ಹೆದ್ದಾರಿ ನಿರ್ಮಿಸಿಕೊಡಲು ಕೇಂದ್ರ ಸಚಿವರಿಗೆ ಶಾಸಕ ಪ್ರಭು ಚವ್ಹಾಣ ಮನವಿ
ಬೀದರ:ಆ.3:ಮಹಾರಾಷ್ಟ್ರದ ವಝರ್ ಬಾರ್ಡರ್ ನಿಂದ ಔರಾದ(ಬಿ) ವರೆಗೆ ರಾಷ್ಟ್ರೀಯ ಹೆದ್ದಾರಿ ಮಂಜೂರು ಮಾಡಿಕೊಡುವಂತೆ ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಕೇಂದ್ರ ಸಾರಿಗೆ ಸಚಿವರಾದ ನಿತೀನ್ ಗಡ್ಕರಿ ಅವರಿಗೆ ಮನವಿ ಸಲ್ಲಿಸಿದ್ದಾರೆ.
ದೆಹಲಿಯಲ್ಲಿ ಶುಕ್ರವಾರ ಸಚಿವರನ್ನು ಭೇಟಿ ಮಾಡಿದ ಶಾಸಕರು, ಮಹಾರಾಷ್ಟ್ರ ರಾಜ್ಯದ ಹಣೆಗಾಂವ್, ಮುಖೇಡ್ ಮೂಲಕ ನಾಂದೇಡ್‍ಗೆ ಹೋಗುವ ರಾಷ್ಟ್ರೀಯ ಹೆದ್ದಾರಿ 161(ಎ) ನನ್ನ ಮತಕ್ಷೇತ್ರಕ್ಕೆ ಹೊಂದಿಕೊಂಡಿದೆ.. ಈ ಹೆದ್ದಾರಿ ಹಾದು ಹೋಗುವ ಮಹಾರಾಷ್ಟ್ರದ ವಝರ್ ಬಾರ್ಡರ್ ನಿಂದ ನನ್ನ ಮತಕ್ಷೇತ್ರದ ಔರಾದ(ಬಿ) ತಾಲ್ಲೂಕು ಕೇಂದ್ರ ಕೇವಲ 10 ಕಿ.ಮೀ ಅಂತರದಲ್ಲಿದೆ. ಏಕಂಬಾ ಮಾರ್ಗವಾಗಿ ಔರಾದ(ಬಿ) ವರೆಗೆ ರಾಷ್ಟ್ರೀಯ ಹೆದ್ದಾರಿಯ ಸಂಪರ್ಕ ಕಲ್ಪಿಸಿದರೆ ಎರಡೂ ರಾಜ್ಯಗಳ ಜನತೆಗೆ ಅನುಕೂಲವಾಗಲಿದೆ ಎಂದು ವಿವರಿಸಿದರು.
ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿಯಲ್ಲಿರುವ ನನ್ನ ಮತಕ್ಷೇತ್ರದ ಜನತೆ ಬಹಳಷ್ಟು ಆರ್ಥಿಕ ವ್ಯವಹಾರಗಳನ್ನು ಮಹಾರಾಷ್ಟ್ರದ ನಗರಗಳಲ್ಲಿ ನಡೆಸುವುದರಿಂದ ಈ ರಸ್ತೆಯ ಮೂಲಕ ಪ್ರತಿದಿನ ಸಾಕಷ್ಟು ಜನ ಸಂಚರಿಸುತ್ತಾರೆ. 10 ಕಿ.ಮೀ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮಾಡಿದಲ್ಲಿ ಎರಡೂ ರಾಜ್ಯಗಳ ಜನತೆಗೆ ಅನುಕೂಲವಾಗಲಿದೆ ಎಂದಿದ್ದಾರೆ..
ಹಿಂದೆ ಸಲ್ಲಿಸಿದ ಬೇಡಿಕೆಗಳನ್ನು ಈಡೇರಿಸಿರುವ ತಾವುಗಳು ಈ ಭಾಗದಲ್ಲಿ ಅತ್ಯಂತ ಅವಶ್ಯಕವಾಗಿರುವ ಮಹಾರಾಷ್ಟ್ರದ ವಝರ್ ಬಾರ್ಡರ್‍ನಿಂದ ಔರಾದ(ಬಿ) ವರೆಗೆ ರಾಷ್ಟ್ರೀಯ ಹೆದ್ದಾರಿ ಮಂಜೂರು ಮಾಡಿ ಅವಶ್ಯಕ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾರೆ. ಇದಕ್ಕೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಶಾಸಕರು ತಿಳಿಸಿದ್ದಾರೆ.