ಒಳಮೀಸಲಾತಿ ಸುಪ್ರೀಂ ತೀರ್ಪು ಸ್ವಾಗತಾರ್ಹ
ಮುದ್ದೇಬಿಹಾಳ :ಆ.3: ದಲಿತ ಸಂಘಟನೆಗಳು ಹಾಗೂ ಮಾದಿಗ ಮೀಸಲಾತಿ ಹೋರಾಟ ಸಮಿತಿ ತಮ್ಮ ಹಕ್ಕು ಪಡೆಯಲು ಒಳ ಮೀಸಲಾತಿ ವರ್ಗೀಕರಣಕ್ಕಾಗಿ ನಡೆದ ಹೋರಾಟ ಹಾಗೂ ತ್ಯಾಗ ಬಲಿದಾನಕ್ಕೆ ಸುಪ್ರೀಂ ಕೋರ್ಟ್ ತೀರ್ಪಿನಿಂದ ಜಯ ಸಿಕ್ಕಂತಾಗಿದೆ ಎಂದು ತಾಲೂಕಾ ಮಾದಿಗ ದಂಡೂರ ಹೋರಾಟ ಸಮಿತಿಯ ಅಧ್ಯಕ್ಷರಾದ ತಿಪ್ಪಣ್ಣ ದೊಡಮನಿ ಹರ್ಷ ವ್ಯಕ್ತಪಡಿಸಿದರು.
ತಲೆತಲೆಮಾರಿನಿಂದ ತುಳಿತಕ್ಕೊಳಗಾಗಿ ಮೀಸಲಾತಿಯ ಸರ್ಕಾರದ ಸರಿಯಾದ ಪ್ರಯೋಜನ ಪಡೆಯಲಾಗದೆ ನೋವು ಅನುಭವಿಸುತ್ತಿದ್ದ ಪರಿಶಿಷ್ಟ ಜಾತಿ/ಪಂಗಡದ ಜನಾಂಗ ಒಳ ಮೀಸಲಾತಿಗಾಗಿ ನಡೆದ ಸುದೀರ್ಘ ಹೋರಾಟದಲ್ಲಿ ಹಲವರ ತ್ಯಾಗ ಬಲಿದಾನದ ಫಲವಾಗಿ ಸುಪ್ರೀಂ ಕೋರ್ಟ್ ಸಿಜೆಐ ಚಂದ್ರಚೂಡ್ ನೇತೃತ್ವದ 7 ಸದಸ್ಯರ ಪೀಠವು ಒಳ ಮೀಸಲಾತಿ ನೀಡುವ ಪ್ರಸ್ತಾವವನ್ನು ಎತ್ತಿ ಹಿಡಿದು, ಒಳ ಮೀಸಲಾತಿ
ಸಂವಿಧಾನ ಬಾಹಿರ ಕ್ರಮವಲ್ಲ, ಎಲ್ಲರಿಗೂ ಸಮಾನ ಅವಕಾಶ ಸಿಗಬೇಕು ಎನ್ನುವದು ಸಂವಿಧಾನದ ಮೂಲ ಮಂತ್ರ ಎಂದು ಐತಿಹಾಸಿಕ ತೀರ್ಪು ನೀಡುವ ಮೂಲಕ ನ್ಯಾಯ ಒದಗಿಸಿದೆ ಕೂಡಲೇ ಕರ್ನಾಟಕ ಸರಕಾರ ತನ್ನ ಪ್ರಣಾಳಿಕೆಯಲ್ಲಿ ತಿಳಿಸಿದಂತೆ ಈ ಮೀಸಲಾತಿ ಕ್ರಮವನ್ನು ತ್ವರಿತ ಗತಿಯಲ್ಲಿ ಸಾಮಾಜಿಕ ಪರಿಕಲ್ಪನೆಯನ್ನು ಹಾಗೂ ಅಹಿಂದ ಸಮುದಾಯದ ಮುಖ್ಯಮಂತ್ರಿ ಇರುವದರಿಂದ ಕೂಡಲೇ ಜಾರಿಗೆ ತರುತ್ತಾರೆ ಎನ್ನುವ ವಿಶ್ವಾಸ ಇದೆ ಎಂದು ಹೇಳಿದರು.