ಯಡಿಯೂರಪ್ಪರ ಭ್ರಷ್ಟ ಕುಟುಂಬ ನಾನು ಒಪ್ಪಲ್ಲ: ಯತ್ನಾಳ
ಸಂಜೆವಾಣಿ ವಾರ್ತೆ,
ವಿಜಯಪುರ,ಆ.೪: ಸಿಎಂ ಸಿದ್ದರಾಮಯ್ಯನವರಿಗೆ ತಾಕತ್ತು, ಧಮ್ ಇದ್ದರೆ ಕೋವಿಡ್‌ನಲ್ಲಿ ನಡೆದ ಭ್ರಷ್ಟಾಚಾರದ ತನಿಖೆ ಮಾಡಲಿ. ಎಲ್ಲ ಭ್ರಷ್ಟಾಚಾರದ ಹಗರಣಗಳ ತನಿಖೆ ಆಗಬೇಕು. ಭ್ರಷ್ಟ ಕುಟುಂಬ ನಾನು ಒಪ್ಪಲ್ಲ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪರೋಕ್ಷವಾಗಿ ಬಿ.ಎಸ್. ಯಡಿಯೂರಪ್ಪ ಕುಟುಂಬದ ವಿರುದ್ಧ ಹರಿ ಹಾಯ್ದರು.
ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ ಹಾಗೂ ವಿಜಯೇಂದ್ರ ಇಬ್ಬರದ್ದು ಹೊಂದಾಣಿಕೆ ಇದೆ. ಮೊದಲು ವಿಜಯೇಂದ್ರ ಭ್ರಷ್ಟಾಚಾರ ಹೊರಹಾಕಲಿ, ಪ್ರಧಾನಿ ನರೇಂದ್ರ ಮೋದಿ ಅವರು ಸಹಿತ ಈ ವಿಚಾರವಾಗಿ ಗಮನ ಹರಿಸಲಿ. ವಿಜಯೇಂದ್ರ ಇವರುಗಳ ಪೈಲ್ ಗಳಿಗೆ ಡಿಕೆಶಿ ತಕ್ಷಣ ಸಹಿ ಮಾಡುತ್ತಾರೆ. ಇಬ್ಬರು ಭ್ರಷ್ಟರಿದ್ದಾರೆ ಎಂದರು.
ಯಡಿಯೂರಪ್ಪ ನಿಮಗೆ ನೈತಿಕತೆ ಇದ್ದರೆ ಯಾವುದೇ ವೇದಿಕೆ ಹತ್ತಬಾರದು. ನಿಮ್ಮ ಹಗರಣ ಎಷ್ಟಿದೆ ಮೊದಲು ನೋಡಿಕೊಳ್ಳಿ, ಭ್ರಷ್ಟಾಚಾರ ಮಾಡಿದವರೇ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿದರೆ ಮಹತ್ವ ಇಲ್ಲ ಎಂದರು.
ಯಡಿಯೂರಪ್ಪ ಅಧಿಕಾರದಿಂದ ಇಳಿಯಲು ಕಾರಣವೇ ವಿಜಯೇಂದ್ರ. ವಾಲ್ಮೀಕಿ ಹಗರಣ ಮುಖ್ಯಮಂತ್ರೀಗಳೇ ಒಪ್ಪಿಕೊಂಡಿದ್ದಾರೆ. ಈ ಹಗರಣದಲ್ಲಿ ಕೆಪಿಸಿಸಿ ಅಧ್ಯಕ್ಷ ಇದ್ದಾರೆ, ರಾಹುಲ್ ಗಾಂಧಿ ಕೂಡಾ ಇದರ ಹಿಂದೆ ಇದ್ದಾರೆ ಎಂದರು.
ರಾಜ್ಯಪಾಲರ ಅಧಿಕಾರ ಇವರು ಪ್ರಶ್ನೆ ಮಾಡುತ್ತಾರೆ. ರಾಜ್ಯಪಾಲರು ಕಾನೂನು ಬದ್ದವಾಗಿ ಇದೆಲ್ಲವನ್ನು ಕೇಳಿದ್ದಾರೆ ಎಂದರು.
ಸಿದ್ದರಾಮಯ್ಯ ಶಿಕಾರಿಪುರದಲ್ಲಿ ಹಾಲುಮತ ಸಮಾಜದ ವೀಕ್ ಕ್ಯಾಂಡಿಡೇಟ್ ಹಾಕಿ ವಿಜಯೇಂದ್ರ ಗೆಲ್ಲಿಸಲು ಸಹಾಯ ಮಾಡಿದರು. ವರುಣಾದಲ್ಲಿ ಸೋಮಣ್ಣನವರನ್ನು ಯಡಿಯೂರಪ್ಪ ಗ್ಯಾಂಗ್ ನವರು ಸೋಲಿಸಿದರು ಎಂದರು.
ವಿಜಯೇAದ್ರನನ್ನು ತಕ್ಷಣ ಹೈಕಮಾಂಡ್ ವಜಾ ಮಾಡಬೇಕು. ಯಡಿಯೂರಪ್ಪ ಸಿಎಂ ಇದ್ದಾಗ ಮಾಡಿದ ಸಹಿಗಳು ಸಹಿತ ಯಾರದು ಎಂಬುದು ತನಿಖೆ ಮಾಡಲಿ. ಎಫ್‌ಎಸ್‌ಎಲ್ ವರದಿ ಪ್ರಕಾರ ತನಿಖೆ ಮಾಡಲಿ ಎಂದರು.
ವಿಜಯೇAದ್ರನ ಹಾಗೆ ನಾನು ಸಿಡಿಗಳನ್ನು ಇಟ್ಟುಕೊಂಡಿಲ್ಲ. ಯಡಿಯೂರಪ್ಪ ಕುಟುಂಬವೇ ಹೈ ಕಮಾಂಡ್. ನಿಮಗೆ ಬೇಕಾದರೆ ಯತ್ನಾಳ ಅವರನ್ನು ಉಚ್ಚಾಟನೆ ಮಾಡಲಿ. ನಾನು ರಾಜ್ಯದ ಜನರಿಗೆ ಉಚ್ಚಾಟನೆ ಮಾಡಿರುವ ವಿಚಾರವಾಗಿ ರಾಜ್ಯದ ಜನತೆಗೆ ತಿಳಿಸುವೆ. ನಾನು ಈಗ ಗಟ್ಟಿಯಾಗಿದ್ದೇನೆ. ಉಚ್ಚಾಟನೆ ಮಾಡಿದರೂ ಸಿದ್ದನಿದ್ದೇನೆ ಎಂದರು.
ರಾಜ್ಯ ಸರ್ಕಾರ ಎಲ್ಲ ರಂಗದಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ರಾಜ್ಯಪಾಲರಿಗೆ ಅಧಿಕಾರ ಇದೆ. ಅವರ ಅಧಿಕಾರ ಅದನ್ನು ಅವರು ಬಳಸಿದ್ದಾರೆ. ರಾಜ್ಯಪಾಲರು ದಲಿತ ಇದ್ದಾರೆ ಎಂಬ ಕಾರಣಕ್ಕೆ ಈ ಕಾಂಗ್ರೆಸ್‌ನವರು ಗಂಭೀರ ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.