ಬೇಸಾಯದತ್ತ ಯುವ ಪೀಳಿಗೆ ಆಸಕ್ತರಾಗಲಿ: ಮಚಕುರಿ
ಬಸವಕಲ್ಯಾಣ:ಆ.4: ಕೃಷಿಯ ಕುರಿತು ಆಸ್ಥೆ ಮತ್ತು ಆಸಕ್ತಿ ಯುವ ಪೀಳಿಗೆಯಲ್ಲಿ ನಶಿಸಿಹೋಗುತ್ತಿದೆ. ಅನ್ನ, ಆರೋಗ್ಯ ಮತ್ತು ಸಂತೃಪ್ತ ಬದುಕಿನ ದಾರಿಯಾದ ಕೃಷಿಯ ಕಡೆಗೆ ಯುವ ಪೀಳಿಗೆ ಆಸಕ್ತರಾಗಲಿ ಎಂದು ಬಸವಕಲ್ಯಾಣ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಾತರ್ಂಡ ಮಚಕುರಿ ಹೇಳಿದರು.
ತಾಲೂಕಿನ ಹಳ್ಳಿ ಗ್ರಾಮದ ವಲಯ ತೋಟಗಾರಿಕಾ ಇಲಾಖೆಯಲ್ಲಿ ಶ್ರೀ ಬಸವೇಶ್ವರ ಪದವಿ ಕಾಲೇಜಿನಿಂದ ಶುಕ್ರವಾರ ಹಮ್ಮಿಕೊಂಡಿದ್ದ ಬೇಸಾಯ, ರೇಷ್ಮೆ ಮತ್ತು ಸಸಿ ಕಸಿ ಅಧ್ಯಯನದ ಕಾರ್ಯಾಗಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಣ್ಣಿನ ಗುಣಮಟ್ಟ ಮತ್ತು ಮಣ್ಣಿನ ಆರೋಗ್ಯವನ್ನು ಕಾಪಾಡಲು ಸಾವಯವ ಮತ್ತು ಎರೆ ಹುಳು ಗೊಬ್ಬರ ಬಳಸಬೇಕು ಎಂದರು.
ಬೆಳೆಗಳಿಗೆ ಹೆಚ್ಚು ರಾಸಾಯನಿಕಗಳ ಬಳಕೆ ಮತ್ತು ಕಳೆನಾಶಕ ಸಿಂಪಡಣೆಯಿಂದ ಮನುಷ್ಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಅಪಾಯಕಾರಿ ಔಷಧಗಳು ಬಳಸಿದ ಬೆಳೆ ಮತ್ತು ದವಸ ಧಾನ್ಯಗಳು ಸೇವಿಸುವುದರಿಂದ ಮುಂದಿನ ದಿನಗಳಲ್ಲಿ ಎಲ್ಲರೂ ರೋಗಗ್ರಸ್ಥರಾಗುವ ಸಾಧ್ಯತೆಯಿದೆ. ಒಣಗಿದ ಎಲೆ, ಸಗಣಿ, ಉದುರಿದ ಎಲೆಗಳು ಗೊಬ್ಬರಗಳಾಗಿ ಪರಿವರ್ತಣೆಯಾಗುತ್ತದೆ. ಇದರಿಂದ ಸಹಜವಾಗಿಯೇ ಆಹಾರ ಉತ್ಪಾದನೆ ಹೆಚ್ಚಾಗುತ್ತದೆ. ರಾಸಾಯನಿಕ ಗೊಬ್ಬರ ಬಳಕೆ ಬಳಸದಂತೆ ಜಾಗೃತಿ ಮೂಡಿಸುವ ಜವಾಬ್ದಾರಿ ವಿದ್ಯಾವಂತ ಯುವಕರ ಮೇಲಿದೆ ಎಂದು ಹೇಳಿದರು.
ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಹರ್ಷವರ್ಧನ ಯಳಮಳಿ ಮಾತನಾಡಿ, ಕೃಷಿ ಬಗೆಗೆ ಯುವ ಸಮುದಾಯ ಆಸಕ್ತಿ ಬೆಳೆಸಿಕೊಳ್ಳಬೇಕು. ಹೊಸ ಹೊಸ ಬೆಳೆ, ಆಹಾರ ಉತ್ಪಾದನೆಯ ವಿಧಾನಗಳನ್ನು ವೈಜ್ಞಾನಿಕ ನೆಲೆಗಟ್ಟಿನ ಮೇಲೆ ನಡೆಸಬೇಕು. ಕೃಷಿ ಕುಟುಂಬದಿಂದ ಬಂದ ವಿದ್ಯಾರ್ಥಿಗಳಲ್ಲಿ ಬೇಸಾಯದ ಪ್ರೀತಿ ಇರಲಿ ಎಂದರು.
ಕೃಷಿ ಅಧಿಕಾರಿ ಶ್ರೀಶೈಲ್ ತಾಂಬೋಳೆ ಮಾತನಾಡಿ, ವಿದ್ಯಾರ್ಥಿಗಳು ತಮಗೆ ಸಿಕ್ಕ ಸಮಯ ಮತ್ತು ಅವಕಾಶ ಇವೆರಡನ್ನು ಪ್ರಜ್ಞಾಪೂರ್ವಕವಾಗಿ ಬಳಸಿಕೊಂಡು ತಮ್ಮ ಬದುಕು ಹಸುನ ಮಾಡಿಕೊಳ್ಳಬೇಕು. ಕೃಷಿ, ಎರೆಹುಳು ಬದುಕಿನ ಭಾಗವಾಗಿವೆ. ಜೀವ ಸಂಪತ್ತಾಗಿವೆ. ಅವುಗಳನ್ನು ಉಳಿಸಿದರೆ ಭವಿಷ್ಯದಲ್ಲಿ ಎಲ್ಲರ ಬದುಕು ಆರೋಗ್ಯಯುತವಾಗಿರುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ ಕಾಲೇಜು ಪ್ರಾಚಾರ್ಯ ಡಾ. ಭೀಮಾಶಂಕರ ಬಿರಾದಾರ ಮಾತನಾಡಿ, ನೆಲ ಸಂಸ್ಕøತಿಯಲ್ಲಿ ಜೀವವೈವಿಧ್ಯ, ಆಹಾರ ವೈವಿಧ್ಯ, ಬದುಕಿನ ಬಹುತ್ವ ಅಡಗಿದೆ. ಕೃಷಿ ಎಲ್ಲ ವಿಕಾಸವಾದಗಳ ಕೇಂದ್ರವಾಗಿದೆ. ಬೇಸಾಯ ಮಾನವ ಸಂಬಂಧಗಳ, ಸಾಮಾಜಿಕ ಸಂಬಂಧಗಳ ಜಾಲವಾಗಿದೆ. ಅನ್ನ, ಅರಿವೆ, ಮತ್ತು ಮನುಷ್ಯನ ಅಸ್ತಿತ್ವದ ಮೂಲ ನೆಲೆ ಕೃಷಿಯೇ ಆಗಿದೆ. ಕೃಷಿ ನಿರ್ಲಕ್ಷಿತಗೊಂಡರೆ ಮಾನವನ ನಾಗರಿಕ ಬದುಕಿಗೆ ಅಪಾಯ ಮತ್ತು ದುರಂತ ಎದುರಾಗುತ್ತದೆ.
ಕೆ.ಪಿ. ಪೂರ್ಣಚಂದ್ರ ತೇಜಸ್ವಿ, ದೇವನೂರು ಮಹಾದೇವ, ನಾಗೇಶ ಹೆಗಡೆ, ಉಲ್ಲಾಸ ಕಾರಂತ ಸೇರಿ ಹಲವಾರು ಬುದ್ದಿಜೀವಿಗಳು ಕೃಷಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ನೆಲ, ನೀರು, ಕಾಡು, ಜೀವಿಗಳ ಬಗೆಗೆ ಇವರೆಲ್ಲರೂ ವೈಜ್ಞಾನಿಕವಾಗಿಯೂ, ನೆಲದ, ಪರಿಸರದ ಹಾಗೂ ಜೀವಜಾಲದ ಒಡನಾಟದಿಂದಲೂ ತಮ್ಮ ಅನುಭವಗಳನ್ನು ಬರಹರೂಪದಲ್ಲಿ ಬರೆದಿದ್ದಾರೆ. ಅವರ ಕೃತಿಗಳ ಅಧ್ಯಯನ ಇಂದು ಹೆಚ್ಚು ಅಗತ್ಯ ಎಂದರು.
ನೆಲ, ಕಾಡು, ಪರಿಸರ ಹಲವು ವಿಸ್ಮಯಗಳು , ಕುತೂಹಲಕಾರಿ ಸಂಗತಿಗಳು ತನ್ನ ಒಡಲಿನಲ್ಲಿ ಇರಿಸಿಕೊಂಡಿವೆ. ಅವುಗಳ ಕುರಿತು ವಿದ್ಯಾರ್ಥಿಗಳಲ್ಲಿ ಜಿಜ್ಞಾಸೆಯಿರಬೇಕು. ಪರಿಸರ ಕೇಂದ್ರಿತ ಲೇಖನಗಳು ಹಾಗೂ ಪರಿಸರವಾದಿ ವಿಮರ್ಶೆ ಅನುಸಂಧಾನ ಮಾಡಬೇಕಾದ ಅಗತ್ಯವಿದೆ ಎಂದರು.
ತೋಟಗಾರಿಕೆ ಅಧಿಕಾರಿಗಳಾದ ಶ್ರೀಧರ ಪೂಜಾರಿ, ನಚಿಕೇತ ಮೇತ್ರೆ ಮಾತನಾಡಿದರು.
ರೇಷ್ಮೆ ಇಲಾಖೆಯ ಬಸವರಾಜ ಮುನ್ನಳ್ಳಿ , ಉಪನ್ಯಾಸಕರಾದ ಎಂ.ಡಿ.ಜಬಿ, ನೀಲಮ್ಮ ಮೇತ್ರೆ ಇದ್ದರು. ಅಶೋಕರೆಡ್ಡಿ ಗದಲೇಗಾಂವ ಸ್ವಾಗತಿಸಿದರು. ಸೌಮ್ಯಾ ಅವರಾದ ನಿರೂಪಿಸಿದರು. ನೇಹಾ ಮುತ್ತಂಗಿ ವಂದಿಸಿದರು.