ಗುರು ಭಕ್ತನನ್ನು ಅಜ್ಞಾನದಿಂದ ಸುಜ್ಞಾನದೆಡೆಗೆ ಕೊಂಡೊಯ್ಯುತ್ತಾನೆ: ಹಾರಕೂಡ ಶ್ರೀ
ಬೀದರ್:ಆ.3: ಅನುಭಾವಿಯಾದ ಗುರುವಿನಿಂದ ಅನುಭಾವಿಯಾಲಂಬಿಯಾದ ಶಿಷ್ಯನಿಗೆ ದೊರುಕುವ ವಿಶಿಷ್ಟವಾದ ಜ್ಞಾನವೇ ಆಶೀರ್ವಚನ.
ಗುರು ಭಕ್ತನನ್ನು ಅಜ್ಞಾನದಿಂದ ಸುಜ್ಞಾನದಡೆಗೆ ಕರೆದುಕೊಂಡು ಹೋಗುತ್ತಾನೆ.
ಬದುಕಿನಲ್ಲಿ ಶ್ರೇಷ್ಠವಾದ ಬಂಧುವೆಂದರೆ ಗುರು ಎಂದು ಹಾರಕೂಡದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು ನುಡಿದರು.
ತಾಲೂಕಿನ ಜಾಫರವಾಡಿ ಗ್ರಾಮದಲ್ಲಿ ಆಯೋಜಿಸಿದ ಗುರುವಂದನೆ ಹಾಗೂ 689ನೇ ತುಲಾಭಾರ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಪೂಜ್ಯರು ನಮ್ಮ ಆಪತ್ಕಾಲದಲ್ಲಿ ರಕ್ಷಣೆ ಮಾಡುವ ಯಾವುದಾದರೂ ಒಂದು ಶಕ್ತಿ ಇದ್ದರೆ ಅದು ಗುರು ಆಶೀರ್ವಾದ.
ಮನುಷ್ಯನ ನಿಜವಾದ ಆಸ್ತಿ ಎಂದರೆ ಜ್ಞಾನ, ಜ್ಞಾನ ಎಂಬುವುದು ಶ್ರೇಷ್ಠ ಸಂಪತ್ತು, ಯಾರೂ ಕದಿಯದೆ ಇರುವ ವಸ್ತು ಎಂದರೆ ಜ್ಞಾನ.
ಅನುಭಾವಿ ಶರಣರು ಹೇಳುವ ಹಾಗೆ “ನಿನ್ನೊಡವೆ ಎಂಬುದು ಜ್ಞಾನರತ್ನ” ನಮಗೆ ಗುರುವಿನಿಂದ ಸುಜ್ಞಾನ ಪ್ರಾಪ್ತಿಯಾದಾಗ ನಮ್ಮ ಬದುಕಿನಲ್ಲಿ ಹೊಸ ಬೆಳಕು ಪ್ರಾಪ್ತಿಯಾಗಿ ಬದುಕು ಹಸನಾಗುತ್ತದೆ.
ಮಾನವನ ಜನ್ಮ ಶಾಶ್ವತವಲ್ಲ, ಮನುಷ್ಯ ಹುಟ್ಟಿದಾಗ ಉಸಿರಾಡುತ್ತ ಹುಟ್ಟುತ್ತಾನೆ, ಸತ್ತ ನಂತರ ಉಸಿರು ನಿಲ್ಲುತ್ತದೆ, ಉಸಿರು ನಿಲ್ಲಬಹುದು ಆದರೆ ಹೆಸರು ಮಾಡಿ ಹೋದರೆ ಸಾಕು ಅದೇ ಸಾರ್ಥಕ ಬದುಕು.
ತನು, ಮನ, ದನದಿಂದ ಸೇವೆ ಮಾಡಿದ ಜಾಫರವಾಡಿ ಗ್ರಾಮದ ಸಮಸ್ತ ಸದ್ ಭಕ್ತಾದಿಗಳಿಗೆ ಶುಭಾಶೀರ್ವಾದಗಳು ತಾವು ಭಕ್ತಿಯಿಂದ ಮಾಡಿದ ತುಲಾಭಾರ, ಗುರುವಂದನೆ ಇದು ಸದ್ಗುರು ಚನ್ನಬಸವ ಶಿವಯೋಗಿಗಳ ಸನ್ನಿಧಿಗೆ ಅರ್ಪಿಸುತ್ತೇವೆ.
ತಾವು ಹಾರಕೂಡ ಮಠದ ಮೇಲೆ ಇಟ್ಟಿರುವ ಭಕ್ತಿ, ಗೌರವಕ್ಕೆ ಬೆಲೆ ಕಟ್ಟಲಾಗದು.
ತಮ್ಮ ನಂಬಿಗೆ, ಶ್ರದ್ಧೆ ನೂರಾರು ವರ್ಷಗಳಿಂದ ನಡೆದು ಬಂದದ್ದಾಗಿದೆ.
ಜಾಫರವಾಡಿ ಗ್ರಾಮದ ಸರ್ವಭಕ್ತರು ಕೂಡ ಪುಣ್ಯವಂತರಾಗಿದ್ದೀರಿ ಎಂದು ಶುಭ ಹಾರೈಸಿದರು.
ಶಾಂತ ವಿಜಯ ಪಾಟೀಲ, ಮಹಾರಾಜಪ್ಪ ಮೂಳೆ, ಶ್ರೀಕಾಂತ ಮೂಳೆ, ಶರಣಬಸಪ್ಪ ಬಿರಾದಾರ, ಸುನಿಲ ಮೂಳೆ, ದಿಲೀಪ ಗಿರಗಿಂಟೆ, ಬಲವಂತ ಚಾಕುರೆ, ಚಿತ್ರಸೇನ ಮೂಳೆ, ರಮೇಶ ಪಾಟೀಲ, ಅಂಬರಾಯ ಮೇತ್ರೆ, ಶರಣಪ್ಪ ಗಜಲೆ, ಸೂರ್ಯಕಾಂತ ಮೂಳೆ, ದೇವಿಂದ್ರ ಬಿರಾದಾರ, ಶಾಸ್ತ್ರಿ ಬಿರಾದಾರ, ರಮೇಶ ಗೊಂದಳೆ, ರಾಮಯ್ಯ ಸ್ವಾಮಿ, ಮಲ್ಲಿಕಾರ್ಜುನ ಬಂಡೆ, ದತ್ತು ದಾಸುರೆ, ಗುರುಲಿಂಗಪ್ಪ ಬಿರಾದಾರ ಮುಂತಾದವರು ಉಪಸ್ಥಿತರಿದ್ದರು.
ಶಾಂತವಿಜಯ ಪಾಟೀಲ ಸ್ವಾಗತಿಸಿದರು.
ಕಾರ್ತಿಕ ಸ್ವಾಮಿ ಯಲದಗುಂಡಿ ಪ್ರಾರ್ಥನಾ ಗೀತೆ ನಡೆಸಿಕೊಟ್ಟರು.
ಶಿಕ್ಷಕರಾದ ಮಲ್ಲಿಕಾರ್ಜುನ ಅಲಗುಡೆ ಕಾರ್ಯಕ್ರಮವನ್ನು ನಿರೂಪಿಸಿದರು.
ಇದಕ್ಕೂ ಮೊದಲು ಗ್ರಾಮಕ್ಕೆ ಆಗಮಿಸಿದ ಹಾರಕೂಡ ಪೂಜ್ಯರಿಗೆ ಅಲಂಕೃತ ಸಾರೋಟಿನಲ್ಲಿ ಅದ್ದೂರಿ ಮೆರವಣಿಗೆ ಜರುಗಿತು.