ಸಿದ್ಧರಾಮಯ್ಯ ಪರ ಆ.5 ರಂದು ಕುರುಬರ ಸಂಘದಿಂದ ಬೃಹತ್ ಶಕ್ತಿ ಪ್ರದರ್ಶನ
ಕಲಬುರಗಿ:ಆ.3:ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ರಾಜ್ಯಪಾಲರು ನೋಟಿಸ್ ಜಾರಿ ಮಾಡಿರುವುದನ್ನು ವಿರೋಧಿಸಿ ಆಗಸ್ಟ್ 5ರಂದು ನಗರದಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘದ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಗುರುನಾಥ್ ಎಸ್. ಪೂಜಾರಿ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಪಾಲರು ನೋಟಿಸ್ ಕೊಟ್ಟಿದ್ದನ್ನು ವಿರೋಧಿಸಿ ಅಂದು ನಗರದ ಜಗತ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು, ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ವಿಚಾರವನ್ನು ಮುಂದಿಟ್ಟುಕೊಂಡು ಶ್ರೀಮತಿ ಪಾರ್ವತಿ ಅವರಿಗೆ ನೀಡಿದ್ದರೆನ್ನಲಾದ ನಿವೇಶನ ವಿಚಾರವಾಗಿ ರಾಜ್ಯಪಾಲರು ಕೂಲಂಕುಷವಾಗಿ ಅಧ್ಯಯನ ಮಾಡದೇ ಏಕಪಕ್ಷೀಯ ನಿರ್ಣಯವನ್ನು ತೆಗೆದುಕೊಂಡು ಮುಖ್ಯಮಂತ್ರಿಗಳಿಗೆ ನೋಟಿಸ್ ಜಾರಿ ಮಾಡಿದ್ದು ಖಂಡನಾರ್ಹ ಎಂದು ಅವರು ಆಕ್ಷೇಪಿಸಿದರು.
ಹಿಂದುಳಿದ ವರ್ಗಗಳ ನೇತಾರ ಸಿದ್ಧರಾಮಯ್ಯ ಅವರಿಗೆ ಕೇಂದ್ರದ ಎನ್‍ಡಿಎ ಸರ್ಕಾರ ಹಾಗೂ ರಾಜ್ಯಪಾಲರ ದ್ವೇಷದ ರಾಜಕಾರಣ ಹಾಗೂ ಅಪರಾಧಿ ಹಿನ್ನೆಲೆಯ ಟಿ.ಜೆ. ಅಬ್ರಾಹಂ ಆರ್‍ಟಿಐ ಕಾರ್ಯಕರ್ತನ ಮನವಿ ಮೇರೆಗೆ ರಾಜ್ಯಪಾಲರು ನೋಟಿಸ್ ಕೊಟ್ಟಿರುವುದರ ವಿರುದ್ಧವಾಗಿ ಪ್ರತಿಭಟನೆ ಮಾಡಲಾಗುವುದು ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾಜಿ ಜಿಲ್ಲಾಧ್ಯಕ್ಷ ತಿಪ್ಪಣ್ಣ ಗುಂಡಗುರ್ತಿ, ಯುವ ಘಟಕದ ರಾಜ್ಯಾಧ್ಯಕ್ಷ ಭಗವಂತರಾಯ್‍ಗೌಡ ಪಾಟೀಲ್, ಈರಣ್ಣ ಝಳಕಿ ಧಂಗಾಪುರ, ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ನಿರ್ಮಲಾ ಎಸ್. ಬರಗಾಲಿ, ನ್ಯಾಯವಾದಿ ನಾಗೇಂದ್ರಪ್ಪ ಎಸ್. ಪೂಜಾರಿ, ಕಾಶಿನಾಥ್ ಮರತೂರ್, ಶಿವಲಿಂಗಪ್ಪ ಎಂ. ವಗ್ಗಿ, ಮಹೇಶ್ ಧರಿ, ಧರ್ಮರಾಜ್ ಹೇರೂg ಮುಂತಾದವರು ಉಪಸ್ಥಿತರಿದ್ದರು.