್ಕರ್ ಭಾವಚಿತ್ರ ಇಟ್ಟು ಪೂಜೆ ಸಲ್ಲಿಸಿದ್ದಾರೆ. ಇನ್ನೂ ಈ ವಿಚಾರವಾಗಿ ಆ. 7 ರಂದು ಸಭೆ ನಡೆಸಿ ಮುಂದಿನ ನಿರ್ಣಯ ತಿಳಿಸುವುದಾಗಿ ಅಧಿಕಾರಿಗಳು ಪ್ರತಿಭಟನಾ ನಿರತರಿಗೆ ಭರವಸೆ ನೀಡಿದ್ದರಿಂದ ದಲಿತ ಸಂಘಟನೆಯ ಮುಖಂಡರು ಪ್ರತಿಭಟನೆ ಹಿಂಪಡೆದರು.
ವಿಜಯಪುರದ ಪಾಲಿಕೆ ಕಚೇರಿಯಲ್ಲಿ ಅಂಬೇಡ್ಕರ್ ಪುತ್ಥಳಿ ತೆರವು ಖಂಡಿಸಿ ಮುತ್ತಿಗೆ ಹಾಕಿ ದಲಿತ ಸಂಘಟನೆ ಮುಖಂಡರು ಪ್ರತಿಭಟನೆ ನಡೆಸಿದರು.