ಹೂಳು ತೆಗೆಸಿ ಜಮೀನುಗಳಿಗೆ ನೀರು ಹರಿಸುವಂತೆ ಒತ್ತಾಯ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಸೆ.30: ಮುಚ್ಚಿ ಹೋಗಿರುವ ನಾಲೆಯ ಹೂಳು ತೆಗೆಸಿ ರೈತರ ಜಮೀನುಗಳಿಗೆ ಸಮರ್ಪಕ ನೀರು ಹರಿಸುವಂತೆ ಒತ್ತಾಯಿಸಿ ತಾಲೂಕು ರೈತಸಂಘದ ಕಾರ್ಯಕರ್ತರು ಪಟ್ಟಣದ ಹೆಚ್.ಎಲ್.ಬಿ.ಸಿ ನಂ 03 ವಿಭಾಗದ ಕಾರ್ಯಪಾಲಕ ಅಭಿಯಂತರರ ಕಛೇರಿಯ ಮುಂದೆ ಪ್ರತಿಭಟನೆ ನಡೆಸಿದರು.
ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ನೇತೃತ್ವದಲ್ಲಿ ರೈತರು ಬೇಡಿಕೆ ಈಡೇರಿಕೆಗಾಗಿ ಒತ್ತಾಯಿಸಲು ಪಟ್ಟಣದ ಹೆಚ್.ಎಲ್.ಬಿ.ಸಿ ನಂ 03 ವಿಭಾಗದ ಕಾರ್ಯಪಾಲಕ ಅಭಿಯಂತರರ ಕಛೇರಿಗೆ ಆಗಮಿಸಿದರು. ಆದರೆ ಕಛೇರಿಯಲ್ಲಿ ಯಾವುದೇ ಎಂಜಿನಿಯರುಗಳು ಇರಲಿಲ್ಲ. ಕಾರ್ಯಪಾಲಕ ಅಭಿಯಂತರರ ಕಛೇರಿಯ ಬಾಗಿಲು ಬಂದ್ ಆಗಿತ್ತು. ಸಮಸ್ಯೆಗಳನ್ನು ಕೇಳುವವರಿಲ್ಲದೆ ನೀರಾವರಿ ಇಲಾಖೆಯ ಕಛೇರಿ ಅನಾಥವಾಗಿತ್ತು. ಇದರಿಂದ ಕೆರಳಿದ ರೈತರು ಸುಮಾರು ಎರಡು ಘಂಟೆಗಳ ಕಾಲ ಬೀಗ ಹಾಕಿದ್ದ ಕಾರ್ಯಪಾಲಕ ಅಭಿಯಂತತರ ಕಛೇರಿಯ ಬಾಗಿಲಿನಲ್ಲಿ ಕುಳಿತು ನೀರಾವರಿ ಇಲಾಖೆಯ ಕಾರ್ಯವೈಕರಿಯ ವಿರುದ್ದ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.
ಪ್ರತಿಭಟನಾ ಸ್ಥಳದಲ್ಲಿ ಮಾತನಾಡಿದ ತಾಲೂಕು ರೈತಸಂಘದ ಅಧ್ಯಕ್ಷ ಪುಟ್ಟೇಗೌಡ ಹೇಮಾವತಿ ಜಲಾಶಯದ ಸಾಹುಕಾರ್ ಚನ್ನಯ್ಯ ನಾಲಾ ವ್ಯಾಪ್ತಿಗೆ ಸೇರಿದ 54 ನೇ ವಿತರಣಾ ನಾಲೆ ಸಂಪೂರ್ಣ ಮುಚ್ಚಿ ಹೋಗಿದೆ. ಇದರಿಂದಾಗಿ ತಾಲೂಕಿನ ಗಾಂಧಿ ನಗರದಿಂದ ಕೃಷ್ಣಾಪುರ, ಲಿಂಗಾಪುರ ಮತ್ತು ಚೌಡೇನಹಳ್ಳಿ ಭಾಗದ ನೂರಾರು ಎಕರೆ ಪ್ರದೆಶದ ರೈತರು ಹೇಮೆಯ ನೀರಿನಿಂದ ವಂಚಿತರಾಗಿದ್ದಾರೆ. ನಾಲೆಯಲ್ಲಿ ನೀರು ಹರಿಯದಿರುವುದರಿಂದ ಈ ಭಾಗದಲ್ಲಿ ರೈತರು ಬೆಳೆದಿರುವ ಅಪಾರ ಪ್ರಮಣದ ತೆಂಗು, ಅಡಿಕೆ, ಕಬ್ಬು ಮುಂತಾದ ಬೆಳೆಗಳು ಒಣಗಿ ಹೋಗುತ್ತಿವೆ. ಸದರಿ ವಿತರಣಾ ನಾಲೆಯಲ್ಲಿ ಗಿಡಗೆಂಟೆಗಳು ಬೆಳೆದು ಮುಚ್ಚಿಹೋಗಿರುವುದರಿಂದ ನಾಲೆಯಲ್ಲಿ ನೀರು ಹರಿಸಿದರೂ ಅದು ಕಾಲುವೆಯ ಮೂಲಕ ರೈತರ ಹೊಲಗದ್ದೆಗಳಿಗೆ ತಲುಪುತ್ತಿಲ್ಲ. ಸದರಿ ನಾಲೆಯನ್ನು ದುರಸ್ತಿಗೊಳಿಸಿ ರೈತರಿಗೆ ನೀರು ಕೊಡುವಂತೆ ಹತ್ತು ಹಲವು ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಇತ್ತೀಚೆಗೆ ತಾಲೂಕಿನ ಬೂಕನಕೆರೆಯಲ್ಲಿ ಜಿಲ್ಲಾಧಿಕಾರಿಗಳು ನಡೆಸಿದ ಜನಸ್ಪಂದನಾ ಸಭೆಯಲ್ಲಿಯೂ ರೈತರು ನಾಲೆಯ ಸಮಸ್ಯೆಯನ್ನು ಪ್ರಸ್ತಾಪಿಸಿದ್ದರು. ಈ ಬಗ್ಗೆ ಕ್ರಮ ವಹಿಸಲು ಜಿಲ್ಲಾಧಿಕಾರಿಗಳು ಸೂಚಿಸಿದ್ದರೂ ನೀರಾವರಿ ಇಲಾಖೆ ಜಿಲ್ಲಾಧಿಕಾರಿಗಳ ಆದೇಶವನ್ನು ಕಸದ ಬುಟ್ಟಿಗೆ ಎಸೆದಿದೆ ಎಂದು ದೂರಿದರು.
ನೀರಾವರಿ ಇಲಾಖೆಯ ಎಂಜಿನಿಯರುಗಳು ಅವಶ್ಯಕತೆ ಇರುವ ಕಡೆ ಸರ್ಕಾರಿ ಅನುದಾನ ಉಪಯೋಗಿಸಿ ಕಾಮಗಾರಿ ನಡೆಸುವ ಬದಲು ಅವಶ್ಯಕತೆಯಿಲ್ಲದ ಕಡೆ ಕಾಮಗಾರಿ ನಡೆಸಿ ರೈತ ಸಮುದಾಯಕ್ಕೆ ಮೋಸ ಮಾಡುತ್ತಿದ್ದಾರೆ.54 ನೇ ವಿತರಣಾ ನಾಲೆಯನ್ನು ದುರಸ್ತಿಗೊಳಿಸದ ಪರಿಣಾಮ ಮುಖ್ಯ ಕಾಲುವೆಯಲ್ಲಿ ಹರಿಸಿದ ನೀರು ನಿರುಪಯುಕ್ತವಾಗಿ ಹಳ್ಳಕ್ಕೆ ಸೇರುತ್ತಿದೆ. ಕೆಲಸ ಮಾಡದ ಎಂಜಿನಿಯರುಗಳ ಅವಶ್ಯಕತೆ ನಮಗಿಲ್ಲ. ಎಂಜಿನಿಯರುಗಳು ಕಛೇರಿಯಲ್ಲಿ ಕುಳಿತು ರೈತರ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ಪ್ರಯತ್ನ ನಡೆಸುತ್ತಿಲ್ಲ. ಎಂಜಿನಿಯರುಗಳು ಕಛೇರಿಗೆ ಬಾರದಿದ್ದಮೇಲೆ ಕಛೇರಿಯಾದರೂ ಏಕೆ? ರಾಜ್ಯ ಸರ್ಕಾರ ಕಛೇರಿಯನ್ನು ಮುಚ್ಚಿ ಬಿಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದ ಪುಟ್ಟೇಗೌಡ ನೀರಾವರಿ ಇಲಾಖೆಯ ತಕ್ಷಣವೇ 54 ನೇ ವಿತರಣಾ ನಾಲೆಯನ್ನು ದುರಸ್ತಿಗೊಳಿಸಿ ರೈತರ ಹೊಲಗದ್ದೆಗಳಿಗೆ ನೀರು ಹರಿಸದಿದ್ದರೆ ಇಲಾಖೆಯ ಮುಂದೆ ಅನಿರ್ಧಿಷ್ಠ ಕಾಲದ ಹೋರಾಟವನ್ನು ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.
ರೈತ ಮುಖಂಡರಾದ ಕೃಷ್ಣಾಪುರ ರಾಜಣ್ಣ, ರಾಮಯ್ಯ, ಲಿಂಗಾಪುರ ರೇವಣ್ಣ, ಚೌಡೇನಹಳ್ಳಿ ಕೃಷ್ಣೇಗೌಡ ಸೇರಿದಂತೆ ಹಲವರಿದ್ದರು.