ಬಸವ ದರ್ಶನ ಪ್ರವಚನ ಕರಪತ್ರ ಬಿಡುಗಡೆ
ಬೀದರಃಆ.4: ನಗರದ ಪ್ರಸಾದ ನಿಲಯದಲ್ಲಿ ಬಸವ ದರ್ಶನ ಪ್ರವಚನ ಕರಪತ್ರಗಳ ಬಿಡುಗಡೆ ಸಮಾರಂಭ ಜರುಗಿತು.
ರಾಷ್ಟ್ರೀಯ ಬಸವದಳದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ರಾಜೇಂದ್ರಕುಮಾರ ಗಂದಗೆಯವರು ಗುರುಬಸವ ಪೂಜೆ ನೆರವೇರಿಸಿ ಬಸವ ದರ್ಶನ ಪ್ರವಚನ ಕರಪತ್ರಗಳನ್ನು ಬಿಡುಗಡೆ ಮಾಡಿ ಮಾತನಾಡಿ, ಈ ಪವಿತ್ರ ಶ್ರಾವಣ ಮಾಸದಲ್ಲಿ ಡಾ|| ಚನ್ನಬಸವ ಪಟ್ಟದ್ದೇವರ ಪ್ರಸಾದ ನಿಲಯದಲ್ಲಿ ದಿನಾಂಕ:05.08.2024 ರಿಂದ 03.09.2024 ರ ವರೆಗೆ ಪರಮ ಪೂಜ್ಯ ಶ್ರೀ ನಾಡೋಜ ಡಾ|| ಬಸವಲಿಂಗ ಪಟ್ಟದ್ದೇವರ ದಿವ್ಯ ಮಾರ್ಗದರ್ಶನದಲ್ಲಿ ಪೂಜ್ಯ ಶ್ರೀ ಮಹಾಲಿಂಗ ಮಹಾಸ್ವಾಮಿಗಳು ಬಸವ ದರ್ಶನ ಪ್ರವಚನ ಒಂದು ತಿಂಗಳವರೆಗೆ ನಡೆಸಿಕೊಂಡು ಹೋಗಲಿದ್ದಾರೆ. ತನ್ಮೂಲಕ ಬಸವಾದಿ ಶರಣರು ನಡೆದು ನುಡಿದು ವಚನಗಳ ಮೂಲಕ ಸಮಾಜಕ್ಕೆ ತತ್ವವನ್ನು ಕೊಟ್ಟಿದ್ದನ್ನು ಬಸವಭಕ್ತರಾದ ನಾವು ಬಸವ ದರ್ಶನ ಪ್ರವಚನ ಆಲಿಸುವುದರಿಂದ ಮಾನಸಿಕ, ದೈಹಿಕ, ಒತ್ತಡ ಚಿಂತೆಯಿಂದ ಹೊರಬಂದು ಉತ್ತಮವಾದ ಜೀವನವನ್ನು ನಡೆಸಿಕೊಂಡು ಹೋಗಬಹುದು. ಈ ಭಾಗದಲ್ಲಿ ಬಸವಾದಿ ಶರಣರ ತತ್ವಗಳನ್ನು ಮನೆ ಮನಗಳಿಗೆ, ನೆರೆ ರಾಜ್ಯಗಳಿಗೆ ಪರಮ ಪೂಜ್ಯ ಡಾ|| ಬಸವಲಿಂಗ ಪಟ್ಟದ್ದೇವರು ಸಂದೇಶವನ್ನು ಮುಟ್ಟಿಸುವಂತಹ ಕಾರ್ಯ ಎಡಬಿಡದೆ ಮಾಡುತ್ತಿದ್ದಾರೆ. ಅವರ ಸೇವೆ ಅವಿಸ್ಮರಣೀಯವಾದುದ್ದು. ಶ್ರಾವಣ ಮಾಸದಲ್ಲಿ ಬೀದರ ಜಿಲ್ಲೆಯ ಎಲ್ಲೆಡೆ ಬಸವತತ್ವ ಪ್ರವಚನವನ್ನು ನಡೆಸಿಕೊಂಡು ಹೋಗಲು ಪೂಜ್ಯರ ಮಾರ್ಗದರ್ಶನ ಮತ್ತು ಪ್ರೇರಣೆಯಾಗಿದೆ. ಈ ಪ್ರಯುಕ್ತ ಶರಣ ಬಂಧುಗಳು ತನು-ಮನ-ಭಾವವನ್ನು ಪರಿಶುದ್ಧಗೊಳಿಸಬೇಕಾದರೆ ಬಸವಾದಿ ಶರಣರ ಚಿಂತನೆಗಳನ್ನು ಆಲಿಸಬೇಕೆಂದು ಕರೆ ನೀಡಿದರು.
ಡಾ|| ಚನ್ನಬಸವ ಪಟ್ಟದ್ದೇವರ ಪ್ರಸಾದ ನಿಲಯದ ಕಾರ್ಯದರ್ಶಿಗಳಾದ ಪ್ರೊ. ಎಸ್.ಬಿ. ಬಿರಾದಾರ ಅಧ್ಯಕ್ಷತೆ ವಹಿಸಿ ಮಾತನಾಡುತ್ತ, ಬಸವ ದರ್ಶನ ಪ್ರವಚನ ನಡೆಸಿಕೊಂಡು ಹೋಗುತ್ತಿರುವ ಪೂಜ್ಯ ಮಹಾಲಿಂಗ ಮಹಾಸ್ವಾಮಿಗಳು ನೆರೆ ರಾಜ್ಯ ತೆಲಂಗಾಣಾದಲ್ಲಿ ಬಸವತತ್ವ ಪ್ರಚಾರ ಕಾರ್ಯ ಮಾಡುತ್ತಿದ್ದಾರೆ. ಅವರೊಬ್ಬರು ಅಪ್ಪಟ ಬಸವತತ್ವದ ಅನುಯಾಯಿಗಳಾಗಿದ್ದು, ಪ್ರವಚನ ಪ್ರವೀಣರಾಗಿದ್ದಾರೆ. ಅದೇ ರೀತಿ ಡಾ|| ಬಸವಲಿಂಗ ಪಟ್ಟದ್ದೇವರು ಬಸವತತ್ವ ಸಂದೇಶವನ್ನು ಕರ್ನಾಟಕ, ತೆಲಂಗಾಣಾ, ಆಂಧ್ರ ಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಮುಟ್ಟಿಸುವಂತಹ ಕಾರ್ಯ ಮಾಡುತ್ತಿದ್ದಾರೆ. ಅದರ ಜೊತೆಗೆ ಹೆಣ್ಣುಮಕ್ಕಳಿಗಾಗಿ ಅನುಭವ ಮಂಟಪ ಸಂಸ್ಕøತಿ ವಿದ್ಯಾಲಯ ಸ್ಥಾಪಿಸಿ ಮಹಿಳೆಯರಿಗೆ ಉತ್ತಮ ಬಸವ ಸಂಸ್ಕøತಿ, ಸಂಸ್ಕಾರವನ್ನು ಒದಗಿಸುವಂತಹ ಕಾರ್ಯ ಮಾಡುತ್ತಿದ್ದಾರೆ ಎಂದು ನುಡಿದರು.
ಪ್ರವಚನ ಸೇವಾ ಸಮಿತಿಯ ಅಧ್ಯಕ್ಷರಾದ ಪ್ರೊ. ಉಮಾಕಾಂತ ಮೀಸೆಯವರು ಸ್ವಾಗತ ಕೋರಿ ನಿರೂಪಿಸಿದರೆ, ಶ್ರೀಕಾಂತ ಬಿರಾದಾರ ವಂದಿಸಿದರು. ಅನುಭವ ಮಂಟಪ ಸಂಸ್ಕøತಿ ವಿದ್ಯಾಲಯದ ಮಕ್ಕಳು ವಚನ ಗಾಯನ ನಡೆಸಿಕೊಟ್ಟರು.
ಮುಖ್ಯ ಅತಿಥಿಗಳಾಗಿ ಮಹಾಲಿಂಗಪ್ಪ ಬೆಲ್ದಾಳೆ, ಜೈರಾಜ ಖಂಡ್ರೆ, ಲಿಂಗಶೆಟ್ಟಿ ಬಿರಾದಾರ, ಭೀಮಾಶಂಕರ ಬಿರಾದಾರ, ವಿಜಯಕುಮಾರ ಪಾಟೀಲ್ ಯರನಳ್ಳಿ ವೇದಿಕೆ ಮೇಲೆ ಉಪಸ್ಥಿತರಿದ್ದರು. ಪ್ರಮುಖರಾದ ಡಾ. ವೈಜಿನಾಥ ಬಿರಾದಾರ, ಗುರುನಾಥ ಬಿರಾದಾರ, ಯಾದಪ್ಪ ಮಡಿವಾಳ, ಸಂಗ್ರಾಮಪ್ಪ ಬಿರಾದಾರ, ಭಾರತಿ ಪಾಟೀಲ್, ಲಕ್ಷ್ಮೀ ಬಿರಾದಾರ ಮತ್ತು ಅನುಭವ ಮಂಟಪ ಸಂಸ್ಕøತಿ ವಿದ್ಯಾಲಯದ ಮಕ್ಕಳು ಹಾಗೂ ಇನ್ನಿತರರು ಭಾಗವಹಿಸಿದರು.