ರೈತರಿಗೆ ಭೂ ಪರಿಹಾರ, ಮೂಲಭೂತ ಸೌಲಭ್ಯ ಕಲ್ಪಿಸಲು ಒತ್ತಾಯ
ಕಲಬುರಗಿ:ಆ.3: ಕರ್ನಾಟಕ ಸರ್ಕಾರ ರೈತರಿಂದ ಸಾರ್ವಜನಿಕ ಉದ್ದೇಶಗಳಿಗೆ ಭೂಮಿ ಖರೀದಿ ಮಾಡಿದಾಗ ಅವರಿಗೆ ಸಾರ್ವಜನಿಕ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಅಖಿಲ ಭಾರತ ಕಿಸಾನ್ ಸಭಾ ಜಿಲ್ಲಾಧ್ಯಕ್ಷ ಮೌಲಾ ಮುಲ್ಲಾ ಅವರು ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನೇತೃತ್ವದಲ್ಲಿನ ಸರ್ಕಾರವು ಜನಪರವಾಗಿ ಹಾಗೂ ರೈತರ ಪರವಾಗಿ ಇದ್ದುದರಿಂದ ಅವರಿಗೆ ಅಭಿನಂದನೆ ಎಂದರು.
ಸರ್ಕಾರ ಸಾರ್ವಜನಿಕ ಹಿತದೃಷ್ಟಿಯಿಂದ ಉದ್ಯಮಿಗಳ ಕೈಗಾರಿಕೆಗಳ ಸ್ಥಾಪನೆ ಮಾಡುವ ಸಂದರ್ಭದಲ್ಲಿ ರೈತರ ಜಮೀನನ್ನು ಸ್ವಾಧೀನಪಡಿಸಿಕೊಳ್ಳುವುದು ಸಹಜ ಪ್ರಕ್ರಿಯೆ. ಹೀಗೆ ರೈತರಿಂದ ಪಡೆದ ಜಮೀನಿಗೆ ಪರಿಹಾರವಾಗಿ ಭೂ ಪರಿಹಾರ ಸರ್ಕಾರಿ ನೌಕರಿ ಮುದ್ರಾಂಕ ಶುಲ್ಕದ ಮಾಫಿ ಮತ್ತು ಯೋಜನಾ ನಿರಾಶ್ರಿತರೆಂದು ಪರಿಗಣಿಸಿ ಎಲ್ಲ ಅನುಕೂಲಗಳನ್ನು ಸರ್ಕಾರ ಮಾಡಿಕೊಡಬೇಕಾಗುತ್ತದೆ ಎಂದು ಅವರು ಹೇಳಿದರು.
ಅದೇ ರೀತಿ ಸರ್ಕಾರವು ವಿವಿಧ ಉದ್ದೇಶಗಳಿಗೆ ರೈತರಿಂದ ಜಮೀನನ್ನು ನೇರವಾಗಿ ಖರೀದಿ ಮಾಡಿದಲ್ಲಿ ಯಾವ ಪರಿಹಾರ ಸೌಲಭ್ಯಗಳನ್ನು ನೀಡಲಾಗುತ್ತಿಲ್ಲ. ಆ ಕಾರಣಕ್ಕೆ ಹಲವಾರು ರೈತರಿಗೆ ಅನ್ಯಾಯವಾಗುತ್ತಿದೆ. ಕಳೆದ 2016ರ ಫೆಬ್ರವರಿ 10ರಂದು ಸರ್ಕಾರದ ಆದೇಶದ ಕ್ರಮ ಸಂಖ್ಯೆ 71 ಮುನೊಮು/2014ರ ಪ್ರಕಾರ ನೇರವಾಗಿ ಜಮೀನು ಮಾರಿದ ರೈತರಿಗೆ ಸೌಲಭ್ಯಗಳನ್ನು ವಿಸ್ತರಿಸಬೇಕು ಎಂದು ಅವರು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಕೆ. ಪ್ರಧಾನಿ, ಭೀಮಾಶಂಕರ್ ಮಾಡಿಯಾಳ್ ಮುಂತಾದವರು ಉಪಸ್ಥಿತರಿದ್ದರು.