ಬಿತ್ತನೆಬೀಜ: ಪರಿಶುದ್ಧ, ಆರೋಗ್ಯವಾಗಿರಲಿ
ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಆ.೪; ಕೃಷಿಯಲ್ಲಿ ಅಧಿಕ ಇಳುವರಿ ಪಡೆಯ ಬೇಕಾದರೆ ಉತ್ತಮಗುಣಮಟ್ಟದ ಬೀಜದಕೊಡುಗೆ ಪ್ರಮುಖವಾಗಿದೆ. ಇಂಥ ಮಹತ್ವವುಳ್ಳ ಬೀಜದಗುಣಮಟ್ಟಕ್ಕೇನಾದರೂ ಕುಂದಾದರೆ ಬೆಳೆಯ ಉತ್ಪಾದನೆಯು ಕುಂಠಿತವಾಗುತ್ತದೆ. ಹಾಗಾಗಿ ಬಿತ್ತನೆ ಬೀಜ ಪರಿಶುದ್ಧವಾಗಿರಬೇಕು ಮತ್ತು ಆರೋಗ್ಯವಾಗಿರಬೇಕು ಎಂದು ಬಬ್ಬೂರುಫಾರಂ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ನಿರ್ದೇಶಕರು ಹಾಗೂ ಮುಖ್ಯಸ್ಥರಾದ ಆರ್.ರಜನೀಕಾಂತ ಅಭಿಪ್ರಾಯಪಟ್ಟರು.ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ ಹೋಬಳಿಯ ಎನ್.ಗೌರಿಪುರ ಗ್ರಾಮದಲ್ಲಿ ಈಚೆಗೆ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ವತಿಯಿಂದ ರೈತಭಾಂದವರಲ್ಲಿ ಬಿಜೋಪಚಾರ ಮತ್ತು ಸುರಕ್ಷಿತ ಪೀಡೆನಾಶಕ ಬಳಕೆ ಕುರಿತು ಜಾಗೃತಿ ಮೂಡಿಸಲು ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಬಿತ್ತನೆ ಬೀಜಕ್ಕೆ ಕೃಷಿಯಲ್ಲಿ ಪ್ರಮುಖ ಸ್ಥಾನವಿದೆ. ಬೆಳೆಗಳ ವಂಶಾಭಿವೃದ್ಧಿ ಬೀಜದಿಂದಲೇ ಆಗುವುದರಿಂದ ಅದರ ಪಾತ್ರ ಮಹತ್ವದ್ದು. ಇಂದು ಸುಧಾರಿತ ಹಾಗೂ ಸಂಕರಣ ತಳಿಗಳ ಬೀಜಗಳಿಗೆ ಬೇಡಿಕೆ ಹೆಚ್ಚಾದಂತೆ ಉತ್ತಮಗುಣಮಟ್ಟದ ಬೀಜದ ಕೊರತೆಯೂ ಅಧಿಕವಾಗಿದೆ ಎಂದು ಹೇಳಿದರು.ಬೀಜದಿಂದ ಹಲವಾರು ರೋಗಗಳು ಹರಡಿ ಸಸ್ಯಗಳ ಬೆಳವಣಿಗೆ ಮತ್ತು ಇಳುವರಿಯ ಮೇಲೆ ಸಾಕಷ್ಟು ನಷ್ಟವನ್ನುಂಟುಮಾಡುತ್ತ್ತವೆ. ಸಾಮಾನ್ಯವಾಗಿ ಈ ರೋಗಗಳು ಶಿಲೀಂಧ್ರ, ದುಂಡಾಣು, ವೈರಸ್ ಮತ್ತು ಜಂತು ಹುಳುಗಳಿಂದ ಹರಡುತ್ತವೆ. ಇವುಗಳು ಬೀಜದಿಂದ ಬೀಜಕ್ಕೆ ಹರಡಿ ನಂತರ ಭೂಮಿಯಲ್ಲಿ ಬಿತ್ತಿದಾಗ ಬರುವ ಬೆಳೆಗೆ ವರ್ಗಾಯಿಸಲ್ಪಟ್ಟು ನಂತರ ಬೆಳೆಗಳಿಗೆ ಹರಡಿ ಇಳುವರಿಯನ್ನು ಕುಂಠಿತಗೊಳಿಸುತ್ತವೆ.