ಪ್ರತಿತಿಂಗಳು ನಾಡಹಬ್ಬ-ನುಡಿ,ನೆಲ,ಜಲದ ಸ್ಮರಣೆ ಶ್ಲಾಘನೀಯ
ಕೋಲಾರ,ಆ,೪-ವರ್ಷಕ್ಕೊಮ್ಮೆ ನಾಡಹಬ್ಬ ಆಚರಿಸಿ ಮರೆತುಬಿಡುವ ನಮಗೆ ಪ್ರತಿತಿಂಗಳು ಕನ್ನಡ ರಾಜ್ಯೋತ್ಸವ ಆಚರಿಸುವ ಬಂಗಾರಪೇಟೆ ಕನ್ನಡ ಸಂಘ ನಾಡು,ನುಡಿ,ನೆಲ,ಜಲ ಹಾಗೂ ಕನ್ನಡತನವನ್ನು ನಿರಂತರವಾಗಿ ನೆನಪಿಸಿ ಸ್ಮರಿಸುವಂತೆ ಮಾಡುತ್ತಿದೆ ಎಂದು ಸಮಾಜಸೇವಕ ಎಸ್.ವೆಂಕಟನಾರಾಯಣ ಶ್ಲಾಘಿಸಿದರು.
ಬಂಗಾರಪೇಟೆ ಪಟ್ಟಣದ ಕುವೆಂಪು ವೃತ್ತದಲ್ಲಿ ಆ.೧ ರಂದು ಬಂಗಾರಪೇಟೆ ಕನ್ನಡ ಸಂಘದಿಂದ ನಡೆದ ೧೨೩ನೇ ತಿಂಗಳ ಕನ್ನಡ ಸಾಂಸ್ಕೃತಿಕ ಸಮಾರಂಭದಲ್ಲಿ ನೀಡಲಾದ ಸನ್ಮಾನ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
ಕನ್ನಡ ನಾಡು,ನುಡಿಯ ನೆನಪು ಒಂದು ದಿನಕ್ಕೆ ಸೀಮಿತವಾಗಬಾರದು, ಅದು ನಿರಂತರವಾಗಿರಬೇಕು, ನಮ್ಮ ಮಾತೃಭಾಷೆಯ ಕುರಿತು ನಮಗೆ ಹೆಮ್ಮೆ ಇರಬೇಕು ಎಂದ ಅವರು,ಬದುಕಲು ಇಂಗ್ಲೀಷ್ ಕಲಿತರೂ ಕನ್ನಡ ಮರೆಯಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಸನ್ಮಾನ ಸ್ವೀಕರಿದ ಮತ್ತೊಬ್ಬ ಸಾಧಕರಾದ ವೃಕ್ಷಪ್ರೇಮಿ ಬಂಗಾರಪೇಟೆಯ ವೆಂಕಟೇಶಪ್ಪ ಮಾತನಾಡಿ, ಪ್ರಕೃತಿಯ ವಿರುದ್ದ ನಾವು ನಡೆದುಕೊಂಡರೆ ಎಂತಹ ಅನಾಹುತಗಳಾಗುತ್ತವೆ ಎಂಬುದನ್ನು ಈ ಬಾರಿ ಕೇರಳ ಮತ್ತಿತರ ಕಡೆಗಳಲ್ಲಿ ಬೀಳುತ್ತಿರುವ ಮಳೆ,ಗುಡ್ಡಕುಸಿತ ಸಾಕ್ಷೀಕರಿಸಿದೆ ಆದ್ದರಿಂದ ಪ್ರಕೃತಿಯ ಮಡಿಲಲ್ಲಿ ನಾವು ಮಕ್ಕಳಾಗಬೇಕೇ ಹೊರತೂ ಅದನ್ನು ನಾಶಪಡಿಸುವ ದುಷ್ಟರಾಗಬಾರದು ಎಂದು ತಿಳಿಸಿ, ಗಿಡ ಮರ ಬೆಳೆಸೋಣ ಮುಂದಿನ ಪೀಳಿಗೆಗೆ ಉತ್ತಮ ಗಾಳಿ ನೀಡೋಣ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಂಗಾರಪೇಟೆ ಕನ್ನಡ ಸಂಘದ ಅಧ್ಯಕ್ಷ ಪಲ್ಲವಿ ಮಣಿ ಮಾತನಾಡಿ, ಸಂಘದಿಂದ ಪ್ರತಿ ತಿಂಗಳ ೧ನೇ ತಾರೀಕು ನಾವು ಕನ್ನಡ ರಾಜ್ಯೋತ್ಸವ, ಸಾಂಸ್ಕೃತಿಕ ಹಬ್ಬ ಆಚರಿಸುತ್ತಿದ್ದೇವೆ, ಇದು ೧೨೩ನೇ ತಿಂಗಳ ಸಾಂಸ್ಕೃತಿಕ ಹಬ್ಬವಾಗಿದೆ ಎಂದರು.
ಪ್ರತಿ ತಿಂಗಳ ನಾಡಹಬ್ಬದಲ್ಲೂ ಒಂದಿಬ್ಬರು ಸಾಧಕರನ್ನು ಗುರುತಿಸಿ ಗೌರವಿಸುವ ಕೆಲಸ ಮಾಡುತ್ತಿದ್ದೇವೆ, ಇದರಿಂದ ಸಮಾಜದಲ್ಲಿ ಒಳ್ಳೆಯ ಕೆಲಸಗಳಿಗೆ ಮನ್ನಣೆ ಸಿಗಲಿ, ಅದು ಇತರರಿಗೂ ಪ್ರೇರಣೆಯಾಗಲಿ ಎಂಬುದೇ ನಮ್ಮ ಉದ್ದೇಶವಾಗಿದೆ, ಗಡಿ ತಾಲ್ಲೂಕಿನಲ್ಲಿ ನಿರಂತರವಾಗಿ ಕನ್ನಡ ಮೊಳಗಬೇಕು ಎಂಬ ಆಶಯದೊಂದಿಗೆ ಈ ಕಾರ್ಯಕ್ರಮ ಮುಂದುವರೆಸಿಕೊಂಡು ಹೋಗುತ್ತಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಮುಳಬಾಗಿಲಿನ ವಿದ್ಯಾದಾತರು, ಅನ್ನದಾತರು ಹಾಗೂ ಸಮಾಜಸೇವಕರಾದ ಎಸ್.ವೆಂಕಟನಾರಾಯಣ ಹಾಗೂ ಬಂಗಾರಪೇಟೆಯ ವೃಕ್ಷಪ್ರೇಮಿ ವೆಂಕಟೇಶಪ್ಪ ಅವರನ್ನು ಸನ್ಮಾನಿಸಲಾಯಿತು.
ಎಸ್‌ವಿಆರ್ ಗ್ಲೋಬಲ್ ಸ್ಟ್ಯಾಂಡರ್ಡ್ ಶಾಲೆ, ಅವಿಘ್ನ ನಾಟ್ಯಾಲಯ, ಶೈನಿಂಗ್ ಸ್ಟಾರ್ ಡ್ಯಾನ್ಸ್ ಅಕಾಡೆಮಿ, ನಾಟ್ಯಾಂಜಲಿ ಕಲಾ ತಂಡ, ಡ್ಯಾನ್ಸ್ ಫ್ರೀಕ್ ಅಕಾಡೆಮಿ ತಂಡದವರಿಂದ ಅಮೋಘ ನೃತ್ಯ ಪ್ರದರ್ಶನ ಕಾರ್ಯಕ್ರಮ ಜನಮನಸೂರೆಗೊಂಡಿತು.
ಕಾರ್ಯಕ್ರಮದಲ್ಲಿಮುಖ್ಯ ಅತಿಥಿಗಳಾಗಿ ಬೆಸ್ಕಾಂ ಎಇಇ ಚಲಪತಿ, ಪರ್ವತ್ ಸ್ಪೋರ್ಟ್ಸ್ ಮಾಲೀಕ ಆನಂದರೆಡ್ಡಿ ಭಾಗವಹಿಸಿದ್ದು, ಸಣಘದ ಸದಸ್ಯರಾದ ನಂಜಪ್ಪ, ಮುರಳೀ, ಪ್ರಸಾದ್, ಹೇಮಂತ್, ವೈ.ವಿ.ರಮೇಶ್, ಗೋವಿಂದಪ್ಪ, ಡಾ.ಬಸವರಾಜ್, ವಕೀಲರಾದ ಜಯಪ್ರಕಾಶ್, ವೇಣುಗೋಪಾಲ್, ಬಿ.ಸಿಪರಮೇಶ್, ವೆಂಕಟೇಶ್ವರಾಚಾರಿ ಮತ್ತಿತರರು ಉಪಸ್ಥಿತರಿದ್ದರು.