ಬಾಲ ಭವನದತ್ತ ಮಕ್ಕಳ ಆಕರ್ಷಿಸಿ
ಬೀದರ್:ಆ.4: ಬಾಲ ಭವನಗಳತ್ತ ಮಕ್ಕಳನ್ನು ಆಕರ್ಷಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಬಾಲ ಭವನ ಸೊಸೈಟಿ ಅಧ್ಯಕ್ಷ ಬಿ.ಆರ್. ನಾಯ್ಡು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಬಾಲ ಭವನಕ್ಕೆ ಈಚೆಗೆ ಭೇಟಿ ನೀಡಿದ ಅವರು ಭವನದ ಪ್ರಗತಿ ಪರಿಶೀಲನೆ ಸಭೆ ನಡೆಸಿದರು.
ಜಿಲ್ಲಾ ಬಾಲ ಭವನ ಆವರಣದಲ್ಲಿ ಉದ್ಯಾನ ನಿರ್ಮಿಸಬೇಕು. ಸಂಸದ, ಶಾಸಕರ ಅನುದಾನ, ಕಾರ್ಖಾನೆಗಳಿಂದ ದೇಣಿಗೆ ಪಡೆದು ಮಕ್ಕಳ ಆಟಿಕೆ ಸಾಮಗ್ರಿ, ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಸಬೇಕು. ಕಬ್ಬಡ್ಡಿ ಮೈದಾನ ನಿರ್ಮಿಸಬೇಕು. ಯಾರಾದರೂ ಉಚಿತವಾಗಿ ತರಬೇತಿ ನೀಡಲು ಮುಂದೆ ಬಂದರೆ ಅವರನ್ನು ನೇಮಕ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಭವನಕ್ಕೆ ಮುಖ್ಯ ದ್ವಾರ ನಿರ್ಮಿಸಬೇಕು. ಸುತ್ತು ಗೋಡೆ ದುರಸ್ತಿಪಡಿಸಬೇಕು. ಹೊರಾಂಗಣದಲ್ಲಿ ಸಾರ್ವಜನಿಕರಿಗೆ ಶೌಚಾಲಯ ನಿರ್ಮಿಸಬೇಕು ಎಂದು ಹೇಳಿದರು.
ಜಿಲ್ಲಾಮಟ್ಟದ ಮಕ್ಕಳ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಕ್ರಿಯಾ ಯೋಜನೆ ಸಿದ್ಧಪಡಿಸಿ ಕಳುಹಿಸಲು ಸೂಚಿಸಿದರು.
ಜಿಲ್ಲಾ ಬಾಲ ಭವನದ ಸಂಯೋಜಕ ಸೂರ್ಯಕಾಂತ ಮೋರೆ ಅವರು, ಜಿಲ್ಲಾಮಟ್ಟದ ಮಕ್ಕಳ ದಿನಾಚರಣೆ, ಜಿಲ್ಲಾಮಟ್ಟದ ಬೇಸಿಗೆ ಶಿಬಿರ ಸೇರಿದಂತೆ ಭವನದಲ್ಲಿ 2023-24ನೇ ಸಾಲಿನಲ್ಲಿ ಕೈಗೊಳ್ಳಲಾದ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.
ಬಸವಕಲ್ಯಾಣ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅವರು, ತಾಲ್ಲೂಕು ಬಾಲ ಭವನ ನಿರ್ಮಾಣಕ್ಕೆ ಅನುದಾನದ ಅವಶ್ಯಕತೆ ಇರುವ ಬಗ್ಗೆ ಗಮನ ಸೆಳೆದರು.
ಪ್ರಸ್ತಾವ ಸಲ್ಲಿಸಿದ್ದಲ್ಲಿ ಭವನ ನಿರ್ಮಾಣಕ್ಕೆ ಅನುದಾನ ಕಲ್ಪಿಸಲಾಗುವುದು ಎಂದು ನಾಯ್ಡು ಭರವಸೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಗುರುರಾಜ, ಜಿಲ್ಲೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಮೇಲ್ವಿಚಾರಕರು, ಬಾಲ ಭವನದ ಸಿಬ್ಬಂದಿ ಇದ್ದರು.