ವಕೀಲ ವೃತ್ತಿ ಹುಲಿಯ ಮೇಲಿನ ಸವಾರಿ
ಸಂಜೆವಾಣಿ ನ್ಯೂಸ್
ಮೈಸೂರು: ಆ.04:- ವಕೀಲ ವೃತ್ತಿ ಎನ್ನುವುದು ಹುಲಿಯ ಮೇಲಿನ ಸವಾರಿ ಇದ್ದಂತೆ. ಆಯತಪ್ಪಿ ಕೆಳಗೆ ಬಿದ್ದರಂತೂ ಹುಲಿ ಬಲಿ ತೆಗೆದುಕೊಂಡು ಬಿಡುತ್ತದೆ. ಆದ್ದರಿಂದ ಈ ವೃತ್ತಿಗೆ ಪ್ರವೇಶ ಮಾಡುವವರು ಪ್ರಾಮಾಣಿಕತೆ, ಸೇವಾನಿಷ್ಠತೆಯಿಂದ ಕಾರ್ಯನಿರ್ವಹಿಸುವುದನ್ನು ಮೊದಲು ರೂಢಿಸಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸರಸ ವೆಂಕಟನಾರಾಯಣ ಭಟ್ಟಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ನಗರದ ಕುವೆಂಪುನಗರದಲ್ಲಿರುವ ಜೆಎಸ್‍ಎಸ್ ಕಾನೂನು ಕಾಲೇಜಿನಲ್ಲಿ ಶನಿವಾರ ನಡೆದ 16ನೇ ಪದವೀಧರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿದ ಅವರು, ಕುದುರೆ ಸವಾರಿ ಮಾಡುವಾಗ ಕೆಳಗೆ ಬಿದ್ದರೆ ಸಣ್ಣ-ಪುಟ್ಟ ಗಾಯಗಳು ಆಗಬಹುದು, ಸ್ವಲ್ಪ ಮುರಿತ ಉಂಟಾಗಬಹುದು. ಗಾಯಗಳನ್ನು ವಾಸಿ ಮಾಡಿಕೊಂಡು ಮತ್ತೆ ಸವಾರಿ ಮಾಡುವ ಅವಕಾಶವಿರುತ್ತದೆ. ಆದರೆ ಹುಲಿಯ ಸವಾರಿ ಆಗಲ್ಲ. ಕೆಳಗೆ ಬಿದ್ದರೆ ಮುಗಿಯಿತು. ಈ ಹಿನ್ನೆಲೆಯಲ್ಲಿ ವಕೀಲರಾದವರು ತಮ್ಮ ಸೇವಾ ಅವಧಿಯಲ್ಲಿ ಹೆಸರು ಕೆಡಿಸಿಕೊಳ್ಳಬಾರದು. ಜನರ ವಿಶ್ವಾಸ ಕಳೆದುಕೊಳ್ಳಬಾರದು. ಒಂದು ಸಾರಿ ಜನರ ವಿಶ್ವಾಸ ಕಳೆದುಕೊಂಡರೆ ವಕೀಲ ವೃತ್ತಿ ಮುಗಿದು ಹೋದಂತೆ. ಆದ್ದರಿಂದ ನೈತಿಕತೆ, ಉತ್ತಮ ನಡವಳಿಕೆಯನ್ನು ಬೆಳೆಸಿಕೊಳ್ಳುವುದು ಮುಖ್ಯ. ಇವೆ ವೃತ್ತಿಯ ಯಶಸ್ಸನ್ನು ಅಳೆಯುವ ಮಾನದಂಡಗಳಾಗಿವೆ. ಈ ವಿಷಯಗಳನ್ನು ಕಾನೂನು ಪದವಿ ಪಡೆದಿರುವ ವಿದ್ಯಾರ್ಥಿಗಳು ಗಮನದಲ್ಲಿ ಇಟ್ಟುಕೊಂಡಿರಬೇಕು ಎಂದು ಒತ್ತಿ ಹೇಳಿದರು.
ಪದವಿಯನ್ನು ಪಡೆದವರು ಮುಂದೆ ಅನೇಕ ಕಂಪೆನಿಗಳನ್ನು, ಸರ್ಕಾರದ ಸಂಸ್ಥೆಗಳನ್ನು ಹಾಗೂ ಪ್ರಭಾವಿ ವ್ಯಕ್ತಿಗಳನ್ನು ಪ್ರತಿನಿಧಿಸುವ ಅವಕಾಶ ಪಡೆದುಕೊಳ್ಳುತ್ತಾರೆ. ಅಂತಹ ಅತ್ಯುನ್ನತ ಮಟ್ಟದ ಯಶಸ್ಸನ್ನೂ ಗಳಿಸಿಕೊಂಡಿರುವಾಗಲೂ ಸಮಾಜದ ಕುಂದುಕೊರತೆಗಳ ಬಗ್ಗೆ ದನಿ ಎತ್ತಲು ಆಗದೆ ಇರುವ ಶ್ರೀಸಾಮಾನ್ಯನ ಮನವಿಯನ್ನು ಅಲಿಸಿ, ಆತನಿಗೆ ಧ್ವನಿಯಾಗಿ ನಿಲ್ಲುವುದನ್ನು ಯಾವಾಗಲೂ ಮರೆಯಬಾರದು. ಸಮಾಜದ ಕಟ್ಟಕಡೆಯ ವ್ಯಕ್ತಿ ಹಾಗೂ ಶಕ್ತಿಹೀನರ ಪರವಾಗಿ ವಕಲತ್ತು ವಹಿಸಿ, ನ್ಯಾಯಕ್ಕಾಗಿ ಹೋರಾಟ ಮಾಡಬೇಕು. ಈ ಹೋರಾಟದಲ್ಲಿ ಗೆದ್ದಾಗ ಆಗುವ ಸಮಾಧಾನ, ಆತ್ಮತೃಪ್ತಿಯೂ ಲಕ್ಷಾಂತರ ರೂ. ಶುಲ್ಕವನ್ನು ಪಡೆದಾಗಲೂ ಸಿಗುವುದಿಲ್ಲ ಎಂದರು.
ಪ್ರಸ್ತುತ ಪದವಿ ವಿದ್ಯಾರ್ಥಿಗಳು ಕೌಶಲಗಳು, ತಂತ್ರಜ್ಞಾನ ವೇಗವಾಗಿ ಬದಲಾಗುತ್ತಿರುವ ಕಾಲಘಟ್ಟದಲ್ಲಿ ಇರುವುದರಿಂದ ಹೊಸ-ಹೊಸ ಪಾಠೋಪಕರಣಗಳನ್ನು ಅಳವಡಿಸಿಕೊಂಡು, ಕಾಲಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳುತ್ತ ಅಭ್ಯಾಸ ಮಾಡುವ ಪ್ರವೃತ್ತಿಯನ್ನು ಬೆಳಸಿಕೊಳ್ಳಬೇಕು. ಇದೇ ಸಾಧನೆಯ ಕಡೆಗೆ ಹಾದಿಯನ್ನು ತೋರುವ ದಿಕ್ಸೂಚಿಯಾಗುತ್ತದೆ. ಇದಕ್ಕಾಗಿ ಅಚಲವಾದ ವಿಶ್ವಾಸ, ಬದ್ಧತೆ ಹಾಗೂ ಸಮರ್ಪಣಾ ಮನೋಭಾವನೆಯನ್ನು ಹೊಂದಬೇಕು. ಇವುಗಳಿಗೆ ಒಗ್ಗಿಕೊಂಡವರು ಮಾತ್ರ ವೃತ್ತಿಯಲ್ಲಿ ಅಭಿವೃದ್ಧಿ ಹೊಂದುತ್ತಾರೆ. ಇತ್ತೀಚಿಗೆ ಎಲ್ಲದಕ್ಕೂ ತಂತ್ರಜ್ಞಾನದ ಸಹಾಯ ಪಡೆಯುವುದು ಮಾಮೂಲಿಯಾಗಿದೆ. ಕಾನೂನು ಕ್ಷೇತ್ರವೂ ಇದಕ್ಕೆ ಹೊರತಾಗಿಲ್ಲ. ಆದರೆ ವಕೀಲರ ಸೇವೆಯ ಅಗತ್ಯ ಮನುಷ್ಯರಿಗೆ ಹೆಚ್ಚಾಗಿ ಬೇಕಾಗಿರುವುದರಿಂದ ಈ ವೃತ್ತಿಯನ್ನು ಮಾಡುವವರು ಮೊದಲು ಮನುಷ್ಯತ್ವವನ್ನು ಬೆಳಸಿಕೊಳ್ಳಬೇಕು. ಮಾನವೀಯತೆಯನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿದ್ದ ಕಾನೂನು ವಿವಿ ಕುಲಪತಿ ಪೆÇ್ರ ಸಿ.ಬಸವರಾಜು ಮಾತನಾಡಿ, ಸಂವಿಧಾನವನ್ನು ಅಳವಡಿಸಿಕೊಂಡು 75 ವರ್ಷವಾದರೂ ಸಮಾಜದಲ್ಲಿ ಅಸಮಾನತೆ, ಲಿಂಗ ತಾರತಮ್ಯ ಸೇರಿದಂತೆ ಇನ್ನೂ ಹಲವಾರು ಸಾಮಾಜಿಕ ಪಿಡುಗುಗಳು ಸಂಪೂರ್ಣವಾಗಿ ತೊಡೆದುಹೋಗಿಲ್ಲ. ಆದ್ದರಿಂದ ಕಾನೂನು ವಿದ್ಯಾರ್ಥಿಗಳು ಹೊಸ ಜವಾಬ್ದಾರಿಗಳನ್ನು ತಮ್ಮ ಭುಜದ ಮೇಲೆ ಹೊರಬೇಕಾಗಿದೆ. ತಳಮಟ್ಟದ ವ್ಯಕ್ತಿ?ಗಳಿಗೆ, ಅನ್ಯಾ?ಯಕ್ಕೆ ಒಳಗಾದ ಸಮುದಾಯಕ್ಕೆ ನ್ಯಾ?ಯ ಕೊಡಿಸುವ ಮೂಲಕ ಭಾರತದ ಸಂವಿಧಾನದ ಮೌಲ್ಯವನ್ನು ಎತ್ತಿ ಹಿಡಿಯಬೇಕಾಗಿದೆ ಎಂದರು.
16 ವಿದ್ಯಾರ್ಥಿಗಳಿಗೆ ರ್ಯಾಂಕ್:
ಬಿಎ ಎಲ್‍ಎಲ್‍ಬಿ, ಬಿಬಿಎ ಎಲ್‍ಎಲ್ಬಿ, ಎಲ್‍ಎಲ್‍ಬಿ ಹಾಗೂ ಎಲ್‍ಎಲ್‍ಎಂನಿಂದ ಒಟ್ಟು 16 ವಿದ್ಯಾರ್ಥಿಗಳು ರ್ಯಾಂಕ್ ಪಡೆದಿದ್ದರು. ಇವರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು. 129 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.
ಹೈಕೋರ್ಟ್ ನ್ಯಾಯಾಧೀಶರಾದ ಎಂ.ಜಿ.ಉಮಾ ಅಧ್ಯಕ್ಷತೆವಹಿಸಿದ್ದರು. ಜೆಎಸ್‍ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರ ಮಠ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಬೋಧಿಸಿದರು. ಕಾನೂನು ಕಾಲೇಜಿನ ಕಾರ್ಯನಿರ್ವಾಹಕ ಅಧಿಕಾರಿ ಪೆÇ್ರ.ಕೆ.ಎಸ್.ಸುರೇಶ್, ಪ್ರಾಂಶುಪಾಲೆ ಡಾ.ಎನ್.ವಾಣಿಶ್ರೀ, ಪ್ರಾಧ್ಯಾಪಕರಾದ ಶಿವಾನಂದ ಭಾರತಿ, ಪೆÇ್ರ.ನಾಗೇಂದ್ರ ಮೂರ್ತಿ ಮತ್ತಿತರರು ಹಾಜರಿದ್ದರು.