ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಅನ್ಯಾಯ; ಜಿಲ್ಲಾ ಕಾಂಗ್ರೆಸ್ ನಿಂದ ಚೊಂಬು ಹಿಡಿದು ಪ್ರತಿಭಟನೆ
ಸಂಜೆವಾಣಿ ವಾರ್ತೆ
ದಾವಣಗೆರೆ.ಆ.೪: ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್ ನಲ್ಲಿ ಭದ್ರಾ ಮೇಲ್ದಂಡೆಗೆ ಅನುದಾನ ಬಿಡುಗಡೆ ಮಾಡದಿರುವುದು ಹಾಗೂ ಭಾರತ್ ಅಕ್ಕಿ ನೀಡದಿರುವುದನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್‌ ಕಾರ್ಯಕರ್ತರು ಹಾಗೂ ಮುಖಂಡರುಗಳು ನಗರದಲ್ಲಿ ಚೊಂಬು ಹಿಡಿದು ಪ್ರತಿಭಟನೆ ನಡೆಸಿದರು.ನಗರದ ಜಯದೇವ ವೃತದಲ್ಲಿ ಪ್ರತಿಭಟನೆ ವೇಳೆ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಬಿ.ಮಂಜಪ್ಪ,‌ ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆಗೆ ಅನುದಾನ ಬಿಡುಗಡೆ ಮಾಡದಿರುವುದು ಹಾಗೂ ಭಾರತ್ ಅಕ್ಕಿ ನೀಡದಿರುವುದು‌ ಖಂಡನೀಯ. ಕರ್ನಾಟಕ ರಾಜ್ಯದಿಂದ ‌ಸಂಗ್ರಹಿಸಿದ ತೆರಿಗೆ ಹಣವನ್ನು ಬೇರೆ ರಾಜ್ಯಗಳಿಗೆ ನೀಡುತ್ತಿರುವುದು ಸರಿಯಲ್ಲ. ಇದಲ್ಲದೆ ಬಿಜೆಪಿ ಮಾಡುತ್ತಿರುವ ಪಾದಯಾತ್ರೆ ಪಾಪದ ಪಾದಯಾತ್ರೆ, ಬಿಜೆಪಿ ತಾನು ಮಾಡಿದ ಪಾಪ‌‌ ತೊಳೆಯಲು ಮಾಡುತ್ತಿರುವ ಪಾದಯಾತ್ರೆ ಎಂದು ಕಿಡಿಕಾರಿದರು.ಜಿಲ್ಲಾ ಕಾಂಗ್ರೆಸ್ ಪ್ರಧಾನ‌ಕಾರ್ಯದರ್ಶಿ ಹಾಗೂ ದೂಡಾ ಅಧ್ಯಕ್ಷರಾದ ದಿನೇಶ್ ಕೆ ಶೆಟ್ಟಿ ಮಾತನಾಡಿ, ‌ಕೇಂದ್ರ ಸರ್ಕಾರ ರಾಜ್ಯಪಾಲರನ್ನು ಕೈಗೊಂಬೆಯನ್ನಾಗಿ ಮಾಡಿಕೊಂಡಿದೆ. ಮುಖ್ಯಮಂತ್ರಿ ‌ಸಿದ್ದರಾಮಯ್ಯ ನವರನ್ನು‌ ಟಾರ್ಗೆಟ್ ಮಾಡಲಾಗುತ್ತಿದೆ. ಸಿದ್ದರಾಮಯ್ಯ ಆಡಳಿತ ತೆರದ ಪುಸ್ತಕ ಇದ್ದಂತೆ. ಹಲವಾರು ಯೋಜನೆಯನ್ನು ಜಾರಿಗೆ ತಂದು ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಪ್ರಯತ್ನ ಮಾಡಿದ್ದಾರೆ ಎಂದು ಹೇಳಿದರು.ಪ್ರತಿಭಟನೆಯಲ್ಲಿ ಪಾಲಿಕೆ ಮೇಯರ್ ವಿನಾಯಕ ಪೈಲ್ವಾನ್, ಕೆ.ಜಿ ಶಿವಕುಮಾರ್, ಆಯೂಬ್ ಪೈಲ್ವಾನ್, ಎ.ನಾಗರಾಜ್,‌ ಆರೀಫ್ ಖಾನ್, ಮಂಜಮ್ಮ, ಮಂಗಳ, ದ್ರಾಕ್ಷಾಯಿಣಮ್ಮ, ಶುಭಮಂಗಳ, ರಾಜೇಶ್ವರಿ, ಹರೀಶ್,ಯುವರಾಜ್, ಸುರೇಶ್ ಕೋಗುಂಡೆ, ಅಕ್ಕಿ ರಾಮಚಂದ್ರ, ಎಸ್.ಎಲ್. ಆನಂದಪ್ಪ, ಮೈನುದ್ದೀನ್, ಎಲ್.ಎಂ.ಹೆಚ್.ಸಾಗರ್, ಕಾಯಿಪೇಟೆ ಹಾಲೇಶ್ ಇತರರು ಇದ್ದರು.