ಅಭಿವೃದ್ಧಿಯ ಹರಿಕಾರ ನಾಲ್ವಡಿ ಕೃಷ್ಣರಾಜ ಒಡೆಯರ್
ಕಲಬುರಗಿ :ಆ.3: ನಮ್ಮ ದೇಶವನ್ನು ಅನೇಕ ರಾಜಮನೆಗಳು ಆಳ್ವಿಕೆ ಮಾಡಿವೆ. ಅದರಲ್ಲಿ ಕೆಲವು ಸಂಸ್ಥಾನಗಳು ಈಗಿನ ಪ್ರಜಾಪ್ರಭುತ್ವ ಸರ್ಕಾರ ಮಾಡುತ್ತಿರುವ ಕಾರ್ಯಗಳನ್ನು ನೂರಾರು ವರ್ಷಗಳ ಹಿಂದೆಯೇ ಮಾಡಿತೋರಿಸಿವೆ. ಅದರಲ್ಲಿ ಮೈಸೂರು ಒಡೆಯರ್ ಸಂಸ್ಥಾನವು ಪ್ರಮುಖವಾಗಿದೆ. ಈ ಸಂಸ್ಥಾನದಲ್ಲಿ ಅಭಿವೃದ್ಧಿ ಹೊಳೆಯನ್ನು ಹರಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ ಅವರು ಅಭಿವೃದ್ಧಿಯ ಹರಿಕಾರರಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಉಪನ್ಯಾಸಕ, ಸಮಾಜ ಸೇವಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ಆಳಂದ ರಸ್ತೆಯ ಶಿವ ನಗರದಲ್ಲಿರುವ ‘ಮಲ್ಲಿನಾಥ ಮಹಾರಾಜ ಶಾಲೆ’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ ‘ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಮರಣೋತ್ಸವ’ದಲ್ಲಿ ಭಾವಚಿತ್ರಕ್ಕೆ ಪುಷ್ಪನಮನಗಳನ್ನು ಸಲ್ಲಿಸಿ ಮಾತನಾಡುತ್ತಿದ್ದರು.
ಒಡೆಯರ್ ಅವರ ಆಡಳಿತಾವಧಿಯನ್ನು ‘ಸುವರ್ಣಯುಗ’ವೆಂದು ಕರೆಯುತ್ತಾರೆ. ‘ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆ’, ಶಿವನ ಸಮುದ್ರದಲ್ಲಿ ಜಲವಿದ್ಯುತ್ ಯೋಜನೆ ಆರಂಭ, ಮಿಂಟೋ ಕಣ್ಣಿನ ಆಸ್ಪತ್ರೆ ಸ್ಥಾಪನೆ, ವಿದ್ಯುತ್ ದೀಪದ ಅಳವಡಿಕೆ, ವಾಣಿವಿಲಾಸ ಸಾಗರ ಆಣೆಕಟ್ಟಿನ ನಿರ್ಮಾಣ, ಮೈಸೂರಿನ ವಿಧಾನ ಪರಿಷತ್ತಿನ ರಚನೆ, ‘ಭಾರತೀಯ ವಿಜ್ಞಾನ ಸಂಸ್ಥೆ’ ಮತ್ತು ಎಸ್.ಬಿ.ಎಂ ಸ್ಥಾಪನೆ, ಕೃಷಿ ವಿಜ್ಞಾನ ವಿಶ್ವವಿದ್ಯಾಲಯ, ಮೈಸೂರು ವಿಶ್ವವಿದ್ಯಾಲಯ, ರೇಲ್ವೆ ಸಾರಿಗೆ ಪ್ರಾರಂಭ ಹೀಗೆ ಅವರ ಆಡಳಿತಾವಧಿಯಲ್ಲಿನ ಸಾಧನೆಯ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ವಿಶ್ವೇಶ್ವರಯ್ಯನವರು ಇವರ ಅವಧಿಯಲ್ಲಿ ದಿವಾನರಾಗಿ ಉತ್ತಮವಾಗಿ ಸೇವೆ ಸಲ್ಲಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯಸ್ಥ ಅಮರ ಜಿ.ಬಂಗರಗಿ, ಮುಖ್ಯ ಶಿಕ್ಷಕಿ ಚಂಪಾಕಲಾ ನೆಲ್ಲೂರೆ, ಶಿಕ್ಷಕರಾದ ಶಿಕ್ಷಕರಾದ ರೇಖಾ ಬಿ.ಪಾಟೀಲ, ಮಂಜುಳಾ ಬಿ.ನರೋಣಾ, ನಂದಿನಿ, ಸೇವಕಿ ಸುರೇಖಾ ಸಣಮನಿ ಹಾಗೂ ವಿದ್ಯಾರ್ಥಿಗಳಿದ್ದರು.