ಪೌಷ್ಟಿಕಾಂಶಯುಕ್ತ ಆಹಾರ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಆ.04: ಹೆಣ್ಣು ಮಕ್ಕಳು ಪೌಷ್ಠಿಕಾಂಶಗಳಿಂದ ಕೂಡಿರುವ ಸೊಪ್ಪು, ತರಕಾರಿ, ಹಣ್ಣುಗಳನ್ನು ಸೇವಿಸಿ ಅಮೂಲ್ಯವಾದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಕಾರ್ಯಕ್ರಮಾಧಿಕಾರಿ ಮೂಕಾಂಬಿಕ ಹೇಳಿದರು.
ಅವರು ತಾಲೂಕಿನ ಮೋದೂರು ಹಾಗೂ ಹೊಸಹೊಳಲು ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಕಾರ್ಯಕ್ರಮದ ಅಡಿಯಲ್ಲಿ ಪೌಷ್ಠಿಕಾಂಶ ಆಹಾರ ಪ್ರದರ್ಶನ ಹಾಗೂ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರು ಮತ್ತು ಮಕ್ಕಳು ಅಪೌಷ್ಠಿಕತೆ ಹಾಗೂ ರಕ್ತಹೀನತೆಯಿಂದ ಬಳಲುತ್ತಿದ್ದಾರೆ.
ನಮ್ಮ ಮನೆಯ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳದ ಕಾರಣದಿಂದಾಗಿ ಡೆಂಗ್ಯೂ, ವಿಷಮಶೀಥ ಜ್ವರ ಸೇರಿದಂತೆ ಹಲವಾರು ಖಾಯಿಲೆಗಳಿಂದ ಬಳಲುತ್ತಿದ್ದಾರೆ.
ನಾನು ಮನೆಯಲ್ಲಿ ಹಸುವನ್ನು ಕಟ್ಟಿಕೊಂಡು ಹಾಲನ್ನು ಉತ್ಪಾದಿಸಿದರೂ ಹಾಲನ್ನು ಡೈರಿಗೆ ಹಾಕಿ ಹಣ ಸಂಪಾಧನೆಯತ್ತ ಗಮನ ಹರಿಸುತ್ತೇವೆಯೋ ಹೊರತು ಪರಿಶುದ್ಧವಾದ, ಅಮೃತಕ್ಕೆ ಸಮಾನವಾದ ಹಾಲನ್ನು ನಾವು ಕುಡಿದು ನಮ್ಮ ಮಕ್ಕಳಿಗೆ ಸಾಕಷ್ಟು ಹಾಲನ್ನು ಕುಡಿಯಲು ನೀಡುವುದಿಲ್ಲ ಎನ್ನುವುದು ವಿಪರ್ಯಾಸದ ಸಂಗತಿಯಾಗಿದೆ. ನಾವು ನಮ್ಮ ಕೈತೋಟದಲ್ಲಿಯೇ ಬೆಳೆಯುವ ಸೊಪ್ಪು, ತರಕಾರಿಗಳು, ಹಣ್ಣು-ಹಂಫಲುಗಳು, ಮೊಳಕೆ ಕಾಳುಗಳು ಸೇರಿದಂತೆ ಮೊಟ್ಟೆ, ಹಾಲು, ಬೆಣ್ಣೆ, ತುಪ್ಪ ಮುಂತಾದ ಪೌಷ್ಠಿಕಾಂಶಗಳಿಂದ ಕೂಡಿರುವ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುವ ಮೂಲಕ ನಮ್ಮ ಆರೋಗ್ಯದ ಬಗ್ಗೆಯೂ ಗಮನ ಹರಿಸಬೇಕು. ಕುಡಿಯಲು ಶುದ್ಧವಾದ ನೀರನ್ನೇ ಬಳಸಿ ಸ್ವಚ್ಛತೆ ಸೇರಿದಂತೆ ಪರಿಸರ ನೈರ್ಮಲ್ಯದ ಬಗ್ಗೆ ನಮ್ಮ ಅಕ್ಕಪಕ್ಕದ ಮನೆಗಳ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಕಿವಿಮಾತು ಹೇಳಿದ ಮೂಕಾಂಬಿಕ ಆರೋಗ್ಯ ಭಾಗ್ಯಕ್ಕಿಂತ ಮಿಗಿಲಾದ ಭಾಗ್ಯವು ವಿಶ್ವದಲ್ಲಿಯೇ ಯಾವುದೂ ಇಲ್ಲವಾದ್ದರಿಂದ ನಮ್ಮ ಮನೆಯ ಹಿತ್ತಲಿನಲ್ಲಿ ಸಿಗುವ ಸೊಪ್ಪು ತರಕಾರಿಗಳನ್ನು ಹೆಚ್ಚಾಗಿ ಸೇವಿಸಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಕರೆ ನೀಡಿದರು.
ಕೃಷಿ ಅಧಿಕಾರಿ ಮಂಜುನಾಥ್, ತಾಲೂಕು ಜ್ಞಾನವಿಕಾಸ ಅಧಿಕಾರಿ ಗೀತಾಮನೋಜ್, ಜ್ಞಾನವಿಕಾಸ ಕಾರ್ಯಕ್ರಮ ಸಂಯೋಜಕಿ ಭಾರತಿ ಸೇರಿದಂತೆ ಸೃಷ್ಠಿ ಜ್ಞಾನ ವಿಕಾಸ ಕೇಂದ್ರ ಹಾಗೂ ವಿಘ್ನೇಶ್ವರ ಜ್ಞಾನ ವಿಕಾಸ ಕೇಂದ್ರದ ವ್ಯಾಪ್ತಿಯ ವಿವಿಧ ಸಂಘಗಳ ಸದಸ್ಯೆಯರು ಹಾಗೂ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.