ಸುತ್ತೂರು ಮಠದೊಂದಿಗೆ ಶಿವಕುಮಾರ ಶ್ರೀಗಳ ಒಡನಾಟ
ಸಂಜೆವಾಣಿ ವಾರ್ತೆ
ತಿ.ನರಸೀಪುರ: ಸೆ.30 :ಸುತ್ತೂರು ಮಠದ ಹಿರಿಯ ಶ್ರೀಗಳಾದ ಮಂತ್ರ ಮಹರ್ಷಿ ಸ್ವಾಮೀಜಿ, ಡಾ.ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರೊಂದಿಗೆ ಉತ್ತಮ ಒಡನಾಟವಿಟ್ಟುಕೊಂಡು ಹಲವಾರು ಸಮಾಜಮುಖಿ ಕಾರ್ಯಗಳಲ್ಲಿ ಭಾಗಿಯಾಗಿದ್ದವರು ನೆರಗ್ಯಾತನಹಳ್ಳಿ ವಿರಕ್ತ ಮಠದ ಹಿರಿಯ ಶ್ರೀ ಶಿವಕುಮಾರ ಸ್ವಾಮೀಜಿಗಳು ಎಂದು ವಾಟಾಳು ಸೂರ್ಯ ಸಿಂಹಾಸನ ಮಠದ ಪೀಠಧ್ಯಕ್ಷರಾದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಬಣ್ಣಿಸಿದರು.
ತಾಲೂಕಿನ ನೆರಗ್ಯಾತನಹಳ್ಳಿ ಗ್ರಾಮದ ವಿರಕ್ತ ಮಠದಲ್ಲಿ ಭಾನುವಾರ ಆಯೋಜಿಸಿದ್ದ ಲಿಂಗೈಕ್ಯ ಶ್ರೀ ಶಿವಕುಮಾರಸ್ವಾಮೀಜಿ ಅವರ 52ನೇ ಪುಣ್ಯ ಸ್ಮರಣೆ, ಲಿಂಗೈಕ್ಯ ಶ್ರೀ ರಾಜಶೇಖರ ಸ್ವಾಮೀಜಿಗಳ ಪ್ರಥಮ ಪುಣ್ಯ ಸ್ಮರಣೆ ಹಾಗೂ ಶ್ರೀಗಳವರ ನೂತನ ಗದ್ದುಗೆ ಉದ್ಘಾಟನಾ ಸಮಾರಂಭದಲ್ಲಿ ಗದ್ದುಗೆ ಉದ್ಘಾಟಿಸಿ ಮಾತನಾಡಿದರು.
ಸುತ್ತೂರು ಮಠದಿಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದ ಶಿವಕುಮಾರ ಸ್ವಾಮೀಜಿ ಉಪಯುಕ್ತ ಮಾರ್ಗದರ್ಶವನ್ನೂ ನೀಡುತ್ತಿದ್ದರು. ಅವರ ಆಶೀರ್ವಾದಿಂದ ಮಠ ಅಭಿವೃದ್ಧಿ ಪಥದತ್ತ ಮುನ್ನಡೆಯುತ್ತಿರುವುದು ಸಂತಸದ ಸಂಗತಿ ಎಂದರು.
ಶ್ರೀ ಗಳ ಪುಣ್ಯ ಸ್ಮರಣೆ ಹಾಗೂ ಗದ್ದುಗೆ ಉದ್ಘಾಟನೆ ಹಿನ್ನೆಲೆ ಬೆಳಗ್ಗೆಯಿಂದಲೇ ಮಠದ ಶ್ರೀ ಗಳಾದ ಇಮ್ಮಡಿ ಶಿವಕುಮಾರ ಸ್ವಾಮೀಜಿ ನೇತೃತ್ವದಲ್ಲಿ ಹಾಗೂ ಇನ್ನಿತರ ಮಠಗಳ ಸ್ವಾಮೀಜಿಗಳ ಸಹಕಾರದೊಂದಿಗೆ ವಿವಿಧ ಪೂಜಾ ಕಾರ್ಯಗಳು ಹಾಗೂ ಕನಕಪುರ ದೇಗುಲ ಮಠದ ಶ್ರೀ ಚನ್ನಬಸವ ಸ್ವಾಮೀಜಿ ಅವರ ಪಾದಪೂಜೆ ನೆರವೇರಿತು.
ಸಮಾರಂಭದಲ್ಲಿ ತಿ.ನರಸೀಪುರದ ಸೇತುವೆ ಮಠದ ಶ್ರೀಗಳು, ಮುಡುಕುತೊರೆ ಕಲ್ಮಠದ ಶ್ರೀ, ಮಾಡ್ರಳ್ಳಿ ಮಠ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಮಠಾಧೀಶರು,ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕೋತಕಾರಿಯ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಭೋಜರಾಜು, ನೆರಗ್ಯಾತನಹಳ್ಳಿ ಗ್ರಾಮಸ್ಥರು ಹಾಗೂ ವಿವಿಧ ಗ್ರಾಮಗಳ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಾವಿರಾರು ಭಕ್ತರಿಗೆ ಅನ್ನ ದಾಸೋಹ ಏರ್ಪಡಿಸಲಾಗಿತ್ತು.