ಎಕಲಾರ ಶಾಲೆಗೆ ಡಿಸಿ ಶಿಲ್ಪಾ ಶರ್ಮಾ ಭೇಟಿ
ಔರಾದ್ : ಆ.4:ತಾಲೂಕಿನ ಎಕಲಾರ ಸರ್ಕಾರಿ ಪ್ರಾಥಮಿಕ ಶಾಲೆಗೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಶುಕ್ರವಾರ ಭೇಟಿ ನೀಡಿ ಮಕ್ಕಳ ಕಲಿಕಾ ಪ್ರಗತಿ ಪರಿಶೀಲನೆ ಮಾಡಿದರು. ಪ್ರಸಕ್ತ ವರ್ಷದಿಂದ ಆರಂಭವಾದ ಆಂಗ್ಲ ಮಾಧ್ಯಮದ ಎಲ್‍ಕೆಜಿ, ಯುಕೆಜಿ ತರಗತಿಗೆ ತೆರಳಿ ಮಕ್ಕಳೊಂದಿಗೆ ಹಸ್ತಲಾಘವ ಮಾಡಿದ ಅವರು, ಮಕ್ಕಳಿಗೆ ಇಂಗ್ಲಿಷ್ ವರ್ಣಮಾಲೆ ಹಾಗೂ ಚಿತ್ರದಲ್ಲಿನ ಪ್ರಾಣಿ ಪಕ್ಷಿಗಳ ಹೆಸರುಗಳು ಕೇಳಿದರು.
ನಂತರ 6ನೇ ತರಗತಿಗೆ ತೆರಳಿದ ಅವರು, ಇಂಗ್ಲಿಷ್ ವ್ಯಾಕರಣಕ್ಕೆ ಸಂಬಂಧಿಸಿದ ಕೆಲ ಪ್ರಶ್ನೆಗಳು ಕೇಳಿ ಮಕ್ಕಳ ಶೈಕ್ಷಣಿಕ ಪ್ರಗತಿ ಪರಿಶೀಲಿಸಿದರು. ನಲಿಕಲಿ ತರಗತಿ ಕೋಣೆಯಲ್ಲಿ ಸುಂದರವಾಗಿ ಜೋಡಿಸಿದ ಅಕ್ಷರ ಬಳ್ಳಿಗಳು, ಕಲಿಕಾ ಚಪ್ಪರ ಕಂಡು ಸಂತಸರಾಗಿದ್ದಲ್ಲದೇ, ಅಲ್ಲಿಯ ಮಕ್ಕಳಿಗೆ ಓದಿಸಿಕೊಂಡರು.
ಶಿಕ್ಷಕ ಬಾಲಾಜಿ ಕಾರ್ಯಕ್ಕೆ ಮೆಚ್ಚುಗೆ
ಪ್ರಸಕ್ತ ವರ್ಷಕ್ಕೆ ಶಾಲೆಯಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸುವ ಹಾಗೂ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಜಾರಿಯಾದ ಅಡ್ಮಿಶನ್ ಏಂಜೆಲ್ ಯೋಜನೆಯ ವಿವರ ಪಡೆದ ಅವರು, ಕಲಿಕಾ ಕಿಟ್ ವಿತರಣೆಗೆ ಅಗತ್ಯವಾದ ಖರ್ಚುವೆಚ್ಚ ಶಿಕ್ಷಕ ಬಾಲಾಜಿ ಅಮರವಾಡಿ ಭರಿಸುತ್ತಿರುವುದು ತಿಳಿದು ಮೆಚ್ಚುಗೆ ವ್ಯಕ್ತಪಡಿಸಿದರು.
ಎಲ್‍ಕೆಜಿ, ಯುಕೆಜಿ ಹಾಗೂ ಒಂದನೇ ತರಗತಿ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದ ಮಕ್ಕಳಿಗೆ ಕಲಿಕಾ ಕಿಟ್ ವಿತರಣೆ ಮಾಡಿ ಮಾತನಾಡಿದ ಅವರು, ಶಾಲಾ ಶಿಕ್ಷಕರು ಮಕ್ಕಳ ಶೈಕ್ಷಣಿಕ ಪ್ರಗತಿಗೆ ವಿನೂತನ ಯೋಜನೆ ಹಾಕಿಕೊಂಡಿದ್ದು ಖುಷಿ ನೀಡಿದೆ. ಅದರಂತೆ ಮಕ್ಕಳು ಜೀವನದಲ್ಲಿ ಒಂದು ಗುರಿ ಇಟ್ಟುಕೊಂಡು ಅಧ್ಯಯನ ಮಾಡಬೇಕು. ಔರಾದ್ ತಾಲೂಕಿನಲ್ಲಿ ಇಂತಹ ಸರ್ಕಾರಿ ಶಾಲೆ ಕಂಡು ಖುಷಿಯಾಗಿದೆ ಎಂದರು.
ಶಾಲೆಯಲ್ಲಿ ಇತ್ತೀಚೆಗೆ ರಚನೆಯಾದ ಶಾಲಾ ಸಂಸತ್‍ನ ಮುಖ್ಯಮಂತ್ರಿ ಕು.ಸಾಕ್ಷಿ ಹಾಗೂ ಉಪಮುಖ್ಯಮಂತ್ರಿ ಕು. ಶಿವಾನಂದ ವಿದ್ಯಾರ್ಥಿಗಳಿಗೆ ಅಭಿನಂದಿಸಿದರು. ಶಿಕ್ಷಕ ಬಾಲಾಜಿ ಅಮರವಾಡಿ ಮಾತನಾಡಿ, ಎರಡು ಮಾಧ್ಯಮದ ಶಾಲೆಯಾಗಿರುವ ಹಿನ್ನೆಲೆ ಕೋಣೆಗಳ ಕೊರತೆಯಿದ್ದು, 4 ಕೋಣೆಗಳು ಶಿಥಿಲಾವಸ್ಥೆಯಲ್ಲಿವೆ ಎಂದು ಮಾಹಿತಿ ನೀಡಿದರು. ತಕ್ಷಣ ಪ್ರತಿಕ್ರಿಯಿಸಿ ಕೆಕೆಆರ್‍ಡಿಬಿ ಅನುದಾನದಡಿ 4 ಕೋಣೆಗಳ ವ್ಯವಸ್ಥೆಗೆ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಮಕ್ಕಳೊಂದಿಗೆ ಸೆಲ್ಫಿ ಪಡೆದು ಸಂಭ್ರಮ
ಕಲಿಕಾ ಕಿಟ್ ವಿತರಣೆ ಮಾಡಿದ ಬಳಿಕ ತೆರಳುವ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು, ಮಕ್ಕಳೊಂದಿಗೆ ಸೆಲ್ಪಿ ಪಡೆದು ಸಂಭ್ರಮಿಸಿದರು. ಮಕ್ಕಳು ಕೂಡ ಜಿಲ್ಲಾಧಿಕಾರಿಗಳ ಸೆಲ್ಪಿಗೆ ಉತ್ಸಾಹದಿಂದ ವಿಜಯದ ಸಂಕೇತಗಳು ತೋರಿಸಿ ಖುಷಿಪಟ್ಟರು.
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ಪ್ರಭು ಬಾಳೂರೆ, ಸಿಆರ್‍ಪಿ ಮಹಾದೇವ ಘುಳೆ, ಶಿಕ್ಷಕ ಬಾಲಾಜಿ ಅಮರವಾಡಿ, ವೀರಶೆಟ್ಟಿ ಗಾದಗೆ, ಜೈಸಿಂಗ್ ಠಾಕೂರ್, ಅಂಕುಶ ಪಾಟೀಲ್, ಗಂಗಾಧರ ಬೇಂದ್ರೆ, ರೂಪಾ, ಸಬೀತಾ ಸೇರಿದಂತೆ ಅಡುಗೆ ಸಿಬ್ಬಂದಿಯವರು ಉಪಸ್ಥಿತರಿದ್ದರು.