ಭಾರತದಲ್ಲಿ ಸ್ತನ ಕ್ಯಾನ್ಸರ್ ಹೆಚ್ಚಳ: ಡಾ. ಕುಲಕರ್ಣಿ ಕಳವಳ
ವಿಜಯಪುರ,ಆ.3: ಗ್ರಾಮೀಣ ಮಹಿಳೆಯರನ್ನು ಒಳಗೊಂಡಂತೆ ಪ್ರಸ್ತುತ ದಿನಗಳಲ್ಲಿ ಸ್ತನ ಕ್ಯಾನ್ಸರ್ ಭಾರತದಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದು, ಸ್ತನ ಕ್ಯಾನ್ಸರ್‍ನ್ನು ಮೊದಲ ಹಂತದಲ್ಲಿಯೇ ಗುರುತಿಸಿ ಚಿಕಿತ್ಸೆ ಪಡೆದರೆ ನೂರಕ್ಕೆ ನೂರರಷ್ಟು ಗುಣಪಡಿಸುವ ಸಾಧ್ಯತೆಗಳಿರುತ್ತವೆ ಎಂದು ಮಹಾರಾಷ್ಟ್ರದ ಸಾಂಗಲಿಯ ಪ್ರಗತಿ ಆಸ್ಪತ್ರೆಯ ಕ್ಯಾನ್ಸರ್ ಶಸ್ತ್ರಚಿಕಿತ್ಸಕ ಡಾ.ವಿವೇಕ್‍ಎಂ. ಕುಲಕರ್ಣಿ ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶನಾಲಯ, ಎನ್‍ಎಸ್‍ಎಸ್‍ಕೋಶ, ಮಹಿಳಾ ಅಧ್ಯಯನ ಕೇಂದ್ರ ಹಾಗೂ ವಿಜಯಪುರದ ವಿಜಯ ಡಯಾಗ್ನೋಸ್ಟಿಕ್ ಇಮೇಜಿಂಗ್ ಇವರ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ಸ್ತನ ಕ್ಯಾನ್ಸರ್‍ಜಾಗೃತಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸ್ತನ ಕ್ಯಾನ್ಸರ್‍ನಾಲ್ಕು ಹಂತಗಳಲ್ಲಿ ಕಂಡು ಬರುತ್ತದೆ. ನಾಲ್ಕನೇ ಹಂತದಲ್ಲಿ ಸ್ತನ ಕ್ಯಾನ್ಸರ್‍ನ್ನು ಗುಣಪಡಿಸಲು ಸಾಧ್ಯವಿಲ್ಲ. ಬದಲಿಗೆ ವಿವಿಧ ಚಿಕಿತ್ಸೆಯ ಮೂಲಕ ರೋಗಿಯ ಜೀವಿತಾವಧಿಯನ್ನು ಸ್ವಲ್ಪ ಮಟ್ಟದಲ್ಲಿ ಹೆಚ್ಚಿಸಬಹುದಾಗಿದೆ. ಹಾಗಾಗಿ 25 ವರ್ಷ ಮೇಲ್ಪಟ್ಟ ಮಹಿಳೆಯರು ಕನಿಷ್ಠ ವರ್ಷಕ್ಕೆ ಒಂದು ಬಾರಿಯಾದರೂ ಸ್ತನ ಕ್ಯಾನ್ಸರ್‍ನ ಕುರಿತು ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ನಗರದ ಡಯಾಗ್ನೋಸ್ಟಿಕ್ ಸೆಂಟರ್‍ನ ಕನ್ಸಲ್ಟಿಂಗ್ ರೆಡಿಯೋಲಜಿಸ್ಟ್ ಡಾ.ಸ್ವಾತಿ ದೇಸಾಯಿ ಮಾತನಾಡಿ, ನಮ್ಮ ನಗರವು ಸಾಂಗಲಿ ನಗರಕ್ಕೆ ಹೋಲಿಸಿದರೆ ವೈದ್ಯಕೀಯ ಕ್ಷೇತ್ರದಲ್ಲಿ ಸುಮಾರು 20 ವರ್ಷಗಳ ಹಿಂದೆ ಇದೆ. ಮಹಿಳೆಯರು ಸ್ತನ ಕ್ಯಾನ್ಸರ್‍ನ್ನು ಸ್ವಯಂ ಪರೀಕ್ಷೆ ಮಾಡಿಕೊಳ್ಳುವುದರ ಮೂಲಕವು ಅದನ್ನು ಗುರುತಿಸಬಹುದು. ಸ್ತನಗಳ ಗಾತ್ರದಲ್ಲಿ ಬದಲಾವಣೆ, ಪೇನ್ ಲೆಸ್ ಲಂಪ್, ಸ್ತನಗಳು ಕೆಂಪಾಗುವುದು, ಚರ್ಮ ದಪ್ಪಗಾಗುವುದು ಈ ರೀತಿಯ ಲಕ್ಷಣಗಳು ಕಂಡುಬಂದಲ್ಲಿ ಆದಷ್ಟು ಬೇಗ ವೈದ್ಯರ ಸಲಹೆ ಪಡೆದು ಸ್ತನ ಕ್ಯಾನ್ಸರ್‍ನ ಪರೀಕ್ಷೆ ಮಾಡಿಕೊಳ್ಳುವುದು ಉತ್ತಮ ಎಂದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶನಾಲಯದ ಸಹಾಯಕ ನಿರ್ದೇಶಕಿ ಡಾ.ಅಶ್ವಿನಿ.ಕೆ.ಎನ್, ಎನ್‍ಎಸ್‍ಎಸ್ ಘಟಕದ ಸಂಯೋಜಕಿ ಡಾ.ತಹಮೀನಾ ಕೋಲಾರ್, ವಿವಿಧ ವಿಭಾಗದ ಪ್ರಾಧ್ಯಾಪಕರು, ವಿದ್ಯಾರ್ಥಿನಿಯರು ಇದ್ದರು.