ಮೌನ ಅನುಷ್ಠಾನ ಮಹಾಮಂಗಲದ ಧರ್ಮ ಸಭೆ
ಸಂಜೆವಾಣಿ ವಾರ್ತೆ
ಹರಪನಹಳ್ಳಿ.ಆ.೪: ಚನ್ನವೀರ ಮಹಾಶಿವಯೋಗಿಗಳ ಮೌನ ಅನುಷ್ಠಾನದಿಂದ ಪಟ್ಟಣದ ಹಾಲವರ್ತಿ ಮಠಕ್ಕೆ ಈಗ ಜೀವ ಕಳೆ ಬಂದಿದೆ ಎಂದು ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಹೇಳಿದರು.ಪಟ್ಟಣದ ಗೋಸಾಯಿ ಗುಡ್ಡದ ಹಿಂಭಾಗದಲ್ಲಿರುವ ಐತಿಹಾಸಿಕ ಹಾಲವರ್ತಿ ಮಠದಲ್ಲಿ ಲಿಂಗನಾಯಕನಹಳ್ಳಿ ಶ್ರೀ ಚನ್ನವಿರ ಮಹಾಶಿವಯೋಗಿಗಳು ಕಳೆದ ಒಂದು ತಿಂಗಳಿAದ ಕೈಗೊಂಡಿದ್ದ ಮೌನ ಅನುಷ್ಠಾನ ಮಹಾಮಂಗಲದ ಧರ್ಮ ಸಭೆಯನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು. ತುಂಬಾ ಹಳೆಯ ಕಾಲದ ಹಾಲವರ್ತಿ ಮಠಕ್ಕೆ ತನ್ನದೇ ಆದ ಐತಿಹಾಸಿಕ ಹಿನ್ನೆಲೆ ಇದ್ದು ರಾಜಸೋಮಶೇಖರ ನಾಯಕ ಈ ಪ್ರದೇಶವನ್ನು ಆಳಿದ್ದರು ಅಲ್ಲದೇ ಭಗವಂತನ ಕೃಪೆಯಿಂದ ಅವರು ಇಲ್ಲಿ ಕಲ್ಯಾಣಿ ಕಟ್ಟಿಸಿದ್ದರು ಎಂದು ಹೇಳಿದರು.ಇತ್ತಿಚೇಗೆ ಈ ಪ್ರದೇಶದ ಸುತ್ತ ತಪ್ಪಲು ಬೆಳೆದು ನಿರ್ಜನ ಪ್ರದೇಶವಾಗಿ ಮಾರ್ಪಟ್ಟಿತ್ತು ಇದೀಗ ಲಿಂಗನಾಯಕನಹಳ್ಳಿ ಶ್ರೀಗಳ ಪಾದರ್ಪಣೆಯಿಂದ ಮಠಕ್ಕೆ ಕಳೆ ಬಂದಿದೆ ಈ ಜಾಗದ ವಾರಸುದಾರರಾದ ಬೆಟ್ಟನಗೌಡರು ಜಾಗವನ್ನು ಮಠಕ್ಕೆ ದಾನವಾಗಿ ನೀಡಿದರೆ ಮುಂದಿನ ದಿನಗಳಲ್ಲಿ ಮಠದ ಅಭಿವೃದ್ಧಿಗೆ ಸಹಕಾರ ನೀಡುತ್ತೇನೆ ಇದಕ್ಕೆ ಭಕ್ತರು ಕೈ ಜೋಡಿಸಬೇಕು ಎಂದು ಶಾಸಕಿ ಲತಾ ಹೇಳಿದರು.ಲಿಂಗನಾಯಕನಹಳ್ಳಿ ಜಂಗಮ ಕ್ಷೇತ್ರದ ಶ್ರೀ ಚನ್ನವಿರ ಮಹಾಶಿವಯೋಗಿಗಳು, ತೆಗ್ಗಿನ ಮಠದ ವರಸದ್ಯೋಜಾತ ಶ್ರೀಗಳು, ಮುಂಡರಿಗಿ ಸಂಸ್ಥಾನ ಮಠದ ಡಾ.ಅನ್ನದಾನೇಶ್ವರ ಸ್ವಾಮೀಜಿ, ನೀಲಗುಂದ ಗುಡ್ಡದ ವಿರಕ್ತ ಮಠದ ಚನ್ನಬಸವಶಿವಯೋಗಿಗಳು ಧರ್ಮ ಸಭೆಯ ದಿವ್ಯಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.ಗೋಲಗೇರಿ ವಿರಕ್ತ ಮಠದ ಸಿದ್ದಲಿಂಗ ಸ್ವಾಮೀಜಿ, ಶಿಗ್ಗಾವಿ ವಿರಕ್ತ ಮಠದ ಸಂಗನಬಸವ ಸ್ವಾಮೀಜಿ, ಅರಸೀಕೆರೆ ಕೋಲಶಾಂತೇಶ್ವರ ಮಠದ ಶಾಂತಲಿAಗ ಶ್ರೀಗಳು, ಹೂವಿನಹಡಗಲಿ ಗವಿ ಮಠದ ಹಿರಿಯ ಶಾಂತವೀರ ಸ್ವಾಮೀಜಿ, ಇಟಗಿ ಹಿರೇಮಠದ ಗುರುಶಾಂತವೀರ ಸ್ವಾಮೀಜಿ, ಹಿರೇಹಡಗಲಿಯ ಹಾಲಸಿದ್ದೇಶ್ವರ ಸ್ವಾಮೀಜಿಯವರು ಧರ್ಮ ಸಭೆಯ ಸಾನಿಧ್ಯವಹಿಸಿದ್ದರು.ನಿವೃತ್ತ ಪಶು ವೈದ್ಯಾಧಿಕಾರಿ ಷಣ್ಮುಖಪ್ಪ ಮಠದ ಪರಂಪರೆ, ಇತಿಹಾಸ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.ಲಿಂಗನಾಯಕನಹಳ್ಳಿ ಮಠದ ನಿರಂಜನದೇವರು ಸ್ವಾಗತಿಸಿದರು, ರಾಜಶೇಖರ ಬಣಕಾರ ನಿರೂಪಿಸಿದರು.