ಹಗರಣ ಎಂಬ ಪದ ಬಿಜೆಪಿಯವರಿಗೆ ಮಾತ್ರ ಗೊತ್ತು: ಚಿಮಕೊಡೆ
ಬೀದರ್:ಆ.3: ಹಗರಣ ಎಂಬ ಪದವು ಬಿಜೆಪಿಯವರಿಂದ ಹುಟ್ಟಿಕೊಂಡಿದ್ದು, ಅದು ಕೇಸರಿ ಕಲಿಗಳಿಗೆ ಮಾತ್ರ ಗೊತ್ತಿದೆ ಎಂದು ಗೊಂಡ ಸಮಾಜದ ಹಿರಿಯ ಮುಖಂಡರು ಹಾಗೂ ಗ್ಯಾರಂಟಿಗಳ ಅನುಷ್ಟಾನ ಸಮಿತಿ ಜಿಲ್ಲಾಧ್ಯಕ್ಷ ಅಮೃತರಾವ ಚಿಮಕೊಡೆ ಹೇಳಿದರು.
ಶುಕ್ರವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, ಬಿಜೆಪಿಯವರು ತಲೆ ಬುಡ ಇಲ್ಲದ ಮೂಡಾ ಹಗರಣ ಸೃಷ್ಟಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಕೆಸರೆರೆಚಲು ಪ್ರಯತ್ನಿಸುತ್ತಿರುವುದು ಮೂರ್ಖತನದ ಪರಮಾವಧಿ ಎಂದು ಜರಿದರು.
ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಅವರು ಶುದ್ಧ ಹಸ್ತರು. ಅವರ ರಾಜಕೀಯ ಜೀವನದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ. ಜನ ಕಲ್ಯಾಣವೇ ಬಸವಣ್ಣನವರ ತತ್ವಗಳನ್ನು ಪಾಲಿಸಿಕೊಂಡು ಬಂದಿರುವ ಅವರ ಧೈಯವಾಗಿದೆ ಎಂದು ತಿಳಿಸಿದರು
ಸಿದ್ದರಾಮಯ್ಯ ಅವರು ತಮ್ಮ ಅಧಿಕಾರ ಅವಧಿಯಲ್ಲಿ ಅಶಕ್ತರು, ದೀನ- ದಲಿತರು, ಬಡವರು, ರೈತರು, ಮಹಿಳೆಯರು, ಯುವಕರು ಸೇರಿದಂತೆ ಸರ್ವರ ಅಭ್ಯುದಯಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಅನ್ನಭಾಗ್ಯ, ಶಕ್ತಿ, ಯುವ ನಿಧಿ, ಗೃಹಲಕ್ಷ್ಮಿ, ಗೃಹ ಜ್ಯೋತಿ ಯೋಜನೆಗಳು ಜನಸಾಮಾನ್ಯರ ಬದುಕನ್ನೇ ಬದಲಾಯಿಸಿವೆ. ಇಡೀ ದೇಶವೇ ಈಗ ಕರ್ನಾಟಕದತ್ತ ತಿರುಗಿ ನೋಡುತ್ತಿದೆ. ಅಂಥದ್ದರಲ್ಲಿ ಬಿಜೆಪಿಯವರು ಹೊಟ್ಟೆ ಕಿಚ್ಚಿನಿಂದ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಬಡವರ ನೋವು ಗೊತ್ತಿಲ್ಲದ, ಶ್ರೀಮಂತರ ಪರ ಕಾಳಜಿ ಹೊಂದಿದೆ. ಮನ ಬಂದಂತೆ ಲೂಟಿ ಹೊಡೆದ, ಜನ ವಿರೋಧಿ ನೀತಿಗಳ ಕಾರಣಕ್ಕಾಗಿಯೇ ಕಳೆದ ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ಬಿಜೆಪಿಯವರಿಗೆ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರದ ಜನಪರ ಆಡಳಿತ ಅರಗಿಸಿಕೊಳ್ಳಲು ಆಗುತ್ತಿಲ್ಲ. ಇದೇ ಕಾರಣಕ್ಕಾಗಿ ಒಂದಿಲ್ಲೊಂದು ಷಡ್ಯಂತ್ರಗಳನ್ನು ಹೆಣೆಯುತ್ತಲೇ ಇದ್ದಾರೆ ಎಂದು ಟೀಕಿಸಿದರು.
ಜನನಾಯಕ ಸಿದ್ದರಾಮಯ್ಯ ಅವರ ವಿರುದ್ಧ ಅಪಪ್ರಚಾರ ನಡೆಸುತ್ತಿರುವ ಬಿಜೆಪಿಗೆ ಪಾಠ ಕಲಿಸುವ ಕಾಲ ಒದಗಿ ಬಂದಿದೆ. ಬಿಜೆಪಿಯವರು ಸಿದ್ದರಾಮಯ್ಯ ಅವರ ಹೆಸರಿಗೆ ಮಸಿ ಬಳಿಯುವ ಕೆಲಸವನ್ನು ತಕ್ಷಣ ಕೈಬಿಡಬೇಕು. ಇಲ್ಲವಾದಲ್ಲಿ ಜನರೇ ತಕ್ಕ ಪಾಠ ಕಲಿಸುವ ದಿನ ದೂರವಿಲ್ಲ ಎಂದು ಎಚ್ಚರಿಕೆ ನೀಡಿದರು.
ಗೊಂಡ ಸಮಾಜದ ಹಿರಿಯ ಮುಖಂಡರು ಹಾಗೂ ಕೆ.ಎಮ್.ಎಫ್ ನಿರ್ದೇಶಕರಾದ ಮಲ್ಲಿಕಾರ್ಜುನ ಬಿರಾದಾರ ಮಾತನಾಡಿ, ಬಿಜೆಪಿ ಕೇಂದ್ರ ಸರ್ಕಾರದ ಮುಖೇನ ಇಲ್ಲಿಯ ರಾಜ್ಯಪಾಲರು ಸಿಎಂ ಸಿದ್ಧರಾಮಯ್ಯ ಅವರಿಗೆ ನೋಟಿಸ್ ಕೊಡುವಂತೆ ಮಾಡುವ ಮೂಲಕ ಪ್ರಜಾಪ್ರಭುತ್ವವನ್ನು ಕಗ್ಗೋಲೆ ಮಾಡಲು ಹೊರಟಿದೆ. ಇದನ್ನು ಖಂಡಿಸಿ ಜಿಲ್ಲೆಯ ಗೊಂಡ(ಕುರುಬ) ಸಮಾಜದವರು ಆಗಸ್ಟ್ 5 ರಂದು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದೇವೆ. ಎಂದರು.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ, ಸಂಗೊಳ್ಳಿ ರಾಯಣ್ಣ ಜನಪರ ವೇದಿಕೆ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಂಘ, ಕನಕ ಯುವ ಸೇನೆ, ಕನಕ ಸಂಘ ಸೇರಿದಂತೆ ಜಿಲ್ಲೆಯ ಗೊಂಡ ಪರ ಸಂಘಟನೆಗಳು, ಗೊಂಡ(ಕುರುಬ) ಸಮಾಜದ ಮುಖಂಡರು ಹಾಗೂ ಕಾರ್ಯಕರ್ತರಿಂದ ಬಿಜೆಪಿ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸೋಮವಾರ ಬೆಳಿಗ್ಗೆ 10ಕ್ಕೆ ಬೊಮ್ಮಗೊಂಡೇಶ್ವರ ವೃತ್ತದಿಂದ ಬಸವೇಶ್ವರ ವೃತ್ತ. ಮಹಾವೀರ ವೃತ್ತ, ಭಗತ್ಸಿಂಗ್ ವೃತ್ತ, ಡಾ. ಬಿ.ಆರ್. ಅಂಬೇಡ್ಕರ್ ವೃತ್ತ, ಶಿವಾಜಿ ವೃತ್ತದ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿ ವರೆಗೆ ಮೆರವಣಿಗೆ ನಡೆಸಿ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರ ಮೂಲಕ ರಾಷ್ಟ್ರಪತಿಗಳಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಲಾಗುವುದು ಎಂದು ಹೇಳಿದರು.
ಕರ್ನಾಟಕ ಪ್ರದೇಶ ಕುರುಬರ ಸಂಘದ ಉಪಾಧ್ಯಕ್ಷ
ಬಸವರಾಜ ಹೇಡೆ, ಗೊಂಡ ಸಮಾಜದ ಮುಖಂಡರಾದ ಹಣಮಂತ ಮಲ್ಕಾಪುರ್, ನರಸಪ್ಪ ಯಾಕತಪುರ್, ಗಣಪತಿ ಕಮಠಾಣಾ, ಅಮರ ವಡಗಾವೆ, ರಾಜು ಚಿಟ್ಟಾವಾಡಿ, ಬಾಲಾಜಿ ಜಬಾಡೆ, ಸಚಿನ್ ಕಲ್ಲೂರ್ ಹಾಗೂ ಇತರರು ಪತ್ರಿಕಾಗೋಷ್ಟಿಯಲ್ಲಿದ್ದರು.