ಬಾಲ್ಯ ವಿವಾಹ ತಡೆಗೆ ಸಹಾಯವಾಣಿ 1098 ಅಥವಾ 112 ಕರೆ ಮಾಡಿ
ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಆ.೪; ಬಾಲ್ಯ ವಿವಾಹ ನಡೆಯುವ ಸಂದರ್ಭ ಕಂಡು ಬಂದರೆ, ಬಾಲ್ಯ ವಿವಾಹ ತಡೆಗೆ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಅಥವಾ ಪೊಲೀಸ್ ಇಲಾಖೆ ತುರ್ತು ಸೇವೆ 112 ಗೆ ಕರೆ ಮಾಡುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ವಿಜಯಕುಮಾರ್ ಹೇಳಿದರು. ಕುಂಚಿಗನಾಳ್ ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಮಿಷನ್ ಶಕ್ತಿ ಯೋಜನೆ ಅಡಿ ಬಾಲ್ಯ ವಿವಾಹ ನಿಷೇಧ ಕಾಯ್ದೆ ಅಂಗವಾಗಿ ಏರ್ಪಡಿಸಲಾದ ವಿಶೇಷ ಜಾಗೃತಿ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು.ಗ್ರಾಮದಲ್ಲಿ ಬಾಲ್ಯ ವಿವಾಹಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಹಿಳಾ ಮತ್ತು ಮಕ್ಕಳ ಕಾವಲು ಸಮಿತಿ ರಚಿಸಬೇಕು. ಈ ಸಮಿತಿ ಜನರಿಗೆ ಬಾಲ್ಯ ವಿವಾಹದ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಬೇಕು. ಚಿಕ್ಕ ಮಕ್ಕಳಿಗೆ ವಿವಾಹ ಮಾಡುವುದರಿಂದ ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಕಟ್ಟ ಪರಿಣಾಮ ಬೀರುತ್ತದೆ. ಸರ್ಕಾರ ಹೆಣ್ಣುಮಕ್ಕಳಿಗೆ 18 ಹಾಗೂ ಗಂಡು ಮಕ್ಕಳಿಗೆ 21 ವರ್ಷದ ವರೆಗೆ ಮದುವೆ ಮಾಡದಂತೆ ಬಾಲ್ಯ ವಿವಾಹ ನಿಷೇಧ ಕಾಯ್ದೆ ಜಾರಿ ಮಾಡಿದೆ. ಇದರ ಅನುಸಾರ ಬಾಲ್ಯ ವಿವಾಹಕ್ಕೆ ಕಾರಣರಾದರ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಿ ಶಿಕ್ಷೆ ಗುರಿ ಪಡಿಸಲಾಗುವುದು ಎಂದು ವಿಜಯಕುಮಾರ್ ತಿಳಿಸಿದರು.ಈ ಸಂದರ್ಭದಲ್ಲಿ ಚಿತ್ರದುರ್ಗ ಶಿಶು ಅಭಿವೃದ್ಧಿ ಯೋಜನಾಧಿಕಾರಿ ವೀಣಾ ಮಾತನಾಡಿ ಗರ್ಭಿಣಿ ಮತ್ತು ಬಾಣಂತಿಯರಿಗೆ ಸ್ತನ್ಯಪಾನ ಪ್ರಾಮುಖ್ಯತೆ ಬಗ್ಗೆ ತಿಳಿಸಿದರು. ಪ್ರಸವದ ಸಮಯದಲ್ಲಿ ತೆಗೆದುಕೊಳ್ಳಬೇಕಾದ ಪೌಷ್ಟಿಕ ಆಹಾರಗಳ ಹಾಗೂ ವೈಯಕ್ತಿಕ ಶುಚಿತ್ವದ ಬಗ್ಗೆ ವಿವರವಾದ ಮಾಹಿತಿ ನೀಡಿದರು.ಕಾರ್ಯಕ್ರಮಕ್ಕೂ ಮುನ್ನಾ ಸರ್ಕಾರಿ ಶಾಲಾ ಮಕ್ಕಳು ಬಾಲ್ಯ ವಿವಾಹ ನಿಷೇಧ ಕಾಯ್ದೆ ಕುರಿತು ಗ್ರಾಮದಲ್ಲಿ ಜಾಗೃತಿ ಜಾಥಾ ನಡೆಸಿದರು.ಈ ಸಂದರ್ಭದಲ್ಲಿ ಮೇಲ್ವಿಚಾರಕಿ ವಾಸವಿ, ಜಿಲ್ಲಾ ಮಹಿಳಾ ಸಬಲೀಕರಣ ಘಟಕದ ಮಿಷನ್ ಸಂಯೋಜಕ ವಿನಯ್.ಬಿ, ಜೆಂಡರ್ ಸ್ಪೆಷಲಿಸ್ಟ್ ಗೀತಾ.ಡಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿದ್ಯಾಶ್ರೀ, ಶಾಲಾ ಮುಖ್ಯ ಶಿಕ್ಷಕಿ ಮಂಜಳ, ಆರೋಗ್ಯ ಪರಿವಿಕ್ಷಕ ಮಾರುತಿ, ಬಾಗೇಶ್ ಉಗ್ರಾಣ, ಸೇರಿದಂತೆ ಅಂಗನವಾಡಿ, ಆಶಾ ಕಾರ್ಯಕರ್ತರು ಇದ್ದರು.