ಅರಿವಿನ ಆಚಾರ ಬದುಕಿನ ಉನ್ನತಿಗೆ ಸೋಪಾನ : ಶ್ರೀ ರಂಭಾಪುರಿ ಜಗದ್ಗುರುಗಳು
ಸಂಜೆವಾಣಿ ವಾರ್ತೆ
ದಾವಣಗೆರೆ- ಆ.೪;ಅರಿವುಳ್ಳ ಮಾನವ ಜನ್ಮದಲ್ಲಿ ಅರಿತು ಬಾಳಿದರೆ ಬದುಕು ಬಂಗಾರ. ಮರೆತು ಮಲಗಿದರೆ ಬದುಕು ಬಂಧನಕಾರಿ. ಅರಿವಿನ ಆದರ್ಶಗಳು ಬದುಕಿನ ಉನ್ನತಿ ಮತ್ತು ಶ್ರೇಯಸ್ಸಿಗೆ ಸೋಪಾನವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. ಅವರು  ನಗರದ ಶ್ರೀ ರಂಭಾಪುರಿ ಜಗದ್ಗುರು ವೀರಗಂಗಾಧರ ಮಂಗಲ ಭವನದಲ್ಲಿ ಶ್ರೀಮದ್ವೀರಶೈವ ಸದ್ಬೋಧನ ಸಂಸ್ಥೆ ಜಿಲ್ಲಾ ಘಟಕದಿಂದ ಸಂಘಟಿಸಿದ ಜನಜಾಗೃತಿ ಧರ್ಮ ಸಮಾವೇಶದ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.ಅಧಿಕಾರದ ಅಂತಸ್ತು ಮೇಲೇರಿದಂತೆ ನೀತಿಯ ಅಂತಸ್ತು ಮೇಲೇರಬೇಕು. ಮನುಷ್ಯನ ಉಸಿರಾಟಕ್ಕೆ ಗಾಳಿ ಎಷ್ಟು ಮುಖ್ಯವೋ ಜೀವನದ ಉಜ್ವಲ ಭವಿಷ್ಯಕ್ಕೆ ಮಹಾತ್ಮರು ಕೊಟ್ಟ ಸಂದೇಶಗಳು ಅಷ್ಟೇ ಮುಖ್ಯವಾಗಿದೆ. ತನಗಾಗಿ ಬಯಸುವುದು ಜೀವ ಗುಣ. ಎಲ್ಲರಿಗಾಗಿ ಬಯಸುವುದು ದೇವ ಗುಣ. ಧರ್ಮಾಚರಣೆ ಇಲ್ಲದ ಮನುಷ್ಯನ ವ್ಯಕ್ತಿತ್ವಕ್ಕೆ ಬೆಲೆ ನೆಲೆ ಸಿಗಲಾರದು. ಸಾಮಾಜಿಕ ಸಂಪ್ರದಾಯಗಳು ಬದಲಾಗಬಹುದು. ಆದರೆ ನೈತಿನ ನಿಯಮಗಳು ಶಾಶ್ವತವಾಗಿರುತ್ತವೆ. ಬಾಲ್ಯದಲ್ಲಿ ಜ್ಞಾನ ಯೌವನದಲ್ಲಿ ಸಂಪತ್ತು ವೃದ್ಧಾಪ್ಯದಲ್ಲಿ ಪುಣ್ಯ ಸಂಪಾದಿಸಿಕೊAಡು ಬಾಳಬೇಕು. ಸ್ವಾರ್ಥರಹಿತ ಬದುಕಿಗೆ ಬೆಲೆ ಬಲವಿದೆ. ಸಿದ್ಧಾಂತ ರಹಿತ ಜೀವನ ದಿಕ್ಸೂಚಿ ಇಲ್ಲದ ನೌಕಾಯಂತೆ. ಮನುಷ್ಯ ಸ್ವಾರ್ಥಕ್ಕಾಗಿ ಆದರ್ಶ ಮೌಲ್ಯಗಳನ್ನು ಬಲಿ ಕೊಡಬಾರದು. ಧರ್ಮದಿಂದ ವಿಮುಖನಾದರೆ ಬದುಕು ಅಶಾಂತಿಯ ಕಡಲಾಗುತ್ತದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಸಮಷ್ಠಿ ಪ್ರಜ್ಞೆಯಿಂದ ಜೀವ ಜಗತ್ತಿಗೆ ಕೊಟ್ಟ ಮೌಲ್ಯಾಧಾರಿತ ಚಿಂತನಗಳು ನಮ್ಮೆಲ್ಲರ ಬಾಳಿಗೆ ಬೆಳಕು ತೋರುತ್ತವೆ ಎಂದರು. ರಾಜ್ಯ ಬಿಜೆಪಿ ಎಸ್.ಟಿ.ಘಟಕದ ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ ಇವರಿಗೆ ‘ಸಮಾಜ ಸೇವಾ ವಿಭೂಷಣ’ ಎಂಬ ಪ್ರಶಸ್ತಿಯಿತ್ತು ಶ್ರೀ ರಂಭಾಪುರಿ ಜಗದ್ಗುರುಗಳು ಶುಭ ಹಾರೈಸಿದರು. ಪ್ರಶಸ್ತಿ ಸ್ವೀಕರಿಸಿದ ಶ್ರೀನಿವಾಸ ದಾಸಕರಿಯಪ್ಪ ಮಾತನಾಡಿ ಸುಳ್ಳಿಗೆ ಹಲವಾರು ದಾರಿ. ಸತ್ಯಕ್ಕೆ ಇರುವುದೊಂದೇ ದಾರಿ. ಪೂರ್ವಜರ ಹಿತ ಚಿಂತನೆಗಳು ಬಾಳಿನ ಆಶಾಕಿರಣ. ಯುವ ಜನಾಂಗ ದೇಶದ ಅಮೂಲ್ಯ ಶಕ್ತಿ ಮತ್ತು ಆಸ್ತಿ. ಯುವ ಜನಾಂಗಕ್ಕೆ ಇತಿಹಾಸದ ಅರಿವು ಅಗತ್ಯವೆಂದರು.ಚನ್ನಗಿರಿ ಡಾ.ಕೇದಾರ ಶಿವಶಾಂತವೀರ ಶಿವಾಚಾರ್ಯ ಸ್ವಾಮಿಗಳು ಭಕ್ತಿ ಗೀತೆ ಹಾಡಿದರು. ನೇತೃತ್ವ ವಹಿಸಿದ ಬಿಳಕಿ ಹಿರೇಮಠದ ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಭಾರತೀಯ ಸಂಸ್ಕೃತಿಗೆ ಮಹಿಳೆಯರ ಕೊಡುಗೆ ಅಪಾರ. ಜ್ಞಾನ ಕ್ರಿಯಾತ್ಮಕವಾದ ಧರ್ಮ ಪಾಲನೆಯಿಂದ ಜಗದಲ್ಲಿ ಶಾಂತಿ ನೆಲೆಸಲು ಸಾಧ್ಯವೆಂದರು. ಬೀರೂರು ಬಾಳೆಹೊನ್ನೂರು ಖಾಸಾ ಶಾಖಾ ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು ತಮ್ಮ ಉಪದೇಶಾಮೃತದಲ್ಲಿ ಸಮಾಜದಲ್ಲಿ ಸಂಘಟನೆಗಳು ಇರಬೇಕಲ್ಲದೇ ಸಂಘರ್ಷಗಳು ಇರಬಾರದು. ಸತ್ಯ ಶಾಂತಿ ಸಮಾಜದ ಎರಡು ಕಣ್ಣು. ಪುಟ ಪುಸ್ತಕ ಬದಲಿಸಬಹುದು. ಆದರೆ ಇತಿಹಾಸ ಬದಲಿಸಲು ಯಾರಿಂದಲೂ ಸಾಧ್ಯ ವಿಲ್ಲವೆಂದರು. ಹಾರನಹಳ್ಳಿ ಶಿವಯೋಗಿ ಶಿವಾಚಾರ್ಯರು ಉಪಸ್ಥಿತರಿದ್ದರು.ಮುಖ್ಯ ಅತಿಥಿಗಳಾಗಿ ತಾಂಡ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಯದೇವ ನಾಯ್ಕ, ಮಹಾಪೌರ ಮಾಜಿ ಮಹಾಪೌರ ಎಸ್.ಟಿ.ವೀರೇಶ್, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ, ಎಂ.ಟಿ. ಸುಭಾಷ್‌ಚAದ್ರ, ಮ.ನ.ಪಾ.ಸದಸ್ಯ ಪ್ರಸನ್ನ ಕುಮಾರ್, ಎಸ್‌ಜೆವಿಪಿ ಕಾಲೇಜ ಕಾರ್ಯದರ್ಶಿ ಆರ್.ಟಿ.ಪ್ರಶಾಂತ ಭಾಗವಹಿಸಿದ್ದರು. ಶ್ರೀಮದ್ವೀರಶೈವ ಸದ್ಬೋಧನಾ ಸಂಸ್ಥೆ ಜಿಲ್ಲಾ ಘಟಕದ ಅಧ್ಯಕ್ಷ  ದೇವರಮನೆ ಶಿವಕುಮಾರ್, ಶ್ರೀ ಜಗದ್ಗುರು ರೇಣುಕ ಸಾಂಸ್ಕೃತಿಕ ಸಂಘದ ಅಧ್ಯಕ್ಷ ದೇವರಮನೆ ಶಿವರಾಜ್ ಉಪಸ್ಥಿತರಿದ್ದರು. ರೂಪ ಗಣೇಶ್, ಮೇನಕ ವೀರೇಶ್, ವಿದ್ಯಾ ಉಮೇಶ್, ನಂದಿಗಾವಿ ತಿಪ್ಪೇಸ್ವಾಮಿ, ರಾಜಶೇಖರ್ ಹಿರೇಮಠ, ಜಿ.ಇ.ಪ್ರಶಾಂತ, ಶಿಲ್ಪ ಗಣೇಶ ಕಬ್ಬಿಣಕಂತಿಮಠ, ಆಂಜನೇಯ ಡಿ,, ಅರುಣ್ ಕುಮಾರ್ ಹಿರೇಮಠ ಸೇರಿದಂತೆ ಹಲವಾರು ಗಣ್ಯರು ಶ್ರೀ ರಂಭಾಪುರಿ ಜಗದ್ಗುರುಗಳಿಂದ ಗುರುರಕ್ಷೆ ಸ್ವೀಕರಿಸಿದರು. ಬಾದಾಮಿ ಮಲ್ಲಿಕಾರ್ಜುನ ಸ್ವಾಗತಿಸಿದರು. ಡಾ.ವೀರಣ್ಣ ಶೆಟ್ಟರ್ ನಿರೂಪಿಸಿದರು. ಗುರು ರೇಣುಕ ಸಾಂಸ್ಕೃತಿಕ ಸಂಘದ ಕೊಟ್ರೇಶ್ ಜಗದ್ಗುರುಗಳಿಗೆ ಗೌರವ ಮಾಲೆ ಸಮರ್ಪಿಸಿದರು.ಬೆಳಿಗ್ಗೆ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳು ಇಷ್ಟಲಿಂಗ ಮಹಾಪೂಜಾ ನೆರವೇರಿಸಿ ಭಕ್ತರಿಗೆ ಶುಭ ಹಾರೈಸಿದರು. ಸಮಾರಂಭದ ನಂತರ ಅನ್ನ ದಾಸೋಹ ಜರುಗಿತು.