ರಾಜಕೀಯವಾಗಿ ತೊಂದರೆ ಕೊಡಬಹುದಷ್ಟೇ, ಹೆದರೋನು ನಾನಲ್ಲ
ಸಂಜೆವಾಣಿ ನ್ಯೂಸ್
ಮೈಸೂರು,:ಸೆ.30:-ರಾಜಕೀಯವಾಗಿ ನನಗೆ ತೊಂದರೆ ಕೊಡಬಹುದು-ಆದರೆ ನನ್ನನ್ನು ಅಲ್ಲಾಡಿಸಲು ಸಾಧ್ಯವಿಲ್ಲ ಎಂದು ಸಿ.ಎಂ.ಸಿದ್ದರಾಮಯ್ಯ ಎಂದು ಹೇಳಿದರು.
ಮೈಸೂರು ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಅಶೋಕಪುರಂನಲ್ಲಿ ನಡೆದ ಕಾರ್ಯಕ್ರಮದಲ್ಲಿ 245 ವೀಳ್ಯದೆಲೆ ಬೆಳೆಗಾರರಿಗೆ ತಲಾ 0.5 ಗುಂಟೆ ಜಾಗ ನೀಡುವುದು ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಾಗೂ ದೊಡ್ಡಗರಡಿ, ಚಿಕ್ಕಗರಡಿ ಆವರಣಗಳಲ್ಲಿ ವ್ಯಾಯಾಮ ಶಾಲೆ, ಸಭಾಭವನ, ವಾಣಿಜ್ಯ ಸಂಕೀರ್ಣ ನಿರ್ಮಾಣ, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ದುರಸ್ಥಿ ಕಾರ್ಯಗಳನ್ನು ಉದ್ಘಾಟಿಸಿ ಮಾತನಾಡಿದರು.
ನನ್ನ ಆತ್ಮಸಾಕ್ಷಿ ಸರಿಯಾಗಿದೆ. ಆತ್ಮಸಾಕ್ಷಿಯಾಗಿ ನಾನು ಸರಿಯಾಗಿದ್ದೀನಿ. ಹೀಗಾಗಿ ನಾನು ಹೆದರುವ, ಜಗ್ಗುವ-ಬಗ್ಗುವ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿ-ಜೆಡಿಎಸ್ ಗೆ ನೇರ ತೊಡೆತಟ್ಟಿ ಹೇಳಿದರು. ಜನರ ಆಶೀರ್ವಾದ, ನಿಮ್ಮೆಲ್ಲರ ಬೆಂಬಲ ಇರುವವರೆಗೂ ನಾನು ಅಲ್ಲಾಡುವುದಿಲ್ಲ ಎಂದರು.
ಬಹಳ ಜನ ಬಂದು ಬಂದು ನನಗೆ, “ಧೈರ್ಯವಾಗಿರಿ, ರಾಜೀನಾಮೆ ಕೊಡಬೇಡಿ” ಅಂತಾರೆ. ನಾನು ಇದಕ್ಕೆಲ್ಲಾ ಹೆದರುವವನೇ ಅಲ್ಲ. ರಾಜಕೀಯವಾಗಿ ನನಗೆ ಒಂದೆರಡು ತಿಂಗಳು ತೊಂದರೆ ಕೊಡಬಹುದು. ಆದರೆ ಕಾನೂನಾತ್ಮಕವಾಗಿ ನಾನು ಗೆದ್ದೇ ಗೆಲ್ತೇನೆ. ರಾಜಕೀಯವಾಗಿ ಇದನ್ನೆಲ್ಲಾ ಎದುರಿಸಿ ನಿಲ್ಲೋದು ನನಗೆ ಗೊತ್ತಿದೆ ಎಂದು ಘೋಷಿಸಿದರು.
ಸಂಪ್ರದಾಯಿಕ ಬೆಳೆ ರಕ್ಷಣೆಗೆ ಕ್ರಮ: ನಂಜನಗೂಡು ರಸಬಾಳೆ, ಮೈಸೂರು ಮಲ್ಲಿಗೆ, ಮೈಸೂರು ವೀಳ್ಯದೆಲೆ, ಈರನಗೆರೆ ಬದನೆಕಾಯಿ ಮೈಸೂರಿನ ಹೆಮ್ಮೆಯ ಸಾಂಪ್ರದಾಯಿಕ ಬೆಳೆಗಳಾಗಿದ್ದು
ಈ ಬೆಳೆಗಳ ರಕ್ಷಣೆ, ವಿಸ್ತರಣೆಗೆ ಸರ್ಕಾರದಿಂದ ಕಾರ್ಯಕ್ರಮ ಘೋಷಣೆ ಮಾಡುತ್ತೇನೆ. ಅಶೋಕಪುರಂನ ಅಭಿವೃದ್ಧಿಗಾಗಿ ಅಗತ್ಯ ಇರುವ ಎಲ್ಲಾ ಕಾರ್ಯಕ್ರಮಗಳ ಪಟ್ಟಿ ಮಾಡಲು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ.ಮಹದೇವಪ್ಪ ಅವರಿಗೆ ಸೂಚಿಸಿದ್ದೇನೆ. ಅಗತ್ಯ ಅನುದನ ಕೊಡಲು ಸರ್ಕಾರ ಬದ್ದವಾಗಿದೆ ಎಂದು ಭರವಸೆ ನೀಡಿದರು.
ನಾವೆಲ್ಲಾ ಅಂಬೇಡ್ಕರ್ ವಾದಿಗಳು. ಅವಕಾಶಗಳಿಂದ ವಂಚಿತರಾದವರೆಲ್ಲರಿಗೂ ಸಮಾನ ಅವಕಾಶ ಸಿಗಬೇಕು ಎನ್ನುವುದು ನಮ್ಮ ಸಂವಿಧಾನದ ಆಶಯ. ಸಂವಿಧಾನ ಜಾರಿ ಸಭೆಯಲ್ಲಿ ಅಂಬೇಡ್ಕರ್ ಅವರು ಮಾಡಿದ 10 ಸಂಪುಟಗಳ ಭಾಷಣವನ್ನು ನಾನು ಕನ್ನಡಕ್ಕೆ ಮಾಡಿಸಿದ್ದೇನೆ. ಈ ಎಲ್ಲವನ್ನೂ ಪ್ರತಿಯೊಬ್ಬರೂ ಓದಬೇಕು. ನಾನು ಮುಖ್ಯಮಂತ್ರಿ ಆಗಿದ್ದೇ ಅಂಬೇಡ್ಕರ್ ಅವರ ಸಂವಿಧಾನದಿಂದ ಎಂದು ಸಂವಿಧಾನಕ್ಕೆ ಧನ್ಯತೆ ಅರ್ಪಿಸಿದರು.
ದೇಶದ ಬಜೆಟ್ ಗಾತ್ರ 48 ಲಕ್ಷ ಕೋಟಿ. ಇದರಲ್ಲಿ ಅಭಿವೃದ್ಧಿಗೆ 28 ಕೋಟಿ ಖರ್ಚಾಗುತ್ತದೆ. ಇದರಲ್ಲಿ ಶೇ24 ರಷ್ಟು ಹಣವನ್ನು ದಲಿತರ ಅಭಿವೃದ್ಧಿಗೆ ಕೊಡಬೇಕಿತ್ತು. ಆದರೆ ಕೊಡುತ್ತಿರುವುದು ಕೇವಲ 60 ಸಾವಿರ ಕೋಟಿ ಎಂದರು. ಆದರೆ ನಮ್ಮ ರಾಜ್ಯದ ಅಭಿವೃದ್ಧಿ ಬಜೆಟ್ ನಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಹಣ ಮೀಸಲಿಟ್ಟಿದ್ದೀವಿ. ಸಮಾಜದಲ್ಲಿ ಎಲ್ಲರಿಗೂ ಸಮಾನ ಅವಕಾಶಗಳನ್ನು ಒದಗಿಸಿಕೊಡುವ ಭಾಗವಾಗಿ ಈ ಹಣ ಮೀಸಲು ಎಂದರು.
ಬಜೆಟ್ ನಲ್ಲಿ 59000 ಕೋಡಿ ಹಣವನ್ನು ಗ್ಯಾರಂಟಿಗಳ ಜಾರಿಗಾಗಿ ಮೀಸಲಿಟ್ಟಿದ್ದೇನೆ. ಇಷ್ಟೂ ಹಣ ಎಲ್ಲಾ ಜಾತಿ, ಎಲ್ಲಾ ಧರ್ಮ ಮತ್ತು ಎಲ್ಲಾ ವರ್ಗದವರಿಗೂ ತಲುಪುತ್ತಿದೆ. ವಿರೋಧ ಪಕ್ಷಗಳು ಎಷ್ಟೇ ಸುಳ್ಳು, ಅಪಪ್ರಚಾರ ಮಾಡಿದರೂ ಈ ಗ್ಯಾರಂಟಿಗಳು ನಿಲ್ಲುವುದಿಲ್ಲ ಎಂದು ಪುನರುಚ್ಚಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ.ಮಹದೇವಪ್ಪ, ಶಾಸಕ ಶ್ರೀವತ್ಸ, ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಪುಷ್ಪಾ ಜ್ಞಾನ ಪ್ರಕಾಶ್ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯರಾದ ಡಾ.ತಿಮ್ಮಯ್ಯ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.