ಬಸವ ಪಂಚಮಿ: 8 ರಂದು ಮಕ್ಕಳಿಗೆ ಹಾಲು ವಿತರಣೆ
ಬೀದರ್: ಆ.4:ಬಸವ ಪಂಚಮಿ ಅಂಗವಾಗಿ ಆ. 8 ರಂದು ಜಿಲ್ಲೆಯಾದ್ಯಂತ ಅಲೆಮಾರಿ ಹಾಗೂ ಬಡ ಮಕ್ಕಳಿಗೆ ಉಚಿತ ಹಾಲು ವಿತರಿಸಲಾಗುವುದು ಎಂದು ವಿದ್ಯಾರ್ಥಿ ಬಂಧುತ್ವ ವೇದಿಕೆಯ ಜಿಲ್ಲಾ ಸಂಚಾಲಕ ರತ್ನದೀಪ ಕಸ್ತೂರೆ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ನಡೆದ ಬಸವ ಪಂಚಮಿ ಹಾಗೂ ನಮ್ಮ ನಡೆ ವಿಜ್ಞಾನದ ಕಡೆ ಜಾಗೃತಿ ಕಾರ್ಯಕ್ರಮದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.
ಸಚಿವ ಸತೀಶ್ ಜಾರಕಿಹೋಳಿ ಅವರ ನೇತೃತ್ವದಲ್ಲಿ ರಾಜ್ಯದಾದ್ಯಂತ ಬಸವ ಪಂಚಮಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಜನರಲ್ಲಿ ಮೂಢನಂಬಿಕೆ ವಿರುದ್ಧ ಜಾಗೃತಿ ಮೂಡಿಸಲು ತಿಂಗಳಾಂತ್ಯದೊಳಗೆ ನಮ್ಮ ನಡೆ ವಿಜ್ಞಾನದ ಕಡೆ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವಿದ್ಯಾಸಾಗರ ಶಿಂಧೆ ಮಾತನಾಡಿ, ಮೂಢನಂಬಿಕೆಗಳಿಂದ ಜನರನ್ನು ಹೊರ ತರಲು ಜಾಗೃತಿ ಕಾರ್ಯಕ್ರಮಗಳು ಅವಶ್ಯಕವಾಗಿವೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಸದಸ್ಯ ಕಲಾಲ್ ದೇವಿಪ್ರಸಾದ್ ಮಾತನಾಡಿ, ನಮ್ಮ ನಡೆ ವಿಜ್ಞಾನದ ಕಡೆ ಕಾರ್ಯಕ್ರಮಕ್ಕೆ ಪವಾಡ ಬಯಲು ಖ್ಯಾತಿಯ ಹುಲಿಕಲ್ ನಟರಾಜ ಹಾಗೂ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರನ್ನು ಆಹ್ವಾನಿಸಬೇಕು ಎಂದು ಸಲಹೆ ನೀಡಿದರು.
ಕೆಪಿಸಿಸಿ ಕಾರ್ಮಿಕ ವಿಭಾಗದ ಕಾರ್ಯದರ್ಶಿ ಜಾನ್ಸನ್ ಘೋಡೆ ಮಾತನಾಡಿ, ವೈಚಾರಿಕತೆ ಹಾಗೂ ವೈಜ್ಞಾನಿಕ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ರಾಜ್ಯ ಯುವ ಪ್ರಶಸ್ತಿ ಪುರಸ್ಕøತ ಮಹೇಶ ಗೋರನಾಳಕರ್ ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಬೀದರ್ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್. ಮನೋಹರ, ಅಗಸ್ತ್ಯ ಕೋರ್ ವಿಜ್ಞಾನ ಚಟುವಟಿಕಾ ಕೇಂದ್ರದ ಸಲಸಾರೆ, ಶಾಮರಾವ್ ನೆಲವಾಡೆ, ಶರಣಪ್ಪ ಪಾಟೀಲ, ಸೂರ್ಯಕಾಂತ ಸಾಧುರೆ, ಸುನೀಲ್ ಮಿತ್ರಾ, ಅನಿಲ್ ಹೇಡೆ, ಗೌತಮ ಮುತ್ತಂಗಿಕರ್, ಚಂದು ಡಿ.ಕೆ., ಶಿವು ದೇವಕರ ಇದ್ದರು.