ಅ. 5 ರಿಂದ ಶ್ರಾವಣ ಪ್ರವಚನ ಪ್ರಾರಂಭ
ಭಾಲ್ಕಿ: ಆ.3:ಪಟ್ಟಣದ ಚನ್ನಬಸವಾಶ್ರಮದಲ್ಲಿ ಪ್ರತಿವರ್ಷದಂತೆ ನಾಡೋಜ ಡಾ| ಬಸವಲಿಂಗ ಪಟ್ಟದ್ದೇವರಿಂದ ಅ.5 ರಿಂದ ಒಂದು ತಿಂಗಳ ಪರ್ಯಂತ ಶ್ರಾವಣ ಮಾಸ ನಿಮಿತ್ಯ ಅಲ್ಲಮ ಪ್ರಭುದೇವರ ವಚನ ಪ್ರವಚನ ನಡಯಲಿದೆ ಎಂದು ಹಿರೇಮಠದ ಪೀಠಾಧಿಪತಿ ಶ್ರೀಗುರುಬಸವ ಪಟ್ಟದ್ದೇವರು ಹೇಳಿದರು.
ಹಳೆ ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಶುಕ್ರವಾರ ಕರೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಸುಮಾರು 40 ವರ್ಷಗಳಿಂದ ನಿರಂತರವಾಗಿ ನಾಡೋಜ ಡಾ| ಬಸವಲಿಂಗ ಪಟ್ಟದ್ದೇವರು, ಶ್ರಾವಣ ಮಾಸದಲ್ಲಿ ಭಾಲ್ಕಿಯಲ್ಲಿಯೇ ಪ್ರವಚನ ನೀಡುತ್ತಿದ್ದಾರೆ. ಎಲ್ಲರ ಮನಸ್ಸು ಕಟ್ಟುವ ಹಬ್ಬ ಶ್ರಾವಣ ಮಾಸವಾಗಿದೆ. ಪ್ರತಿಯೊಬ್ಬರ ಅಂತರಗ ಶುದ್ಧಗೊಳಿಸಿ, ಮನಸ್ಸು ಪವಿತ್ರಗೊಳಿಸುವ ಮಾಸವೇ ಶ್ರಾವಣ. ಹೀಗಾಗಿ ಪೂಜ್ಯರು ಪ್ರತಿವರ್ಷ ಬಸವತತ್ವವನ್ನು ಆಧಾರವಾಗಿಟ್ಟುಕೊಂಡು ಪ್ರವಚನ ಮಾಡುತ್ತಾ ಬರುತ್ತಿದ್ದಾರೆ. ಈ ವರ್ಷವೂ ಅವರು ಪಟ್ಟಣದ ಚನ್ನಬಸವಾಶ್ರಮದಲ್ಲಿ ಒಂದು ತಿಂಗಳ ಪರ್ಯಂತ ಅಲ್ಲಮ ಪ್ರಭುದೇವರ ವಚನ ಪ್ರವಚನ ಮಾಡುವವರಿದ್ದಾರೆ. ಭೌತಿಕ ಶ್ರೀಮಂತಿಕೆಯ ಕಡೆ ಹೆಜ್ಜೆ ಯಿಡುತ್ತಿರುವ ಈ ದಿನಮಾನಗಳಲ್ಲಿ, ಒಳಗೂ ಹೊರಗೂ ಶುದ್ಧವಾಗಿರುವ ನಿಟ್ಟಿನಲ್ಲಿ ಬಸವತತ್ವ ಪ್ರಸಾರ ಮಾಡುವುದೇ ಪೂಜ್ಯರ ಆಶೆಯ ವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಸುಮಾರು 22 ಸ್ಥಳಗಳಲ್ಲಿ ಬಸವತತ್ವ ನಿಷ್ಠೆಯ ಪ್ರವಚನ ನಡೆಸಲಾಗುವುದು. ಅದಕ್ಕಾಗಿ ಬಸವಕಲ್ಯಾಣ ಅನುಭವ ಮಂಟಪದ ಅಡಿಯಲ್ಲಿ ಪೂಜ್ಯರು ವಿವಿಧ ಸ್ವಾಮೀಜಿಗಳು ಮತ್ತು ತತ್ವನಿಷ್ಠರನ್ನು ನೇಮಿಸಿ ಪ್ರವಚನ ಮಾಡಲು ಅನುವು ಮಾಡಿಕೊಟ್ಟಿದ್ದಾರೆ ಎಂದು ಹೇಳಿದರು.
ಹಿರೇಮಠ ಸಂಸ್ಥಾನದ ಹಿರಿಯ ಸ್ವಾಮೀಜಿ ನಾಡೋಜ ಡಾ| ಬಸವಲಿಂಗ ಪಟ್ಟದ್ದೇವರು ಮಾತನಾಡಿ, ನಮ್ಮಲ್ಲಿ ಎಷ್ಟೆ ಸಂಪತ್ತು ಅಧಿಕಾರ ಇದ್ದರು, ನೆಮ್ಮದಿಯ ಜೀವನ ಇಲ್ಲದಿದ್ದರೆ ಜೀವನ ವ್ಯರ್ಥವಾಗುತ್ತದೆ. ನಮ್ಮ ಜೀವನದಲ್ಲಿ ನೆಮ್ಮದಿ ಬರಬೇಕಾದರೆ ನಾವು ಶರಣರ ಸಂತರ ಅನುಭಾವವನ್ನು ಆಲಿಸಬೇಕು. ಸಾಧ್ಯವಾದಷ್ಟು ಶರಣರ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನ ಮಾಡಬೇಕು. 12ನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ಅನೇಕ ಶರಣರು ನಾನಾ ರಾಜ್ಯಗಳಿಂದ ಬಂದು ಕಲ್ಯಾಣದಲ್ಲಿ ನೆಲಿಸಿದರು. ಅಂತಹ ಶರಣರ ಜೀವನ ಸಾಧನೆಗಳನ್ನು ತಿಳಿದುಕೊಳ್ಳುವ ತಿಳಿದುಕೊಂಡು ಅಂತರಂಗದ ವಿಕಾಸಕ್ಕಾಗಿ ಪ್ರತಿವರ್ಷದಂತೆ ಈ ವರ್ಷವೂ ವಿಶ್ವ ಬಸವಧರ್ಮ ಟ್ರಸ್ಟ್ ಅನುಭವ ಮಂಟಪ ಅಡಿಯಲ್ಲಿ ಶ್ರಾವಣ ಮಾಸದ ನಿಮಿತ್ಯವಾಗಿ ಪೂಜ್ಯರು ಹಾಗೂ ಅನುಭಾವಿ ಪ್ರವಚನ ಕಾರರಿಂದ ಅ.5 ರಿಂದ ಬೀದರ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಹಾಗೂ ತೆಲಂಗಾಣ ರಾಜ್ಯದ ಕಾರಾಮುಂಗಿ, ನಾರಾಯಣಖೇಡ ಗ್ರಾಮದಲ್ಲಿ ಸೇರಿ ಒಟ್ಟು 22 ಗ್ರಾಮಗಳಲ್ಲಿ ಪ್ರವಚನ ಪ್ರಾರಂಭಗೊಳ್ಳಲಿದೆ ಎಂದು ಹೇಳಿದರು. ಹಿರೇಮಠ ಸಂಸ್ಥಾನದ ಕಾರ್ಯದರ್ಶಿ ಶ್ರೀ ಮಹಾಲಿಂಗ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಶ್ರಾವಣ ಪ್ರವಚನ ಸಮಿತಿಯ ಅಧ್ಯಕ್ಷೆ ನಿರ್ಮಲಾ ಚಂದ್ರಕಾಂತ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಾಡೋಜ ಡಾ| ಬಸವಲಿಂಗ ಪಟ್ಟದ್ದೇವರಿಂದ ಪಟ್ಟಣದ ಚನ್ನಬಸವಾಶ್ರಮದಲ್ಲಿ ಪ್ರತಿ ದಿನ ಸಾಯಂಕಾಲ 6 ಗಂಟೆಗೆ ಅಲ್ಲಮಪ್ರಭುದೇವರ ವಚನ ದರ್ಶನ ಪ್ರವಚನ ನಡೆಯುವುದು.
ಅರ್ಚನೆ, ಅರ್ಪಣೆ, ಅನುಭಾವ ಈ ಮೂರು ನಡೆಯುವುದು ಶ್ರಾವಣ ಮಾಸದಲ್ಲಿ, ಹೀಗಾಗಿ ಪ್ರತಿವರ್ಷ ಶ್ರಾವಣ ಪ್ರವಚನಕ್ಕಾಗಿ ಭಾಲ್ಕಿಯನ್ನೇ ಆಯ್ಕೆಮಾಡಿಕೊಂಡಿದ್ದೇವೆ. ವರ್ಷದ ಬೇರೆ ತಿಂಗಳಲ್ಲಿ ಉಳಿದ ಸ್ಥಳಗಳಿಗೆ ಪ್ರಯಾಣ ಬೆಳೆಸಿ ಬಸವತತ್ವ ಪ್ರಚಾರ ಮಾಡುತ್ತಿದ್ದೇವೆ.