ಸಿದ್ದರಾಮಯ್ಯ ಗೌಪ್ಯ ಸಭೆ
ಸಂಜೆವಾಣಿ ನ್ಯೂಸ್
ಮೈಸೂರು: ಆ.04:- ರಾಜ್ಯಪಾಲರಿಂದ ಸಿದ್ದರಾಮಯ್ಯ ಅವರಿಗೆ ಶೋಕಾಸ್ ನೋಟೀಸ್ ಜಾರಿ ಹಾಗೂ ಬಿಜೆಪಿ ಪಾದಯಾತ್ರೆ ಹಿನ್ನೆಲೆ ಮೈಸೂರಿನ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಪ್ರಮುಖರೊಂದಿಗೆ ದಿಢೀರ್ ಗೌಪ್ಯ ಸಭೆ ನಡೆಸಿದರು.
ಮೈಸೂರು ಭಾಗದ ಸಚಿವರು, ಶಾಸಕರ ಜೊತೆ ನಡೆದ ಸಭೆಯಲ್ಲಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್
ಶಾಸಕರಾದ ರವಿಶಂಕರ್, ಹರೀಶಗೌಡ, ಅನಿಲ್ ಚಿಕ್ಕಮಾದು, ಎ.ಆರ್.ಕೃಷ್ಣಮೂರ್ತಿ, ಹರೀಶ್ ಗೌಡ ಸೇರಿದಂತೆ ಹಲವು ಶಾಸಕರು ಭಾಗಿಯಾಗಿದ್ದರು.
ಸಿದ್ದರಾಮಯ್ಯರ ಕಾನೂನು ಸಲಹೆಗಾರ, ಶಾಸಕ ಪೆÇನ್ನಣ್ಣ ಸಹ ಸಭೆಯಲ್ಲಿ ಭಾಗವಹಿಸಿದ್ದರು. ಯಾವುದೇ ಪೂರ್ವ ಮಾಹಿತಿ ಇಲ್ಲದೆ ನಡೆದ ಸಭೆ ತೀವ್ರ ಕುತೂಹಲ ಕೆರಳಿಸಿದೆ. ಸಭೆಯಲ್ಲಿ ಯಾವ ವಿಚಾರ ಕುರಿತು ಚರ್ಚೆ ನಡೆಯಿತು ಎಂಬ ಬಗ್ಗೆ ಸಾರ್ವಜನಿಕವಾಗಿ ಮಾಹಿತಿಯನ್ನು ಯಾರೊಬ್ಬರೂ ನೀಡಲಿಲ್ಲ.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಮಹಾದೇವಪ್ಪ, ಸಿಎಂ ಸಿದ್ದರಾಮಯ್ಯ ಡಿಸ್ಟರ್ಬ್ ಆಗಿದ್ದಾರೆ ಎಂಬ ವಿಚಾರ ಕುರಿತು ಮಾತನಾಡಿ, ಸಿಎಂ ಗುಂಡು ಕಲ್ಲು ಇದ್ದ ಹಾಗೆ ಇದ್ದಾರೆ. ಸಿದ್ದರಾಮಯ್ಯ ಮೊದಲು ಹೇಗೆ ಇದ್ದರೋ ಈಗಲೂ ಹಾಗೆಯೇ ಇದ್ದಾರೆ. ಅವರು ಬೊಕ್ಕಹಳ್ಳಿಗೆ ಬರದೇ ಇರೋದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ. ಬೇರೆಡೆ ಪ್ರವಾಸಕ್ಕೆ ತೆರಳಲು ಸಮಯವಾಗಿದ್ದ ಕಾರಣಕ್ಕೆ ಬರಲು ಆಗಿಲ್ಲ ಎಂದರು.
ಸಿಎಂ ಸಿದ್ದರಾಮಯ್ಯ ಹಾಗೂ ಈ ಭಾಗದವರು ಭೇಟಿ ಆಗಿ ಬಹಳ ದಿನಗಳಾಗಿತ್ತು.
ನೆರೆ ಇರುವುದರಿಂದ ಜನರ ನೆರವಿಗೆ ಹೋಗಿ, ಜನರ ಸಂಕಷ್ಟದಲ್ಲಿ ಭಾಗಿಯಾಗಬೇಕು ಎಂದು ಸಿಎಂ ಹೇಳಿದ್ದಾರೆ. ಸಭೆ ಸೇರಿದ ಮೇಲೆ
ರಾಜಕೀಯ ಚರ್ಚೆ ಆಗಿಯೇ ಆಗುತ್ತದೆ. ನೆರೆ, ಅಭಿವೃದ್ಧಿ, ರಾಜಕೀಯ ಬೇಜವಾಬ್ದಾರಿತನ, ವ್ಯಕ್ತಿಗತ ಚಾರಿತ್ರ್ಯಹರಣ, ಒಬ್ಬರ ಮೇಲೆ ಕಪ್ಪು ಮಸಿ ಬಳಿಯೋದೇ ಹೀಗೆ ಎಂಬೆಲ್ಲ ವಿಚಾರಗಳೂ ಚರ್ಚೆ ಆಗಿವೆ ಎಂದಷ್ಟೇ ಹೇಳಿದರು.